ADVERTISEMENT

ಕಳಸದ ಪ್ರೀತಿ; ಬಣಕಲ್ ಮುನಿಸು

ಕಳಸ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸೇರಿಸಲು ಆಗ್ರಹ

ರವಿ ಕೆಳಂಗಡಿ
Published 18 ಫೆಬ್ರುವರಿ 2021, 19:30 IST
Last Updated 18 ಫೆಬ್ರುವರಿ 2021, 19:30 IST
ಕಳಸ ಸಮೀಪದ ಹಿರೇಬೈಲು ಗ್ರಾಮವು ಕಳಸದಿಂದ 10 ಕಿ.ಮೀ ದೂರದಲ್ಲಿ ಇದ್ದರೂ 40 ಕಿ.ಮೀ ದೂರದ ಬಣಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸೇರಿದೆ.
ಕಳಸ ಸಮೀಪದ ಹಿರೇಬೈಲು ಗ್ರಾಮವು ಕಳಸದಿಂದ 10 ಕಿ.ಮೀ ದೂರದಲ್ಲಿ ಇದ್ದರೂ 40 ಕಿ.ಮೀ ದೂರದ ಬಣಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸೇರಿದೆ.   

ಕಳಸ: ಇಲ್ಲಿಗೆ ಸಮೀಪದ ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶವನ್ನು ಬಣಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಹೊರತುಪಡಿಸಿ ಕಳಸ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸೇರಿಸಬೇಕು ಎಂಬ ಬಲವಾದ ಆಗ್ರಹ ಕೇಳಿಬಂದಿದೆ.

‘8-10 ಕಿ.ಮೀ ದೂರದ ಕಳಸ ಜಿಲ್ಲಾ ಪಂಚಾಯಿತಿ ಕ್ಷೇತ್ರ ಬಿಟ್ಟು 40 ಕಿ.ಮೀ ದೂರದ ಬಣಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಮಸರಣಿಗೆಯನ್ನು ಸೇರಿಸಿರುವುದರಿಂದ ಅಭಿವೃದ್ಧಿಗೆ ತೊಡಕಾಗಿದೆ. ಈ ಅವೈಜ್ಞಾನಿಕ ಕ್ರಮದಿಂದ ನಮಗೆ ಜನಪ್ರತಿನಿಧಿ
ಗಳು ಕೈಗೆ ಸಿಗದಂತಾಗಿದ್ದಾರೆ’ ಎಂದು ಸ್ಥಳೀಯರು ಗಮನ ಸೆಳೆದಿದ್ದಾರೆ.

ಮರಸಣಿಗೆ ತಾಲ್ಲೂಕು ಪಂಚಾಯಿತಿ ಕ್ಷೇತ್ರ ಕೂಡ ದೂರದ ಬಾಳೂರು, ಸುಂಕಸಾಲೆ, ಜಾವಳಿ ಗ್ರಾಮಗಳ ಜೊತೆಗೆ ವಿಲೀನ ಆಗಿದೆ. ಇದರಿಂದಲೂ ಕೂಡ ಮರಸಣಿಗೆ ಅಭಿವೃದ್ಧಿಗೆ ತೊಡಕಾಗಿದೆ ಎಂಬ ಆರೋಪ ಬಲವಾಗಿದೆ. ಈ ಹಿಂದೆ ಮರಸಣಿಗೆ ಪಂಚಾಯಿತಿಯು ಇಡಕಿಣಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ ಒಳಪಟ್ಟಿತ್ತು.

ADVERTISEMENT

ಕಳಸ ತಾಲ್ಲೂಕು ಘೋಷಣೆಯ ಅಂತಿಮ ಅಧಿಸೂಚನೆಗೆ ಕ್ಷಣಗಣನೆ ನಡೆದಿದೆ. ಇಂತಹ ಸಂದರ್ಭದಲ್ಲಿ ಪ್ರಸ್ತಾಪಿತ ಕಳಸ ತಾಲ್ಲೂಕಿನ ಪ್ರದೇಶವಾದ ಮರಸಣಿಗೆಯನ್ನು ಮೂಡಿಗೆರೆ ತಾಲ್ಲೂಕಿನ ಬಾಳೂರು ಮತ್ತಿತರ ಗ್ರಾಮಗಳ ಜೊತೆಗೆ ವಿಲೀನ ಮಾಡಿ ತಾಲ್ಲೂಕು ಪಂಚಾಯಿತಿ ಕ್ಷೇತ್ರ ರಚಿಸಿರುವುದರಿಂದ ಭವಿಷ್ಯದಲ್ಲಿ ಸಮಸ್ಯೆ ಆಗಬಹುದು ಎಂಬ ಲೆಕ್ಕಾಚಾರವೂ ಇದೆ.

ಇದೇ 20ರಂದು ಜಿಲ್ಲಾಧಿಕಾರಿ ಕ್ಷೇತ್ರಗಳ ಪುನರ್‌ ವಿಂಗಡಣೆ ಸಂದರ್ಭದಲ್ಲಿ ಮರಸಣಿಗೆಯನ್ನು ಕಳಸ ಜಿಲ್ಲಾ ಪಂಚಾಯಿತಿ ಕ್ಷೇತ್ರ
ಮತ್ತು ಇಡಕಿಣಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ ಸೇರಿಸಬೇಕು ಎಂಬ ಆಗ್ರಹ ಪಕ್ಷಾತೀತವಾಆಗಿ ಕೇಳಿಬರುತ್ತಿದೆ. ಶಾಸಕ ಎಂ.ಪಿ.ಕುಮಾರಸ್ವಾಮಿ ಕೂಡ ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಗಮನ ಸೆಳೆದಿರುವುದಾಗಿ ಹೇಳಿದ್ದಾರೆ.

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿ ಬಗ್ಗೆ ಜಿಲ್ಲಾಧಿಕಾರಿ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡುತ್ತಾರೆ. ಆಗ ಮರಸಣಿಗೆ ಕ್ಷೇತ್ರದ ಬಗ್ಗೆ ಸ್ಥಳೀಯರು ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ ಎಂದು ಮೂಡಿಗೆರೆ ತಹಶೀಲ್ದಾರ್ ಎಚ್.ಎಂ. ರಮೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.