ADVERTISEMENT

ಮುಳ್ಳಯ್ಯನಗಿರಿ: ‍ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 17:15 IST
Last Updated 17 ಏಪ್ರಿಲ್ 2024, 17:15 IST
ಮುಳ್ಳಯ್ಯನಗಿರಿ ಪ್ರದೇಶ
ಮುಳ್ಳಯ್ಯನಗಿರಿ ಪ್ರದೇಶ   

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಪರಿಸರ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸಾರ್ವಜನಿಕರ ಅಭಿಪ್ರಾಯಗಳನ್ನು ಆಧರಿಸಿ ಈ ಆದೇಶವನ್ನು ಜಿಲ್ಲಾಧಿಕಾರಿ ಹೊರಡಿಸಿದ್ದಾರೆ.

4.99 ಲೀಟರ್‌ ತನಕ ನೀರು ಸಂಗ್ರಹಿಸಬಹುದಾದ ಪ್ಲಾಸ್ಟಿಕ್ ಬಾಟಲಿ, ಗುಟ್ಕಾ, ಚಿಪ್ಸ್ ಮತ್ತು ಇತರ ತಿನಿಸುಗಳ ಪ್ಯಾಕೇಟ್‌ಗಳನ್ನು ಗಿರಿ ಪ್ರದೇಶಕ್ಕೆ ಕೊಂಡೊಯ್ಯುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಉಲ್ಲಂಘಿಸಿದವರ ವಿರುದ್ಧ ಐಪಿಸಿ 188 ಅಡಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.

ADVERTISEMENT

ಅಲ್ಲಂಪುರ ಚೆಕ್‌ಪೋಸ್ಟ್‌ನಿಂದ ಮುಳ್ಳಯ್ಯನಗಿರಿಗೆ ಹೋಗುವ ಮಾರ್ಗದಲ್ಲಿ ಪ್ಲಾಸ್ಟಿಕ್ ತಪಾಸಣಾ ಚೆಕ್‌ಪೋಸ್ಟ್ ನಿರ್ವಹಿಸಬೇಕು ಮತ್ತು ಈ ಸಂಬಂಧ ಪ್ರತಿ ತಿಂಗಳು 5ರೊಳಗೆ ವರದಿ ಸಲ್ಲಿಸಬೇಕು ಎಂದು ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.

ಪ್ಲಾಸ್ಟಿಕ್ ನಿಷೇಧಿತ ಪ್ರದೇಶದ ವ್ಯಾಪ್ತಿಯಲ್ಲಿನ ಎಲ್ಲಾ ಹೋಂಸ್ಟೆ, ರೆಸಾರ್ಟ್‌ಗಳಲ್ಲಿ ಕಡ್ಡಾಯವಾಗಿ ಸೂಚನಾ ಫಲಕಗಳನ್ನು ಅಳಡಿಸಲು ಪ್ರವಾಸೋದ್ಯಮ ಇಲಾಖೆ ಕ್ರಮ ವಹಿಸಬೇಕು. ವೈಜ್ಞಾನಿಕವಾಗಿ ಕಸ ವಿಂಗಡಿಸಿ ವಿಲೇವಾರಿ ಮಾಡುತ್ತಿರುವ ಬಗ್ಗೆ ಕಾಲಕಾಲಕ್ಕೆ ಪರಿಶೀಲಿಸಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ನಿಷೇಧಿತ ಪ್ಲಾಸ್ಟಿಕ್ ಜಿಲ್ಲೆಯಲ್ಲಿ ಉತ್ಪಾದನೆ, ಮಾರಾಟ ಮತ್ತು ಬಳಕೆ ಆಗದಂತೆ ಅನಿರೀಕ್ಷಿತ ತಪಾಸಣೆ ನಡೆಸಲು ತಂಡ ನಿಯೋಜಿಸುವಂತೆ ವಾಣಿಜ್ಯ ತೆರಿಗೆ ಇಲಾಖೆಗೂ ಸೂಚನೆ ನೀಡಿದ್ದಾರೆ.

ಪ್ಲಾಸ್ಟಿಕ್ ನಿಷೇಧದ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ ಎಂಬುದರ ಮೇಲುಸ್ತುವಾರಿ ವಹಿಸಿ ಆಗಾಗ ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು. ಪ್ರತಿ ತಿಂಗಳು ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಮಾಲಿನ್ಯ ನಿಯಂತ್ರಣಾ ಮಂಡಳಿಯ ಪರಿಸರ ಅಧಿಕಾರಿಗೂ ಆದೇಶದಲ್ಲಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.