ADVERTISEMENT

ಲಸಿಕೆ ಪಡೆಯಲು ಜನರ ದೌಡು

ಹೆಸರು ನೋಂದಾಯಿಸಿದವರಿಗೆ ಮೊಬೈಲ್ ಸಂದೇಶ ರವಾನೆ: ವೈದ್ಯಾಧಿಕಾರಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 6:11 IST
Last Updated 29 ಏಪ್ರಿಲ್ 2021, 6:11 IST
ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಲಸಿಕೆ ಪಡೆಯಲು ನೋಂದಣಿ ಮಾಡಲು ಮತ್ತು ಗಂಟಲು ದ್ರವ ಮಾದರಿ ನೀಡಲು ಜನರು ಸರದಿಯಲ್ಲಿ ನಿಂತಿದ್ದರು.
ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಲಸಿಕೆ ಪಡೆಯಲು ನೋಂದಣಿ ಮಾಡಲು ಮತ್ತು ಗಂಟಲು ದ್ರವ ಮಾದರಿ ನೀಡಲು ಜನರು ಸರದಿಯಲ್ಲಿ ನಿಂತಿದ್ದರು.   

ಬೀರೂರು: ಕೋವಿಡ್ ಸೋಂಕಿನಿಂದ ಪಾರಾಗುವ ಭಾಗವಾಗಿ ಸರ್ಕಾರ ಉಚಿತ ಲಸಿಕೆ ನೀಡಲು ಮುಂದಾದರೂ ಅದರ ಸದುಪಯೋಗ ಪಡೆಯುವಲ್ಲಿ ನಿರ್ಲಕ್ಷ್ಯ ವಹಿಸಿದ್ದ ಜನರು, ಎರಡನೇ ಅಲೆ ಆರಂಭಗೊಂಡ ಬಳಿಕ ಆಸ್ಪತ್ರೆಯೆಡೆಗೆ ಹೋಗಲು ಆರಂಭಿಸಿದ್ದಾರೆ.

ಆದರೆ ಚುಚ್ಚುಮದ್ದು ನೀಡಲು ಆರಂಭಗೊಂಡು ದಿನಗಳು ಕಳೆದರೂ ಬೀರೂರು ಪಟ್ಟಣ ವ್ಯಾಪ್ತಿಯಲ್ಲಿ ಈವರೆಗೆ ಸುಮಾರು 2,400 ಮಂದಿಯಷ್ಟೇ ಲಸಿಕೆ ಪಡೆದಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ಮೊದಲ ಹಂತದಲ್ಲಿ ಜನವರಿಯಿಂದ 96 ವೈಲ್ ( ಒಂದು ವೈಲ್ = 10 ಡೋಸ್) ಕೋವಿಶೀಲ್ಡ್ ಲಸಿಕೆ ಪೂರೈಸಲಾಗಿತ್ತು. ಎರಡನೇ ಹಂತದಲ್ಲಿ ಈವರೆಗೆ 144 ವೈಲ್‌ ಪೂರೈಸಲಾಗಿದ್ದು, ಅದು ಸಂಪೂರ್ಣ ಖಾಲಿಯಾಗಿದೆ.

ಮಾರ್ಚ್ 26ರಿಂದ ಕೋವ್ಯಾಕ್ಸಿನ್ 960 ಡೋಸ್ ಪೂರೈಕೆಯಾಗಿದ್ದು, ಎರಡನೇ ಬಾರಿ ಪಡೆದುಕೊಂಡವರೂ ಸೇರಿ ಈವರೆಗೆ 520 ಲಸಿಕೆ ಬಳಕೆಯಾಗಿದೆ. ಮೊದಲ ಲಸಿಕೆ ಹಾಕಿಸಿಕೊಂಡವರಲ್ಲಿ ಅನೇಕರು ಎರಡನೇ ಹಂತಕ್ಕೆ ಇನ್ನೂ ಬಂದಿಲ್ಲದ ಕಾರಣ 440 ಡೋಸ್ ಉಳಿಕೆಯಾಗಿದೆ.

