ಚಿಕ್ಕಮಗಳೂರು: ಮೂಢನಂಬಿಕೆಯಿಂದ ದೂರ ಉಳಿದು ವೈಜ್ಞಾನಿಕವಾಗಿ ಚಿಂತನೆ ನಡೆಸಿ ಪೌಷ್ಟಿಕ ಆಹಾರ ಸೇವನೆಯೊಂದಿಗೆ ಉತ್ತಮ ಜೀವನ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಶಾಸಕಿ ನಯನಾ ಮೋಟಮ್ಮ ಸಲಹೆ ನೀಡಿದರು.
ತಾಲ್ಲೂಕಿನ ಅಂಬಳೆಯ ಎ.ಆರ್.ಕೃಷ್ಣಶಾಸ್ತ್ರಿ ಸಭಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಣಂತಿಯರು, ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ನೀಡಬೇಕಾದ ಪೌಷ್ಟಿಕ ಆಹಾರ ಪದ್ಧತಿಯ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಅರಿವು ಮೂಡಿಸುತ್ತಿದ್ದರೂ ಜನರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬದಲಾವಣೆ ಆಗದೆ ಇರುವುದು ವಿಷಾದನೀಯ ಎಂದರು.
ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ಅಪೌಷ್ಟಿಕತೆ ಇದೆ. ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಮತ್ತು ಮಕ್ಕಳಿಗೆ ಶಿಸ್ತನ್ನು ಮನೆಯಿಂದಲೇ ಕಲಿಸಬೇಕು ಎಂದು ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ರಂಗನಾಥ ಮಾತನಾಡಿ, ‘ಪೌಷ್ಟಿಕ ಕರ್ನಾಟಕ’ ನಿರ್ಮಾಣದ ಸಂಕಲ್ಪದೊಂದಿಗೆ ಪೋಷಣ್ ಅಭಿಯಾನ ಯೋಜನೆ ರೂಪಿಸಲಾಗಿದೆ. ಭಾರತವನ್ನು ಕಾಡುತ್ತಿದ್ದ ಅಪೌಷ್ಟಿಕತೆಯನ್ನು ತೊಡೆದು ಹಾಕಲು 5 ಗುರಿಗಳನ್ನು ಹೊಂದಿದ್ದು, ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು, ಕಿಶೋರಿಯರಲ್ಲಿ ಅಪೌಷ್ಟಿಕತೆ ನಿವಾರಣೆ, ರಕ್ತಹೀನತೆ ತಡೆಗಟ್ಟುವಿಕೆ, ಕುಂಠಿತ ಬೆಳವಣಿಗೆ, ಜನನ ತೂಕ ಕಡಿಮೆಯಾಗುವ ಸಮಸ್ಯೆ ನಿವಾರಿಸಲು ಈ ಯೋಜನೆಗೆ ಚಾಲನೆ ನೀಡಲಾಗಿತ್ತು ಎಂದರು.
2025ನೇ ಸಾಲಿನಲ್ಲಿ ಹಲವು ಅಂಶಗಳನ್ನು ಇರಿಸಿಕೊಂಡು ಜಿಲ್ಲೆಯಾದ್ಯಂತ ಎಲ್ಲ ಅಂಗನವಾಡಿ ಕೇಂದ್ರಗಳು, ಶಾಲೆ, ಗ್ರಾಮ ಪಂಚಾಯಿತಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅರಿವು, ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಕೈಗೊಳ್ಳಲಾಗುತ್ತಿದೆ. ಇಲ್ಲಿನ ವಿಚಾರಗಳನ್ನು ಕುಟುಂಬದವರಿಗೂ ತಿಳಿಸಬೇಕು ಎಂದು ಹೇಳಿದರು.
ಕೆ.ಆರ್.ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿದ್ಯಾಸಾಗರ್ ಉಪನ್ಯಾಸ ನೀಡಿ, ಆಧುನಿಕ ಆಹಾರ ಕ್ರಮದಿಂದಾಗಿ ಹಲವು ಮಂದಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಸುಲಭವಾಗಿ ಸಿಗುವ ಪೋಷಕಾಂಶಯುಕ್ತ ಆಹಾರ ಕ್ರಮವನ್ನು ಅಳವಡಿಸಿಕೊಂಡರೆ ಆರೋಗ್ಯವಂತರಾಗಿ ಜೀವನ ನಡೆಸಬಹುದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ವೈ.ಆಲದಾರ್ತಿ ಮಾತನಾಡಿ, ಅಪೌಷ್ಟಿಕತೆ ನಿವಾರಣೆಗೆ ಜನರ ಸಹಭಾಗಿತ್ವ ಮುಖ್ಯಗಿದ್ದು, ಸಂಪನ್ಮೂಲ ವ್ಯಕ್ತಿಗಳು ನೀಡಿದ ಮಾಹಿತಿಯನ್ನು ಸಮುದಾಯಕ್ಕೆ ತಿಳಿಸುವಂತೆ ಸಲಹೆ ನೀಡಿದರು.
ಅಂಬಳೆ ಗ್ರಾ.ಪಂ.ಅಧ್ಯಕ್ಷೆ ಲಕ್ಷಮ್ಮ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಮಲ್ಲಮ್ಮ, ವಿಜಯಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಡಿ.ಸಂತೋಷ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜೆ.ರೂಪಾಕುಮಾರಿ, ಅಂಬಳೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಎನ್.ಕೆ.ಶೋಭಾ, ಹಿರಿಯ ಮೇಲ್ವಿಚಾರಕಿ ಸಿ.ಎಂ.ಲೀಲಾವತಿ, ಪೋಷಣ್ ಅಭಿಯಾನದ ಯೋಜನಾ ಸಂಯೋಜಕಿ ಕೆ.ದಿವ್ಯಾ ಭಾಗವಹಿಸಿದ್ದರು.
‘ಪೌಷ್ಟಿಕ ಕರ್ನಾಟಕ’ ನಿರ್ಮಾಣದ ಸಂಕಲ್ಪ ಸಮುದಾಯದಲ್ಲೂ ಜಾಗೃತಿ ಮೂಡಿಸಲು ಸಲಹೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.