ADVERTISEMENT

ಪಂಜಾಬ್ ಸರ್ಕಾರ ವಜಾಕ್ಕೆ ಆಗ್ರಹ

ಕೊಪ್ಪ: ಮಾನವ ಸರಪಣಿ ನಿರ್ಮಿಸಿ ಬಿಜೆಪಿಯಿಂದ ಸಾಂಕೇತಿಕ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 6:21 IST
Last Updated 8 ಜನವರಿ 2022, 6:21 IST
ಪಂಜಾಬ್ ರಾಜ್ಯ ಸರ್ಕಾರ ವಜಾಗೊಳಿಸಲು ಆಗ್ರಹಿಸಿ ಕೊಪ್ಪ ಮಂಡಲ ಬಿಜೆಪಿ ಅಧ್ಯಕ್ಷ ಅದ್ದಡ ಸತೀಶ್ ನೇತೃತ್ವದಲ್ಲಿ ತಹಶೀಲ್ದಾರ್ ಎಚ್.ಎಸ್.ಪರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪಂಜಾಬ್ ರಾಜ್ಯ ಸರ್ಕಾರ ವಜಾಗೊಳಿಸಲು ಆಗ್ರಹಿಸಿ ಕೊಪ್ಪ ಮಂಡಲ ಬಿಜೆಪಿ ಅಧ್ಯಕ್ಷ ಅದ್ದಡ ಸತೀಶ್ ನೇತೃತ್ವದಲ್ಲಿ ತಹಶೀಲ್ದಾರ್ ಎಚ್.ಎಸ್.ಪರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.   

ಕೊಪ್ಪ: ‘ಪ್ರಧಾನಮಂತ್ರಿ ಅವರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲು ವಿಫಲವಾದ ಪಂಜಾಬ್ ರಾಜ್ಯ ಸರ್ಕಾರವನ್ನು ಕೂಡಲೇ ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು’ ಎಂದು ಕೊಪ್ಪ ಬಿಜೆಪಿ ಮಂಡಲ ಅಧ್ಯಕ್ಷ ಅದ್ದಡ ಸತೀಶ್ ಆಗ್ರಹಿಸಿದರು.

ಇಲ್ಲಿನ ಬಸ್ ನಿಲ್ದಾಣದ ಆವರಣದಲ್ಲಿ ಬಿಜೆಪಿ ವತಿಯಿಂದ ಶುಕ್ರವಾರ ಮಾನವ ಸರಪಣಿ ನಿರ್ಮಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.

‘ಪ್ರಧಾನಿಯವರು ಫಿರೋಜ್‌ಪುರಕ್ಕೆ ಭೇಟಿ ನೀಡಿದ್ದ ವೇಳೆ ಪಂಜಾಬ್ ಸರ್ಕಾರ ಭದ್ರತೆ ವಿಷಯದಲ್ಲಿ ನಿರ್ಲಕ್ಷ್ಯ ತೋರಿದೆ. ರೈತರ ಹೆಸರಿನಲ್ಲಿ ‘ಖಲಿಸ್ತಾನ್’ ಉಗ್ರರನ್ನು ಅದು ಪ್ರತಿಭಟನೆ ನಡೆಸುವಂತೆ ಮಾಡಿ, ಪ್ರಧಾನಿ ಅವರ ಹತ್ಯೆಗೆ ಅಲ್ಲಿನ ಸರ್ಕಾರ ಸಂಚು ರೂಪಿಸಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ’ ಎಂದು ಆರೋಪಿಸಿದರು.

ADVERTISEMENT

ಪಂಚಾಯತ್ ರಾಜ್ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಎಸ್.ಎನ್.ರಾಮಸ್ವಾಮಿ ಮಾತನಾಡಿ, ‘ಭದ್ರತಾ ಲೋಪವೆಸಗಿ ಪ್ರಧಾನಿಯವರ ಹತ್ಯೆಗೆ ಪಂಜಾಬ್ ಸರ್ಕಾರ ಸಂಚು ರೂಪಿಸಿತ್ತು ಎಂಬುದರಲ್ಲಿ ಎರಡು ಮಾತಿಲ್ಲ’ ಎಂದು ಆರೋಪಿಸಿದರು.

