ಪಂಚನಹಳ್ಳಿ (ಕಡೂರು): ಸರ್ವೇ ನಂಬರ್ 113ರಲ್ಲಿ 169.19 ಎಕರೆ ಗೋಮಾಳವಿದ್ದು ಇಲ್ಲಿಯೇ ಗ್ರಾಮಕ್ಕೆ ಸ್ಮಶಾನ ಭೂಮಿ ಗುರುತಿಸಬೇಕು, ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ನಾಡಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಕಾಯಂ ಆಗಿ ಇರುವಂತಹ ವ್ಯವಸ್ಥೆ ಕಲ್ಪಿಸಬೇಕು ಎಂಬ ಒತ್ತಾಯ ಪಂಚನಹಳ್ಳಿ ಪಿಎಂಶ್ರೀ ಶಾಲೆಯ ಮುಂಭಾಗದಲ್ಲಿ ಮಂಗಳವಾರ ಶಾಸಕ ಕೆ.ಎಸ್.ಆನಂದ್ ಅವರ ನೇತೃತ್ವದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಕೇಳಿಬಂತು.
ಸರ್ವೇ ನಂ.113ರಲ್ಲಿ ಇರುವ ಗೋಮಾಳ ಭೂಮಿಯನ್ನು ರೈತರು ಅನಧಿಕೃತವಾಗಿ ಉಳುಮೆ ಮಾಡಿದ್ದಾರೆ. ಇದರಲ್ಲಿ ಈಗಾಗಲೇ ಜಮೀನು ಹೊಂದಿರುವವರೂ ಸೇರಿದ್ದಾರೆ. ಅಂತಹವರಿಂದ ಭೂಮಿ ವಶಕ್ಕೆ ಪಡೆದು 4 ಎಕರೆ ಸ್ಮಶಾನ ಭೂಮಿ ಗುರುತಿಸಿಸಬೇಕು. ಮೂರು ವರ್ಷದಿಂದ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು. ಶಾಸಕರು ತಹಶೀಲ್ದಾರ್ ಪೂರ್ಣಿಮಾ ಅವರಿಗೆ ಫಾರಂ.ನಂ 57 ಅರ್ಜಿಗಳನ್ನು ಪರಿಶೀಲಿಸಿ, ಈಗಾಗಲೇ ಭೂಮಿ ಒಡೆತನ ಹೊಂದಿವರು ಇದ್ದರೆ ಅಂತಹವರಿಂದ ಜಮೀನು ವಶಕ್ಕೆ ಪಡೆದು ಸ್ಮಶಾನ ಭೂಮಿ ಗುರುತಿಸಿ. ಈ ತಿಂಗಳ ಒಳಗೇ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿ. ಕಂದಾಯ ಅಧಿಕಾರಿ ಹಾಗೂ ಗ್ರಾಮ ಆಡಳಿತಾಧಿಕಾರಿ ಸ್ಮಶಾನಕ್ಕೆ ಜಾಗ ಗುರುತಿಸುವ ಹೊಣೆಯನ್ನು ನಿಭಾಯಿಸಬೇಕು ಎಂದು ತಾಕೀತು ಮಾಡಿದರು.
ಇದಕ್ಕೆ ಉತ್ತರಿಸಿದ ತಹಶೀಲ್ದಾರರು ಈಗಾಗಲೇ ಒಂದು ಎಕರೆ ಭೂಮಿಯನ್ನು ಗುರುತಿಸಿದ್ದು ಇಂಡೀಕರಣ ಮಾಡಬೇಕಿದೆ. ಜನಸಂಖ್ಯೆ ಆಧಾರದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಹೊಸದಾಗಿ ಪ್ರಸ್ತಾವ ಸಲ್ಲಿಸಿದರೆ ಪರಿಶೀಲಿಸುವುದಾಗಿ ತಿಳಿಸಿದರು.
ತಿಮ್ಲಾಪುರ ವ್ಯಾಪ್ತಿಯ ಸರ್ವೆ ನಂ.114ರಲ್ಲಿ 65 ಎಕರೆ ಗೋಮಾಳ ಭೂಮಿ ಇದ್ದು ಇಲ್ಲಿ ಒಂದು ಇಂಚು ಭೂಮಿ ಕೂಡಾ ಯಾರೂ ಉಳುಮೆ ಮಾಡಿಲ್ಲ. ಗ್ರಾಮಕ್ಕೆ ಅಗತ್ಯವಿರುವ ಪಂಚಾಯಿತಿ, ಆಸ್ಪತ್ರೆ, ವಸತಿನಿಲಯ, ಶಾಲೆ ಸೇರಿ ಯಾವ ಉದ್ದೇಶಕ್ಕಾದರೂ ಈ ಭೂಮಿಯನ್ನು ಬಳಸಲಿ ಎಂದೇ ಅದನ್ನು ಹಾಗೆಯೇ ಉಳಿಸಿದ್ದೇವೆ. ಆದರೆ ಕಸ ವಿಲೇವಾರಿಗೆ ಎಂದು ಇಲ್ಲಿ ಜಾಗವನ್ನು ಗುರುತಿಸಿದ್ದು ಅದನ್ನು ಕೈಬಿಡುವಂತೆ ತಿಮ್ಲಾಪುರ ದಿನೇಶ್ ಒತ್ತಾಯಿಸಿದರು.
