ಕಡೂರು: ತಾಲ್ಲೂಕಿನ ಹಳೇಮದಗದ ಕೆರೆ ತುಂಬಿ ಕೋಡಿ ಬಿದ್ದಿದ್ದು, ನೀರಿನ ರಭಸಕ್ಕೆ 300 ಅಡಿಯಷ್ಟು ಮಣ್ಣು ಕೊಚ್ಚಿ ಹೋಗಿದ್ದು, ಕೆರೆ ಏರಿಯೇ ಕೊಚ್ಚಿ ಹೋಗುವ ಅಪಾಯ ಎದುರಾಗಿದೆ. ಕೋಡಿ ಬಿದ್ದ ಸ್ಥಳದಿಂದ 100 ಮೀಟರ್ ದೂರದಲ್ಲಿ 50 ಅಡಿಗೂ ಹೆಚ್ಚು ಆಳದ ಗುಂಡಿಯಾಗಿ, ಚಿಕ್ಕದೊಂದು ಜಲಪಾತವೇ ಸೃಷ್ಟಿಯಾಗಿದೆ.
210 ಹೆಕ್ಟೇರ್ ಪ್ರದೇಶದಲ್ಲಿರುವ ಹಳೆ ಮದಗದ ಕೆರೆಯ ಕೋಡಿ ನೀರು ಹರಿದು ಬೇರೆ ಕೆರೆಗಳ ಒಡಲು ತುಂಬುತ್ತದೆ. ಕೆಲವು ದಿನಗಳ ಹಿಂದ ಮಧಗದ ಕೆರೆ ತುಂಬಿದಾಗ ಹಳೆ ಮಧಗದ ಕೆರೆಯೂ ತುಂಬಿ ಕೋಡಿ ಹರಿಯಲಾರಂಭಿಸಿತು. ಕೋಡಿ ನೀರಿನ ರಭಸಕ್ಕೆ ಮಣ್ಣು ಕುಸಿದು, ಐವತ್ತು ಅಡಿ ಆಳಕ್ಕೆ ನೀರು ಧುಮುಕುತ್ತಿದೆ. ನೀರಿನ ರಭಸಕ್ಕೆ ಎರಡೂ ಕಡೆಯ ದಡದ ಮಣ್ಣು ಕುಸಿಯುತ್ತಾ, ದಿನೇ ದಿನೇ ವಿಸ್ತಾರಗೊಂಡು, ಸಮೀಪದ ತೋಟಗಳೂ ಅಪಾಯದಲ್ಲಿವೆ. ಮಳೆ ಹೆಚ್ಚಾಗಿ ನೀರಿನ ಹರಿವು ಹೆಚ್ಚಿದರೆ ಕೋಡಿಯ ಹತ್ತಿರದ ತನಕ ಮಣ್ಣು ಕೊಚ್ಚಿಹೋಗಿ ಕೆರೆ ಏರಿಯೇ ಒಡೆಯುವ ಅಪಾಯವಿದೆ.
ಕೆರೆಯ ಒಂದು ಪಾರ್ಶ್ವದಲ್ಲಿರುವ ಅಡಿಕೆ, ತೆಂಗು ತೋಟದವರು ಇದೇ ಕೆರೆಯ ಮಣ್ಣನ್ನು ತೆಗೆದು ತೋಟದ ಬದಿಗೆ ಹಾಕಿ, ಕೆರೆ ನೀರು ತೋಟದೊಳಗೆ ನುಗ್ಗದಂತೆ ವ್ಯವಸ್ಥೆ ಮಾಡಕೊಂಡಿದ್ದಾರೆ. ಇದರಿಂದ ಕೆರೆಯ ವಿಸ್ತಾರ ಕಡಿಮೆಯಾಗುಗಿದ್ದು, ಆಳದ ಗುಂಡಿಗಳಾಗಿ ನೀರು ತುಂಬುವ ಪ್ರಮಾಣ ಹೆಚ್ಚಾಗಿ ಕೆರೆಯ ಮೇಲಿನ ಒತ್ತಡ ಹೆಚ್ಚಿದೆ ಎನ್ನುತ್ತಾರೆ ಕೆಲವರು.
