
ಬಾಳೆಹೊನ್ನೂರು: ದೇಶದಲ್ಲಿ ಪ್ರತಿವರ್ಷ ಉತ್ಪಾದನೆ ಆಗುವ ಕಾಳುಮೆಣಸಿನ ಕುರಿತು ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಉತ್ಪೇಕ್ಷಿತ ವರದಿ ನೀಡುತ್ತಿದೆ. ಇದರ ಪರಿಣಾಮ ದೇಶದಲ್ಲಿ ಕಾಳುಮೆಣಸಿನ ದರ ಕುಸಿದಿದೆ. ರೈತರು ಇದನ್ನು ವಿರೋಧಿಸಿ ಮಂಡಳಿ ವಿರುದ್ಧ ಪ್ರತಿಭಟಿಸಬೇಕು ಎಂದು ಹಲಸೂರು ಕಾಫಿ ಎಸ್ಟೇಟ್ ಮಾಲೀಕ ಎನ್.ಎನ್.ಯುವರಾಜ್ ಹೇಳಿದರು.
ಇಂಡಿಯನ್ ಪೆಪ್ಪರ್ ಲೀಗ್ (ಐಪಿಎಲ್) ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಹಲಸೂರಿನ ಶಬಾನ್ ರಂಜಾನ್ ಎಸ್ಟೇಟ್‌ನಲ್ಲಿ 2025ರ ಅಂತಿಮ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಬಾರಿ ಒಂದು ಲಕ್ಷ ಟನ್ ಕಾಳುಮೆಣಸು ಉತ್ಪಾದನೆ ಭಾರತದಲ್ಲಿದೆ ಎಂದು ಮಂಡಳಿ ಸುಳ್ಳು ವರದಿ ನೀಡಿದೆ. ಈ ಕಾರಣದಿಂದ ಮುಂದಿನ ಬಾರಿಯೂ ಬೆಲೆ ಕುಸಿತ ಆಗುವುದು ಖಚಿತ. ತೋಟದ ಮಾಲೀಕರು ಮೊದಲು ತಮ್ಮ ಜಾಗಕ್ಕೆ ಉತ್ತಮ ಬೇಲಿ ನಿರ್ಮಾಣಕ್ಕೆ ಆಧ್ಯತೆ ನೀಡಬೇಕು. ಗುಣಮಟ್ಟದಲ್ಲಿ ರಾಜೀ ಬೇಡ. ನೀರು, ಮಣ್ಣು ಹಾಗೂ ತೋಟದ ಕಾರ್ಮಿಕರ ಬಗ್ಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ, ಬೆಲೆ ಇಳಿಕೆಯಿಂದ ಬಚಾವಾಗಲು ರೈತರು ಇಂದಿನ ದಿನಗಳಲ್ಲಿ ತೋಟದಲ್ಲಿ ಬಹು ಬೆಳೆಗಳನ್ನು ಅಳವಡಿಸಿಕೊಳ್ಳಬೇಕು. ಸರ್ಕಾರ ವಿಜ್ಞಾನಿಗಳಿಗೆ ಸಂಬಳ ನೀಡುತ್ತದೆ. ಅವರಿಗೆ ಪ್ರಶ್ನೆಮಾಡಿ. ಅಡಿಕೆಗೆ ಬಾದಿಸುತ್ತಿರುವ ಎಲೆಚುಕ್ಕಿ ಹಾಗೂ ಹಳದಿ ಎಲೆರೋಗದ ಕುರಿತು ತೋಟಗಾರಿಕೆ ಸಚಿವರನ್ನು ಭೇಟಿ ಮಾಡಿ ಚರ್ಚಿಸುವೆ ಎಂದರು.
