ಕಳಸ (ಚಿಕ್ಕಮಗಳೂರು): ಪಟ್ಟಣದ ಕೋಳಿ ಮಾಂಸದ ಅಂಗಡಿಗಳಲ್ಲಿ ಹೆಚ್ಚಿನ ದರಕ್ಕೆ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ, ಗ್ರಾಮ ಪಂಚಾಯಿತಿ ವತಿಯಿಂದಲೇ ಪ್ರತಿದಿನ ಮಾಂಸದ ದರ ನಿಗದಿಪಡಿಸುವ ಪರಿಪಾಠ ಆರಂಭಗೊಂಡಿದೆ.
ಪಟ್ಟಣದ ಕೋಳಿ ಮಾಂಸದ ಅಂಗಡಿಗಳಲ್ಲಿ ಸುತ್ತಲಿನ ಊರುಗಳಿಗಿಂತ ಹೆಚ್ಚಿನ ಬೆಲೆಗೆ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಅನೇಕ ದಿನಗಳಿಂದ ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಮ ಪಂಚಾಯಿತಿ, ಎಲ್ಲ ಕೋಳಿ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿ, ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ತಾಕೀತು ಮಾಡಿದೆ.
‘ದಿನಪತ್ರಿಕೆಯಲ್ಲಿ ಪ್ರಕಟವಾಗುವ ದರ ಅನುಸರಿಸಿ ಪ್ರತಿದಿನವೂ ಕೋಳಿ ಮಾಂಸ ಮಾರಾಟ ಮಾಡಬೇಕು. ತಪ್ಪಿದರೆ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಮಾಲೀಕರಿಗೆ ಎಚ್ಚರಿಕೆ ನೀಡಿದೆ.
ಪ್ರತಿ ದಿನವೂ ಪರಿಷ್ಕೃತ ದರಪಟ್ಟಿಯನ್ನು ಪಂಚಾಯಿತಿ ಸಿಬ್ಬಂದಿ ಪಟ್ಟಣದ ಕೋಳಿ ಮಾಂಸದ ಅಂಗಡಿಗಳ ಮುಂಭಾಗದಲ್ಲಿ ಬರೆಯುತ್ತಿದ್ದಾರೆ. ಅಂಗಡಿ ಮಾಲೀಕರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಮೊತ್ತ ಪಡೆದರೆ ಪಂಚಾಯಿತಿಗೆ ದೂರು ನೀಡುವಂತೆಯೂ ಸಾರ್ವಜನಿಕರಿಗೆ ಕೋರಲಾಗಿದೆ.
ಪಟ್ಟಣದಲ್ಲಿ ಕೋಳಿ ಮಾಂಸ ಮಾರಾಟದ ಎಂಟು ಅಂಗಡಿಗಳಿದ್ದು, ಎಲ್ಲರಿಗೂ ಒಂದೇ ಸ್ಥಳದಲ್ಲಿ ಮಾರಾಟಕ್ಕೆ ಅನುಕೂಲವಾಗುವಂತೆ ಪಂಚಾಯಿತಿ ವತಿಯಿಂದಲೇ ಮಳಿಗೆಗಳನ್ನು ನಿರ್ಮಿಸಿಕೊಡಲಾಗಿದೆ. ಮಳಿಗೆಗಳನ್ನು ವ್ಯಾಪಾರಿಗಳಿಗೆ ಹಂಚಿಕೆ ಮಾಡುವಾಗಲೇ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮಾತ್ರ ಮಾಂಸ ಮಾರಾಟ ಮಾಡಬೇಕು, ಹೆಚ್ಚಿನ ದರ ವಿಧಿಸುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ. ಈ ನಿಯಮ ಉಲ್ಲಂಘನೆ ಆಗಿದ್ದರಿಂದ ಕ್ರಮ ಕೈಗೊಳ್ಳಲಾಗಿದೆ ಎಂಬುದು ಗ್ರಾಮ ಪಂಚಾಯಿತಿ ಮೂಲಗಳ ಮಾಹಿತಿ.
ವ್ಯಾಪಾರಿಗಳ ಅಸಮಾಧಾನ: ಗ್ರಾಮ ಪಂಚಾಯಿತಿಯ ಕ್ರಮಕ್ಕೆ ಕೋಳಿ ಅಂಗಡಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ದಿನಪತ್ರಿಕೆಯಲ್ಲಿ ಪ್ರಕಟವಾಗುವ ಬೆಲೆಗೆ ಮಾಂಸ ಮಾರಾಟ ಮಾಡಿದರೆ ನಮಗೆ ನಷ್ಟವಾಗುತ್ತದೆ. ಕೋಳಿ ದರ ಹೆಚ್ಚಾಗಿದೆ. ಮಳಿಗೆಗಳ ಬಾಡಿಗೆಯೂ ದುಬಾರಿ ಇದೆ. ಹಾಗಾಗಿ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲು ಅವಕಾಶ ನೀಡಬೇಕು’ ಎಂದು ಕೋರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.