ಮೂಡಿಗೆರೆ: ತಾಲ್ಲೂಕಿನಲ್ಲಿ ಬಾಕಿ ಉಳಿಸಿಕೊಂಡಿರುವ ಪೋಡಿ ಪ್ರಕರಣಗಳನ್ನು ಕೂಡಲೇ ಇತ್ಯರ್ಥ ಪಡಿಸಬೇಕೆಂದು ಆಗ್ರಹಿಸಿ ಶುಕ್ರವಾರ ರೈತ ಸಂಘದ ಪದಾಧಿಕಾರಿಗಳು ಪಟ್ಟಣದ ಪ್ರವಾಸಿ ಮಂದಿರದಿಂದ ನೇಗಿಲು, ನೊಗ ಹೊತ್ತು, ಟಮಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು.
ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಮಂಜುನಾಥಗೌಡ ಮಾತನಾಡಿ, ‘ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲಾ ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳನ್ನಾಗಿ ಮಾಡಲು ಕಂದಾಯ ಸಚಿವರು ಆಸಕ್ತಿ ತೋರಿದ್ದು, ಇದಕ್ಕೆ ಪೂರಕವಾಗಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಪೋಡಿ ಪ್ರಕರಣ ಮುಕ್ತಗೊಳಿಸುವ ಬಗ್ಗೆ 2018ರಲ್ಲಿ ಸರ್ಕಾರ 22 ಪುಟಗಳ ಸುತ್ತೋಲೆ ಹೊರಡಿಸಿ ವಿವರಿಸಿದೆ. ಈ ಸುತ್ತೋಲೆಯ ಬಗ್ಗೆ ಭೂಮಾಪನ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ. ಇದರಿಂದ ಎಡಿಎಲ್‌ಆರ್ ಇಲಾಖೆಯ ತಕರಾರು ಲಾಗಿನ್‌ನಲ್ಲಿ ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ರೈತರ ಜಮೀನುಗಳು ಪರಿಹಾರ ಕಂಡುಕೊಳ್ಳದೇ ಬಾಕಿ ಉಳಿದಿವೆ. ಇನ್ನಾದರೂ ಸರ್ಕಾರದ ಸುತ್ತೋಲೆಯಂತೆ ಕಾರ್ಯನಿರ್ವಹಿಸಿ, ಪೋಡಿ ಮುಕ್ತ ತಾಲ್ಲೂಕು ಮಾಡಲು ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಉದ್ದೇಗೌಡ ಮಾತನಾಡಿ, ‘ರಾಜ್ಯದಲ್ಲಿಯೇ ಮೂಡಿಗೆರೆ ತಾಲ್ಲೂಕಿನಲ್ಲಿ ಹೆಚ್ಚು ಪೋಡಿ ಪ್ರಕರಣ ಬಾಕಿ ಉಳಿದಿವೆ. ಫಾರಂ ನಂ. 50, 53ರಲ್ಲಿ ಅರ್ಜಿ ಸಲ್ಲಿಸಿದ ರೈತರ ಜಮೀನಿನ ಪೋಡಿ ಪ್ರಕರಣ ಕೂಡಲೇ ಇತ್ಯರ್ಥಪಡಿಸಬೇಕು. ಆದಿವಾಸಿ ರೈತರನ್ನು ಒಕ್ಕಲೆಬ್ಬಿಸಬಾರದು. ಪೋಡಿ ಪ್ರಕರಣದ ಬಗ್ಗೆ ಎಡಿಎಲ್‌ಆರ್ ಅಧಿಕಾರಿ ಸ್ಥಳಕ್ಕೆ ಆಗಮಿಸಿ ರೈತರ ಪ್ರಶ್ನೆಗಳಿಗೆ ಉತ್ತರ ನೀಡಬೇಕು’ ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ಎಲ್ಲಾ ಬಗೆಯ ಅನುಮಾನ, ದೋಷ ನಿವಾರಿಸಲು ಸರ್ಕಾರದ ಸುತ್ತೋಲೆಯಲ್ಲಿಯೇ ಉತ್ತರವಿದೆ. ಆದರೆ, ಅಧಿಕಾರಿಗಳು ಅದನ್ನು ಗಮನಿಸದೇ ಮನಸ್ಸಿಗೆ ಬಂದಂತೆ ಕೆಲಸ ಮಾಡುವುದು ನಿಯಮಬಾಹಿರ. ಕೆಲಸ ಮಾಡಲು ಬಾರದಿದ್ದರೆ ವಿಆರ್‌ಎಸ್ ಪಡೆದು ಮನೆಗೆ ಹೋಗಿ. ಅದನ್ನು ಬಿಟ್ಟು ರೈತರಿಗೆ ತೊಂದರೆ ಕೊಡುವುದು ಸಹಿಸುವುದಿಲ್ಲ. ಕೆಲಸಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ್ ಎಸ್. ಅಶ್ವಿನಿ ಮನವಿ ಸ್ವೀಕರಿಸಿ, ಈ ಸಮಸ್ಯೆ ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಮುಖಂಡರಾದ ವನಶ್ರೀಗೌಡ, ರಘು ಬಿಳ್ಳೂರು, ಚಂದ್ರೇಗೌಡ ಕೆಲ್ಲೂರು, ಚಂದ್ರೇಗೌಡ ಕುಂದೂರು, ಎನ್.ಎಲ್. ಸುಂದ್ರೇಶ್, ರಮೇಶ್ ದಾರದಹಳ್ಳಿ, ಮಂಜುನಾಥ್ ಹೊನ್ನಕೊಯ್ಲು, ಮೀನಾಕ್ಷಮ್ಮ, ಶಕುಂತಲಾ, ನಾಗೇಶ್ ಹೊಸಳ್ಳಿ, ಲಕ್ಷ್ಮಣಗೌಡ ಬಡವನದಿಣ್ಣೆ, ರವಿ ಬಿಳ್ಳೂರು, ಐ.ಬಿ. ಗೋಪಾಲಗೌಡ, ರಘು ಬಿಳ್ಳೂರು, ಜಯರಾಂಗೌಡ ಅಬಚೂರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.