ADVERTISEMENT

ಕಾಳುಮೆಣಸಿನ ದರ ಕುಸಿತ

ಕಪ್ಪು ಬಂಗಾರಕ್ಕೆ ಪ್ರತ್ಯೇಕ ಮಾರುಕಟ್ಟೆಯಾದರೆ ಬೆಳೆಗಾರರಿಗೆ ಲಾಭ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 6:40 IST
Last Updated 21 ಅಕ್ಟೋಬರ್ 2022, 6:40 IST
ಮಳೆಯಿಂದ ಿಳುವರಿ ಕಡಿಮೆಯಾಗಿರುವ ಕಾಳು ಮೆಣಸು
ಮಳೆಯಿಂದ ಿಳುವರಿ ಕಡಿಮೆಯಾಗಿರುವ ಕಾಳು ಮೆಣಸು   

ಮೂಡಿಗೆರೆ: ಮಲೆನಾಡಿನ ಮಾರುಕಟ್ಟೆಯಲ್ಲಿ ಕಪ್ಪು ಬಂಗಾರವೆಂದೇ ಗುರುತಿಸಿಕೊಂಡ ಕಾಳು ಮೆಣಸಿನ ದರವು ಇಳಿಮುಖವಾಗಿದ್ದು, ದಾಸ್ತಾನು ಇಟ್ಟಿರುವ ಬೆಳೆಗಾರರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.

ತಾಲ್ಲೂಕಿನಲ್ಲಿ ಕಾಳು ಮೆಣಸಿಗೆ ಪ್ರತ್ಯೇಕ ಮಾರುಕಟ್ಟೆ ಇಲ್ಲ. ಕಾಫಿ ವ್ಯಾಪಾರ ನಡೆಸುವ ಸಂಸ್ಥೆಗಳು, ಚಿಲ್ಲರೆ ಮಾರಾಟಗಾರರೇ ಕಾಳು ಮೆಣಸನ್ನು ಕೊಳ್ಳುವ ವ್ಯವಸ್ಥೆ ಇದ್ದು, ಕೆಲವು ವ್ಯಾಪಾರಿಗಳು ಕಾಳು ಮೆಣಸಿನ ತೋಟಗಳಿಗೆ ತೆರಳಿ ಲಭ್ಯವಿರುವ ಇಳುವರಿಗೆ ಅನುಗುಣವಾಗಿ ಮಾರಾಟ ಒಪ್ಪಂದ ಮಾಡಿಕೊಂಡು ಕಟಾವು ಮಾಡುವ ಪದ್ಧತಿಯೂ ಚಾಲನೆಯಲ್ಲಿದೆ.

ತಾಲ್ಲೂಕಿನಲ್ಲಿ ಕಾಳು ಮೆಣಸಿನ ವಹಿವಾಟು ಆರ್ಥಿಕ ಪ್ರಗತಿಗೆ ಹಾದಿಯಾಗಿದ್ದು, ವಾರ್ಷಿಕ ಸುಮಾರು ಐದು ಸಾವಿರ ಟನ್ ಕಾಳು ಮೆಣಸಿನ ಉತ್ಪಾದನೆಯಾಗುತ್ತದೆ ಎಂಬುದು ತೋಟಗಾರಿಕೆ ಇಲಾಖೆಯ ಲೆಕ್ಕಾಚಾರ. ಬಹುತೇಕ ಉತ್ಪನ್ನವು ಸ್ಥಳೀಯವಾಗಿಯೇ ಮಾರಾಟವಾಗುತ್ತದೆ.

ADVERTISEMENT

ಪಟ್ಟಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಿದ್ದು, ಕಾಳು ಮೆಣಸನ್ನು ಖರೀದಿಸದಿರುವುದು ಬೆಳೆಗಾರರ ಪಾಲಿಗೆ ಮುಳ್ಳಾದಂತಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಾಫಿ, ಕಾಳು ಮೆಣಸನ್ನು ಖರೀದಿಸುವ ವ್ಯವಸ್ಥೆ ಕಲ್ಪಿಸಿದರೆ ಬೆಳೆಗಾರರು ಮಧ್ಯವರ್ತಿಗಳ ಕಾಟದಿಂದ ಹೊರಗುಳಿಯಬಹುದು ಎಂಬುದು ಹಲವು ರೈತರ ಅಭಿಪ್ರಾಯವಾಗಿದೆ.

‘ಕಾಳು ಮೆಣಸಿಗೆ ಉತ್ತಮ ಬೆಲೆ ಇದೆ. ಆದರೆ ಅತಿವೃಷ್ಟಿಯಾಗಿ ಇಳುವರಿ ಕಡಿಮೆಯಾಗಿರುವುದರಿಂದ ಉತ್ತಮ ಬೆಲೆ ಇದ್ದರೂ ರೈತರು ನಷ್ಟ ಅನುಭವಿಸುವಂತೆ ಮಾಡಿದೆ. ಕಾಳು ಮೆಣಸಿಗೆ ಪ್ರತ್ಯೇಕ ಮಾರುಕಟ್ಟೆಯಾದರೆ ಬೆಳೆಗಾರರಿಗೆ ಲಾಭವಾಗುತ್ತದೆ. ಇದರಿಂದ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬಹುದಲ್ಲದೇ, ಗರಿಷ್ಟ ಬೆಲೆಯನ್ನು ಪಡೆಯಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಬೆಳೆಗಾರ ಪ್ರಕಾಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.