ADVERTISEMENT

ಮಲೆನಾಡಿನಲ್ಲಿ ಆರಂಭವಾಗಿದೆ ನಾಟಿ ಸೊಬಗು

ಉತ್ತಮ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 19:31 IST
Last Updated 9 ಜುಲೈ 2020, 19:31 IST
ಬಣಕಲ್ ಸಮೀಪದ ಕೋಡೆಬೈಲ್ ಗ್ರಾಮದಲ್ಲಿ ನಾಟಿ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು.
ಬಣಕಲ್ ಸಮೀಪದ ಕೋಡೆಬೈಲ್ ಗ್ರಾಮದಲ್ಲಿ ನಾಟಿ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು.   

ಕೊಟ್ಟಿಗೆಹಾರ: ಮಲೆನಾಡಿನಲ್ಲಿ ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾದ ಕಾರಣ ಎಲ್ಲಡೆ ನಾಟಿ ಸಂಭ್ರಮ ಮೇಳೈಸುತ್ತಿದೆ.

ಕೋಗಿಲೆ, ಬಿನ್ನಡಿ, ಬಾಳೂರು, ಬಣಕಲ್, ಸಬ್ಲಿ, ಹಳ್ಳಿಕೆರೆ, ತರುವೆ ಮುಂತಾದ ಗ್ರಾಮದಲ್ಲಿ ಕೃಷಿ ಚಟುವಟಿಕೆಗಳು ಉತ್ಸಾಹದಿಂದ ಸಾಗುತ್ತಿವೆ. ಕೋಡೆಬೈಲ್ ಗ್ರಾಮದಲ್ಲಿ ಗುರುವಾರ 20ಕ್ಕೂ ಅಧಿಕ ಮಹಿಳೆಯರು ಶೋಭಾನೆ ಪದಗಳನ್ನು ಹಾಡುತ್ತಾ, ಅಂತರ ಕಾಪಾಡಿ ನಾಟಿ ಮಾಡುವ ದೃಶ್ಯ ಗಮನ ಸೆಳೆಯಿತು. ಪುರುಷರು ಗದ್ದೆಯ ಬದಿ ಕಡಿಯುವುದು, ಹೂಡಿದ ಗದ್ದೆಗೆ ನೇಗಿಲನ್ನು ಎತ್ತುಗಳಿಗೆ ಕಟ್ಟಿ ಮರ ಹೊಡೆಯುವುದು, ಗದ್ದೆಗೆ ಸಸಿ ಮಡಿ ಹಾಕುವ ಕಾರ್ಯದಲ್ಲಿ ನಿರತರಾಗಿದ್ದರು.

ಬಣಕಲ್ ಸಮೀಪದ ಕೋಡೆಬೈಲ್ ಗ್ರಾಮದ ರೈತ ಕೆ.ಬಿ.ಮೋಹನ್‍ಗೌಡ ಅವರು ತಮ್ಮ ಏಳು ಎಕರೆ ಕೃಷಿ ಗದ್ದೆಯನ್ನು ಸೋಮವಾರದಿಂದ ಟ್ರ್ಯಾಕ್ಟರ್ ಮೂಲಕ ಹಸನುಗೊಳಿಸಿ, ಗುರುವಾರದವರೆಗೆ ನಾಟಿ ಕಾರ್ಯ ನಡೆಸಿದರು. ಈ ಭಾಗದಲ್ಲಿ ಕೃಷಿಗೆ ಕಾಡಾನೆ ಕಾಟವಿದ್ದರೂ ಬೇಸಾಯದಿಂದ ಹಿಂದೆ ಸರಿದಿಲ್ಲ.

ADVERTISEMENT

‘ಗ್ರಾಮದಲ್ಲಿ ಕಾಡಾನೆಯ ಕಾಟ ಇರುವ ಕಾರಣಕ್ಕೆ ಕೆಲ ರೈತರು ಗದ್ದೆಗಳನ್ನು ಪಾಳು ಬಿಡುತ್ತಿದ್ದಾರೆ. ಭತ್ತದ ಕೃಷಿಯನ್ನು ಪ್ರೋತ್ಸಾಹಿಸುವ ಕೆಲಸ ಇಂದು ಆಗಬೇಕಿದೆ. ರೈತರೇ ಗದ್ದೆಗಳನ್ನು ಪಾಳು ಬಿಟ್ಟರೇ ಮುಂದೆ ಅನ್ನದ ಬಟ್ಟಲು ಬರಡಾಗಬಹುದು’ ಎಂದು ಎಚ್ಚರಿಸುತ್ತಾರೆ ಮೋಹನ್‍ಗೌಡ.

‘ಕೆಲವು ಕಡೆ ಯಾಂತ್ರೀಕೃತ ಕೃಷಿ ನಾಟಿಗೆ ರೈತರು ಒಲವು ತೋರಿಸುತ್ತಿದ್ದಾರೆ. ಯಾಂತ್ರಿಕೃತ ನಾಟಿಯಿಂದ ಕಾರ್ಮಿಕರ ಕೊರತೆಗೆ ಪರಿಹಾರವೂ ಹೌದು. ಇದರಿಂದ ಇಳುವರಿಯನ್ನೂ ಹೆಚ್ಚು ಪಡೆಯಬಹುದು’ ಎಂದು ಹೇಳುತ್ತಾರೆ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಗಿರೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.