ಐಪಿಎಲ್ ಉಪಾಧ್ಯಕ್ಷ ಕಲ್ಕುಳಿ ಚಂದ್ರಶೇಖರ್ ಹೆಗ್ಡೆ ಮಾತನಾಡಿ, ಉತ್ತಮ ಬೆಳೆ ಬೆಳೆಯಲು ಮಾರ್ಗದರ್ಶನ ಅಗತ್ಯ. ರೈತರು ಅರ್ಥಿಕ ಅಭ್ಯುದಯಕ್ಕಾಗಿ ಐಪಿಎಲ್ ಹುಟ್ಟುಹಾಕಲಾಗಿದೆ ಹೊರತು ಲಾಭದ ಉದ್ದೇಶದಿಂದ ಅಲ್ಲ. ಸೀಗೋಡಿನ ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ರೈತರೊಂದಿಗೆ ಸಂಯಮದಿಂದ ವರ್ತಿಸುತ್ತಿಲ್ಲ. ಶೃಂಗೇರಿಯ ಡಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಕಚೇರಿ ಬಿಟ್ಟು ಕದಲುತ್ತಿಲ್ಲ. ಅಡಿಕೆ ತೋಟ ಎಲೆಚುಕ್ಕಿ ರೋಗದಿಂದ ಸಂಪೂರ್ಣ ಅವಸಾನದ ಅಂಚಿಗೆ ಬಂದಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಕೃಷಿ ತಾಂತ್ರಿಕ ಸಲಹೆಗಾರ ಸುನೀಲ್ ತಾಮಗಾಳೆ, ಕಾಳು ಮೆಣಸಿನ ಬಳ್ಳಿಗಳು ಹಬ್ಬಿರುವ ಮರದ ತಲೆಯಿಂದ ತುಂತುರು ನೀರಾವರಿ ಮಾಡುವುದರಿಂದ ಉಂಟಾಗುವ ಲಾಭ, ನೀಡಬೇಕಾದ ಗೊಬ್ಬರ, ರೋಗ ಕಾಣಿಸಿಕೊಂಡಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಮಾಹಿತಿ ನೀಡಿ, ರೈತರೊಂದಿಗೆ ಸಂವಾದ ನಡೆಸಿದರು.
ರೈತರು ತೋಟ ವೀಕ್ಷಣೆ ಮಾಡಿ ವಿವಿಧ ಯಂತ್ರೋಪಕರಣ, ಕಾಫಿ ಪಲ್ಪರಿಂಗ್ ಯಂತ್ರದ ಪ್ರಾತ್ಯಕ್ಷಿಕೆ ಪಡೆದರು.
ಐಪಿಎಲ್ ಅಧ್ಯಕ್ಷ ಎಚ್.ವಿ.ಪ್ರದೀಪ್ ಕುಮಾರ್, ಉಪಾಧ್ಯಕ್ಷ ಕೆ.ಎಸ್.ಸತ್ಯಪ್ರಕಾಶ್, ಕಾರ್ಯದರ್ಶಿ ಕೆ.ಪಿ.ವಿಶ್ವನಾಥ್, ಖಜಾಂಚಿ ಎಚ್.ಎಸ್.ಕುಮಾರಸ್ವಾಮಿ, ನಿರ್ದೇಶಕರಾದ ಎಚ್.ಎಂ.ಚೆನ್ನಕೇಶವ, ಶ್ರೀರಂಕ್ ಹೆಗ್ಡೆ, ಪ್ರದೀಪ್ ಜಯಪುರ, ಕೆ.ಸಿ.ಮದುಕುಮಾರ್, ಸತೀಶ್ ಜೈನ್, ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಎಸ್.ವಿಕ್ರಮ್, ಜಗದೀಶ್ ಕಣದಮನೆ ಭಾಗವಹಿಸಿದ್ದರು.
ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ
ಬಾಳೆಹೊನ್ನೂರು ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಖಾಲಿ ನಿವೇಶನಗಳಿಗೆ ಬೇಲಿ ಹಾಕುವುದು ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯಿತಿ ಹೆಸರಿನಲ್ಲಿ ವಸೂಲಾತಿ ಮೃತಪಟ್ಟವರ ಹೆಸರಿನಲ್ಲಿರುವ ಜಾಗ ಕಬಳಿಸುವ ಯತ್ನ ನಡೆಸುತ್ತಿರುವ ಬಗ್ಗೆ ದೂರಿನ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಾಸಕ ಟಿ.ಡಿ.ರಾಜೇಗೌಡ ಕಾನೂನು ಉಲ್ಲಂಘಿಸಿದವರ ಮೇಲೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.