ರಂಭಾಪುರಿ ಪೀಠ (ಬಾಳೆಹೊನ್ನೂರು): ‘ಆತುರದ ನಿರ್ಧಾರ ಮನುಷ್ಯನನ್ನು ಬೆಂಕಿಗೆ ತಳ್ಳುತ್ತದೆ. ಅರಿತು ಮಾಡುವ ನಿರ್ಧಾರ ಬದುಕಿಗೆ ಬೆಳಕನ್ನು ತೋರುತ್ತದೆ. ನಂಬಿಕೆ ಮತ್ತು ತಾಳ್ಮೆ ಇದ್ದರೆ ಅದರ ಫಲ ಮುಂದೊಂದು ದಿನ ಸಿಗುತ್ತದೆ. ಆಧುನಿಕ ಯುಗದಲ್ಲಿ ಹೆಚ್ಚು ನಾಗರಿಕ ಸೌಲಭ್ಯ ಸಂಪನ್ಮೂಲ ಹೊಂದಿದ್ದರೂ ನೆಮ್ಮದಿಯಿಲ್ಲ. ಮನುಷ್ಯನಲ್ಲಿ ಮಾನವೀಯತೆ ಅಂತಃಕರಣ ಬೆಳೆಯಬೇಕು’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಗುರುವಾರ ರಂಭಾಪುರಿ ಪೀಠದಲ್ಲಿ ಶ್ರಾವಣ ಪುರಾಣ ಪ್ರವಚನ ಸಮಾರಂಭದ ಸಾನ್ನಿಧ್ಯ ವಹಿಸಿ, ಅವರು ಆಶೀರ್ವಚನ ನೀಡಿದರು.
ವಿಜ್ಞಾನ ತಂತ್ರಜ್ಞಾನಗಳ ತೊಳಲಾಟದಲ್ಲಿ ಧರ್ಮ ಸಂಸ್ಕೃತಿ ಮತ್ತು ಆದರ್ಶಗಳು ನಾಶಗೊಳ್ಳಬಾರದು. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ಸಂಪಾದಿಸಿಕೊಂಡು ಬಾಳುವುದೇ ನಿಜವಾದ ಧರ್ಮ ಎಂದು ರೇಣುಕಾಚಾರ್ಯರು ಬೋಧಿಸಿದ್ದಾರೆ. ಕಷ್ಟಗಳ ನಡುವೆ ಮನುಷ್ಯ ಬಾಳಿ ಬದುಕಿದರೂ ಆದರ್ಶಗಳನ್ನು ಎಂದಿಗೂ ಬಿಡಬಾರದು. ಚಿಂತೆಯಿಂದ ಬದುಕು ದುರ್ಬಲ. ಆದರೆ ಶ್ರಮ ಬದುಕಿನಿಂದ ಜೀವನ ಸಮೃದ್ಧಗೊಳ್ಳುತ್ತದೆ ಎಂದರು.
ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ಮಾತನಾಡಿ, ಬಾಳಿನ ಭಾಗ್ಯೋದಯಕ್ಕೆ ಆದರ್ಶ ಮೌಲ್ಯಗಳ ಪರಿಪಾಲನೆ ಬೇಕು. ಮನದ ಕನ್ನಡಿಯ ಮೇಲೆ ದೂಳು ಮುಸುಕಿದೆ. ಅಂಟಿದ ದೂಳು ಜಾಡಿಸಿ ಪರಿಶುದ್ಧಗೊಳಿಸಲು ಗುರುವಿನ ಜ್ಞಾನ ಬೋಧಾಮೃತ ಅವಶ್ಯಕ. ಸುಂದರವಾದ ಉಡುಗೆ ತೊಡುಗೆಗಳಿಂದ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಬಹುದೇ ವಿನಾ ಬದುಕನ್ನು ಬದಲಿಸಿಕೊಳ್ಳು ಸಾಧ್ಯವಿಲ್ಲ. ಸಂಸ್ಕಾರ ಮತ್ತು ಸಚ್ಚಾರಿತ್ರ್ಯದಿಂದ ಮಾತ್ರ ಬದುಕನ್ನು ಶ್ರೀಮಂತಗೊಳಿಸಲು ಸಾಧ್ಯ ಎಂದರು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯ, ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯ, ಗುರುಕುಲದ ಕುಲಪತಿ ಸಿದ್ಧಲಿಂಗಯ್ಯ ಹಿರೇಮಠ, ರೇವತಗಾಂವ ವಿಶ್ವನಾಥ ದೇವರು, ದಾವಣಗೆರೆಯ ಮಠದ ಶಿವಾನಂದಯ್ಯ, ಸುಲೋಚನಾ ಮಠದ, ವೀರೇಶ ಪಾಟೀಲ, ಶಾಂಭವಿ ಮಹಿಳಾ ಮಂಡಳದ ಸದಸ್ಯರು, ವಿಠಲಾಪುರ ಹಿರೇಮಠದ ಗಂಗಾಧರಸ್ವಾಮಿ, ಶಿಕ್ಷಕ ವೀರೇಶ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.