ನೀರಿನ ಒಳ ಹರಿವು ಹೆಚ್ಚಾದರೆ ಏರಿಯ ಮೇಲೆ ನೀರು ಉಕ್ಕಿ ಕೆರೆಗೆ ಅಪಾಯವಾಗುವ ಸಂಭವವಿದೆ. ಎರಡು ದಿನಗಳ ಹಿಂದೆ ಹೀಗೆಯೇ ನೀರು ಏರಿ ಮೇಲೆ ಉಕ್ಕಿ ಹರಿದಾಗ ಗ್ರಾಮಸ್ಥರೇ ಮರಳು ಚೀಲ ಹಾಕಿದ್ದರು. ಇದೀಗ ಕೋಡಿಯಲ್ಲಿ ನೀರು ಹೆಚ್ಚು ಹೋಗುತ್ತಿರುವುದರಿಂದ ಕೆರೆಯಲ್ಲಿ ನೀರು ಒಂದಿಷ್ಟು ಕಡಿಮೆಯಾಗಿದೆ.
ಕೆರೆಗೆ ಇರುವ ತೂಬಿನ ಬಳಿ ಹೋಗಲು ಜಾಗವಿಲ್ಲದಂತಾಗಿ ತೂಬು ಎತ್ತಲು ಸಾಧ್ಯವಿಲ್ಲದಂತಾಗಿದೆ. ತುರ್ತಾಗಿ ಕೆರೆ ತೂಬಿನ ಬಳಿ ಹೋಗಲು ಕಿರು ಸೇತುವೆ ನಿರ್ಮಾಣದ ಅಗತ್ಯವಿದೆ. ತೂಬು ತೆರೆಯಲು ಅವಕಾಶವಾದರೆ ಕೆರೆ ತುಂಬಿದಾಗ ನೀರು ಹೊರಬಿಟ್ಟು ಕೆರೆಯ ಒತ್ತಡ ಕಡಿಮೆ ಮಾಡಬಹುದು ಎನ್ನುತ್ತಾರೆ ಗ್ರಾಮಸ್ಥರು.
ಕೆರೆಯ ಏರಿಯ ಮೇಲೆ ಗಿಡಗಳು ಕಾಡಿನಂತೆ ಬೆಳೆದು, ಈಗ ಏರಿ ಬಿರುಕು ಬಿಟ್ಟರೂ ಕಾಣದಂತಾಗಿದೆ. ಕೆರೆ ಏರಿಯ ಮೇಲಿನ ಗಿಡಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮದಗದ ಕೆರೆ ತೂಬು ಮುಳುಗಿ ಹೋಗಿರುವುದು
ಕೆರೆಯ ಭದ್ರತೆಗೆ ಸಣ್ಣ ನೀರಾವರಿ ಇಲಾಖೆಯವರು ತುರ್ತು ಗಮನ ಕೊಡಬೇಕು. ಕೆರೆ ಅಪಾಯದಲ್ಲಿದೆ ಎಂಬ ಭಯದಲ್ಲೇ ಕಾಲಕಳೆಯುವಂತಾಗಿದೆ.– ರಮೇಶ್, ಪಾರ್ವತಿನಗರ
ಕೆರೆಯ ತೂಬಿನ ಹತ್ತಿರ ಹೋಗಲು ಕಿರು ಸೇತುವೆ ನಿರ್ಮಾಣದ ಅಗತ್ಯವಿದೆ. ಅಧಿಕಾರಿಗಳು ಇದರತ್ತ ಗಮನ ಹರಿಸಬೇಕಿದೆ.–ಕೃಷ್ಣಮೂರ್ತಿ, ಪಾರ್ವತಿ ನಗರ.
ಹಳೆ ಮದಗದ ಕೆರೆ ಮಣ್ಣು ಕುಸಿದಿರುವುದನ್ನು ಇಲಾಖೆಗೆ ವರದಿ ಮಾಡಲಾಗಿದೆ. ