
ಅಜ್ಜಂಪುರ: ‘ವೀರಶೈವ ಧರ್ಮದ ಪಂಚ ಪೀಠಗಳ ಒಕ್ಕೂಟ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸುವ ಅಗತ್ಯವಿದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬುಕ್ಕಾಂಬುಧಿ ತಪೋಕ್ಷೇತ್ರದಲ್ಲಿ ಈಚೆಗೆ ಲಿಂಗೈಕ್ಯ ಉಜ್ಜಯಿನಿ ಸಿದ್ಧಲಿಂಗ ಶಿವಾಚಾರ್ಯರ 90ನೇ ವರ್ಷದ ಸ್ಮರಣೋತ್ಸವ ಹಾಗೂ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರ 70ನೇ ವರ್ಷದ ಜನ್ಮವರ್ಧಂತಿ ಮಹೋತ್ಸವ ಪ್ರಯುಕ್ತ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ, ಅವರು ಮಾತನಾಡಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದು, ಈಚೆಗೆ ನಿಧನರಾದ ಶ್ಯಾಮನೂರು ಶಿವಶಂಕರಪ್ಪ ಶಿಕ್ಷಣ, ರಾಜಕೀಯ, ಸಮಾಜ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸರ್ಕಾರ, ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದರು.
ರಂಭಾಪುರಿ ಪೀಠ ನೀಡುವ ರೇಣುಕಾಚಾರ್ಯ ಪ್ರಶಸ್ತಿಯನ್ನು ಅಮೆರಿಕಾದಲ್ಲಿ ನೆಲೆಸಿರುವ ದಾವಣಗೆರೆ ಮೂಲಕ ಲೇಖಕ ರವಿ ಹಂಜ್ ಅವರಿಗೆ ರೇಣುಕಾಚಾರ್ಯ ಜಯಂತಿಯಂದು ಪ್ರಧಾನ ಮಾಡಲಾಗುವುದು ಎಂದು ಅವರು ಪ್ರಕಟಿಸಿದರು.
ಮುಂದಿನ ವರ್ಷದಿಂದ ಲಿಂಗೈಕ್ಯ ಉಜ್ಜಯಿನಿ ಸಿದ್ಧಲಿಂಗ ಶಿವಾಚಾರ್ಯರ ಪುಣ್ಯಸ್ಮರಣೆ ಪ್ರಯುಕ್ತ ಓರ್ವ ಕ್ರಿಯಾಶೀಲ ಶಿವಾಚಾರ್ಯರಿಗೆ ಲಿಂಗೈಕ್ಯ ಶಿವಾಚಾರ್ಯರ ಹೆಸರಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಕಾಶಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಲ್ಲಿನ ತಪೋಬೆಟ್ಟದಲ್ಲಿ ತಪಸ್ಸು ಮಾಡಿ, ಜನರ ಸಂಕಷ್ಟ ಪರಿಹರಿಸಿದ ಲಿಂಗೈಕ್ಯ ಉಜ್ಜಯಿನಿ ಸಿದ್ಧಲಿಂಗ ಶಿವಾಚಾರ್ಯರ ಪುಣ್ಯಸ್ಮರಣೆ ನಡೆಯುತ್ತಿರುವುದು ಹರ್ಷ ತಂದಿದೆ ಎಂದರು.
ಲಿಂಗೈಕ್ಯ ಶಿವಾಚಾರ್ಯರ ಶ್ರಮ, ಸಾಧನೆ ಹಾಗೂ ಆದರ್ಶ ದಾರಿ ಸಾಧಕರಿಗೆ ದಿಕ್ಸೂಚಿಯಾಗಿದೆ ಎಂದು ಉಜ್ಜಯಿನಿ ಸಿದ್ಧಲಿಂಗ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಇದೇ ವೇಳೆ ಲೇಖಕ ರವಿ ಹಂಜ್ ‘ಪಂಚಾಚಾರ್ಯ ವಾಣಿ’ ಗ್ರಂಥ ಹಾಗೂ ಅಖಿಲ ಭಾರತ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಸಿಂದಗಿ ಪ್ರಭು ಸಾರಂಗದೇವ ಶಿವಾಚಾರ್ಯರು ‘ರಂಭಾಪುರಿ ಬೆಳಗು’ ಪತ್ರಿಕೆ ಬಿಡುಗಡೆಗೊಳಿಸಿದರು.
ಮಳಲಿ ಮಠದ ನಾಗಭೂಷಣ ಶಿವಾಚಾರ್ಯರು, ಹಳೇಹುಬ್ಬಳ್ಳಿ ಪಂಚಗೃಹ ಹಿರೇಮಠದ ರೇಣುಕ ಪ್ರಸಾದ್ ಗುರುರಕ್ಷೆ ನೀಡಲಾಯಿತು. ಎಡೆಯೂರು ರೇಣುಕ ಶಿವಾಚಾರ್ಯರು, ವಿರೂಪಾಕ್ಷಲಿಂಗ ಶಿವಾಚಾರ್ಯರು, ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಮಲಯ ಶಾಂತಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಮಹಾಂತಲಿಂಗ ಶಿವಾಚಾರ್ಯರು, ಸಿದ್ಧಲಿಂಗ ಶಿವಾಚಾರ್ಯರು, ವಾಮದೇವ ಮಹಾಂತ ಶಿವಾಚಾರ್ಯರು, ರುದ್ರಮುನಿ ಶಿವಾಚಾರ್ಯರು, ನಂದೀಶ್ವರ ಶಿವಾಚಾರ್ಯರು, ಗುರುಮೂರ್ತಿ ಶಿವಾಚಾರ್ಯರು, ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕೋಣಂದೂರ ಪ್ರಕಾಶ, ಎಚ್.ಎಂ. ಲೋಕೇಶ್, ಶಿವಸ್ವಾಮಿ ಇದ್ದರು.
ಶಾಂಭವಿ ಮಹಿಳಾ ಮಂಡಳ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟ್ ಹಾಗೂ ಭಕ್ತರು ಕಾರ್ಯಕ್ರಮ ಆಯೋಜಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.