ಕಸ ವಿಲೇವಾರಿಗೆ ಬೇರೆಡೆ ಜಾಗ ಗುರುತಿಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಪ್ರವೀಣ್ ಅವರಿಗೆ ತಿಳಿಸಿದ ಶಾಸಕ ಆನಂದ್, ಜಲಜೀವನ್ ಮಿಷನ್ ಕಾಮಗಾರಿ ಬಗ್ಗೆ ಬಹಳಷ್ಟು ಕಡೆ ದೂರುಗಳು ಬರುತ್ತಿವೆ. ಹಳೇ ಪೈಪ್‌ಗೇ ಸಂಪರ್ಕ ಕಲ್ಪಿಸಿ ಬಿಲ್ ಪಡೆಯಲಾಗಿದೆ. ಗುಂಡಿಗಳನ್ನು ಸರಿಯಾಗಿ ಮುಚ್ಚುವುದಿಲ್ಲ, ನೀರಿನ ಪೂರೈಕೆ ಸಮರ್ಪಕವಾಗಿಲ್ಲ ಎನ್ನುವ ಬಗ್ಗೆ ಇಒ ಅವರು ಸ್ಥಳ ಪರಿಶೀಲನೆ ನಡೆಸಿ ಕ್ರಮ ವಹಿಸುವಂತೆ ಸೂಚಿಸಿದರು.
ಎತ್ತಿನಹೊಳೆ ಯೋಜನೆಯಲ್ಲಿ ನಮ್ಮ ಭಾಗಕ್ಕೆ 0.158 ಟಿಎಂಸಿ ನೀರು ಹಂಚಿಕೆಯಾಗಿದ್ದು ಅದರಲ್ಲಿ ನೀರು ಎತ್ತಿದ ತಕ್ಷಣ ಮೊದಲ ಫಲಾನುಭವಿ ನಮ್ಮ ತಾಲ್ಲೂಕೇ ಆಗಲಿದೆ. ಉಪಕಣಿವೆ ಯೋಜನೆ ಮುಗಿದ ನಂತರ ಎತ್ತಿನಹೊಳೆ ಬಗ್ಗೆ ಕ್ರಮ ವಹಿಸೋಣ ಎಂದು ರೈತರ ಪ್ರಶ್ನೆಗೆ ಉತ್ತರಿಸಿದರು.
ಆಸ್ಪತ್ರೆ ಅನಾಥಾಲಯವಾಗಿದ್ದು ವೈದ್ಯರ ಕೊರತೆ ನೀಗಿಸಿ ಎನ್ನುವ ಅಹವಾಲಿಗೆ ಉತ್ತರಿಸಿದ ಶಾಸಕರು, ಇಡೀ ರಾಜ್ಯದಲ್ಲಿ ವೈದ್ಯರ ನೇಮಕಾತಿ ಸಮಸ್ಯೆ ಇದೆ. ಇಲ್ಲಿ ಆಂಬುಲೆನ್ಸ್ ಇಲ್ಲ ಎನ್ನುವ ದೂರಿಗೆ ಸ್ವತಃ ಉಸ್ತುವಾರಿ ಸಚಿವರೇ ತಮ್ಮದೇ ಟ್ರಸ್ಟ್ ವತಿಯಿಂದ ವ್ಯವಸ್ಥೆ ಮಾಡಿದ್ದಾರೆ. ಅದೇ ರೀತಿ ಕಾಯಂ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಎಸ್.ಸಂತೋಷ್, ಉಪಾಧ್ಯಕ್ಷೆ ಶೀಲಾ, ಸದಸ್ಯರಾದ ಮರುಳಪ್ಪ, ರಂಗನಾಥ್, ರೂಪಾ, ರೇಖಾ, ಪಾಪಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪಂಚನಹಳ್ಳಿ ಪ್ರಸನ್ನ, ರೈತಸಂಘದ ನಿರಂಜನಮೂರ್ತಿ, ಕೆಆರ್‌ಎಸ್ ಪಕ್ಷದ ಮಲ್ಲಿಕಾರ್ಜುನ, ಓಂಕಾರಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಸುಜಾತಾ ಚಂದ್ರಶೇಖರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.
ಪಂಚನಹಳ್ಳಿಯಿಂದ ಬಿಟ್ಟೇನಹಳ್ಳಿಗೆ ಸಂಪರ್ಕ ಕಲ್ಪಿಸುವ ಬಿ.ಖರಾಬು ರಸ್ತೆಯನ್ನು ಸಂಪೂರ್ಣ ಅತಿಕ್ರಮಿಸಲಾಗಿದ್ದು ಗ್ರಾಮಗಳ ಸಂಪರ್ಕಕ್ಕೆ ಅಡಚಣೆಯಾಗುತ್ತಿದೆ. ಇದು ಹಲವಾರು ವರ್ಷಗಳ ಸಮಸ್ಯೆಯಾಗಿದ್ದು ಅಧಿಕಾರಿಗಳು ಬಗೆ ಹರಿಸಲು ಏಕೆ ಮನಸ್ಸು ಮಾಡುತ್ತಿಲ್ಲ ಎಂದು ಸಾಗರ್ ಎಂಬ ಯುವಕ ಏರು ದನಿಯಲ್ಲಿ ತಹಶೀಲ್ದಾರರಿಗೆ ಪ್ರಶ್ನಿಸಿದರು. ಶಾಸಕ ಮತ್ತು ತಹಶೀಲ್ದಾರ್ ತಿಳಿಹೇಳಲು ಪ್ರಯತ್ನಿಸಿದರೂ ಸಮಾಧಾನಗೊಳ್ಳದ ಯುವಕನ ನಡೆಯನ್ನು ಆಕ್ಷೇಪಿಸಿ ಪೊಲೀಸರನ್ನು ಕರೆಸಿ ಆತನನ್ನು ಹೊರ ಕಳುಹಿಸಿದರು. ಬಳಿಕ ಶಾಸಕ ಆನಂದ್ ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ತಹಶೀಲ್ದಾರರಿಗೆ ಅಸಮಾಧಾನದಿಂದಲೇ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.