ಪಕ್ಷದ ಮುಖಂಡ ಜೆ.ಪುಣ್ಯಪಾಲ್ ಮಾತನಾಡಿ, ‘ಫಿರೋಜ್‌ಪುರಕ್ಕೆ ಭೇಟಿ ನೀಡಿದ್ದ ಪ್ರಧಾನಿಯವರು ರಸ್ತೆಯಲ್ಲಿ 20 ನಿಮಿಷಗಳ ಕಾಲ ಕಾಯುವಂತಾಯಿತು. ಪ್ರಧಾನಿಯವರ ಹತ್ಯೆಗೆ ವ್ಯವಸ್ಥಿತ ಸಂಚು ರೂಪಿಸಲಾಗಿತ್ತು. ಯಾವುದೇ ಪ್ರಧಾನಿ ಇದ್ದಾಗಲೂ ರಾಜ್ಯ ಸರ್ಕಾರಗಳು ಈ ರೀತಿ ನಡೆಸಿಕೊಳ್ಳಬಾರದು. ಪಂಜಾಬ್ ಸರ್ಕಾರವನ್ನು ವಜಾ ಮಾಡಬೇಕೆಂಬುದು ದೇಶದ ನಾಗರಿಕರ ಹಕ್ಕೊತ್ತಾಯ’ ಎಂದು ಒತ್ತಾಯಿಸಿದರು.

ಪ್ರತಿಭಟನೆ ಬಳಿಕ ತಾಲ್ಲೂಕು ಆಡಳಿತ ಸೌಧಕ್ಕೆ ತೆರಳಿದ ಮುಖಂಡರು ಪಂಜಾಬ್ ಸರ್ಕಾರ ವಜಾಗೊಳಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಎಚ್.ಎಸ್.ಪರಮೇಶ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಇದೇ ಸಂದರ್ಭ, ‘ಅಕ್ರಮ–ಸಕ್ರಮ ಮಂಜೂರಾತಿ ಕೋರಿರುವ ಅರ್ಜಿಗಳ ಅರಣ್ಯ ಮತ್ತು ಕಂದಾಯ ಇಲಾಖೆಗಳ ಸರ್ವೇ ಕಾರ್ಯಕ್ಕೆ ಸಲ್ಲಿಸಿರುವ ಕಡತಗಳನ್ನು ಹಿಂಪಡೆಯುವಂತೆ ಕೋರಿ’ ಇನ್ನೊಂದು ಮನವಿ ಪತ್ರ ಸಲ್ಲಿಸಲಾಯಿತು.

ಪಕ್ಷದ ಮುಖಂಡರಾದ ಡಾ. ಜಿ.ಎಸ್.ಮಹಾಬಲ, ಎಚ್.ಕೆ.ದಿನೇಶ್ ಹೊಸೂರು, ಎಂ.ಕೆ.ಕಿರಣ್, ಸುಧಾಕರ್, ಅನಸೂಯ ಕೃಷ್ಣಮೂರ್ತಿ, ಅಬ್ದುಲ್ ಹಮೀದ್, ಅರುಣ್ ಶಿವಪುರ, ಅಜಿತ್ ಬಿಕ್ಕಳಿ, ಅಮ್ಮಡಿ ವಿಜೇಂದ್ರ, ಶರತ್ ಕಾರಂಗಿ, ರೇವಂತ್, ಭಾಸ್ಕರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಜಾತಾ, ಸದಸ್ಯರಾದ ಇದಿನಬ್ಬ, ಗಾಯತ್ರಿ, ಸುಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.