ADVERTISEMENT

‘ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಜನರಲ್ಲಿ ಗೊಂದಲ ಉಂಟಾಗಬಾರದು ಎನ್ನುವ ಕಾರಣಕ್ಕೆ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಅನ್ನು ಎರಡು ಪ್ರತ್ಯೇಕ ವಾರ್ಡ್ ರಚಿಸಿ ನೀಡಲಾಗುತ್ತಿದೆ. ಕೋವ್ಯಾಕ್ಸಿನ್‍ಗೆ 28 ದಿನದ ಬಳಿಕ, ಕೋವಿಶೀಲ್ಡ್‍ ಅನ್ನು 42 ದಿನದ ಬಳಿಕ ಎರಡನೇ ಡೋಸ್ ನೀಡಲಾಗುತ್ತಿದೆ’ ಎನ್ನುತ್ತಾರೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕೆಂಚೇಗೌಡ.

ಮೊದಲ ಹಂತದಲ್ಲಿ ಯಾವ ಚುಚ್ಚುಮದ್ದು ನೀಡಲಾಗಿದೆಯೋ ಎರಡನೇ ಅವಧಿಗೂ ಅದನ್ನೇ ನೀಡಬೇಕಿದೆ. ಲಸಿಕೆ ಪಡೆಯುವವರು ನಮೂದಿಸಿಕೊಂಡ ಸಂದರ್ಭದಲ್ಲಿಯೇ ಅವರ ಪುಸ್ತಕದಲ್ಲಿ ಅವಧಿಯನ್ನು ನಿಗದಿಪಡಿಸಲಾಗುತ್ತದೆ. ಅವರ ಮೊಬೈಲ್‍ಗೆ ಸಂದೇಶ ಕಳಿಸಲಾಗುತ್ತದೆ. ಬೀರೂರು ಪಟ್ಟಣದವರು ಮಾತ್ರವಲ್ಲದೇ ಸುತ್ತಮುತ್ತಲ ಗ್ರಾಮಸ್ಥರೂ ಬಂದು ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆ ಪಡೆದ 45 ವರ್ಷ ಮೇಲ್ಪಟ್ಟವರು ಅಕ್ಕಪಕ್ಕದವರು, ಸಂಬಂಧಿಕರಿಗೆ ಲಸಿಕೆ ಪಡೆಯಲು ಪ್ರೋತ್ಸಾಹಿಸುವ ಜತೆಗೆ ಸರ್ಕಾರ ರೂಪಿಸಿರುವ ನಿಯಮಗಳನ್ನು ಪಾಲಿಸಿ ಕೋವಿಡ್ ಹರಡುವಿಕೆಗೆ ತಡೆ ಒಡ್ಡಬೇಕು’ ಎಂದು ತಿಳಿಸಿದರು. ‘ಮೂಲಗಳ ಪ್ರಕಾರ ಕೋವಿಶೀಲ್ಡ್ ಲಸಿಕೆ ನಿಯಮಿತವಾಗಿ ಪೂರೈಕೆಯಾಗುತ್ತಿಲ್ಲ. ಒಂದು ದಿನ 15 ವೈಲ್ ಬಂದರೆ ದೊಡ್ಡದು, ಅದು ಆಯಾದಿನವೇ ಖಾಲಿಯಾಗುತ್ತಿದೆ. ಜಾಗೃತಿಯ ಬಳಿಕ ಜನರು ಸರತಿಯಲ್ಲಿ ನಿಂತು ಲಸಿಕೆ ಪಡೆಯಲು ಮುಂದಾಗುವ ಸನ್ನಿವೇಶಕ್ಕೆ ಆರೋಗ್ಯ ಇಲಾಖೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು’ ಎನ್ನುತ್ತಾರೆ ಹಿರಿಯ ನಾಗರಿಕ ಬಿ.ವಿ.ಮಹೇಶ್ವರಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.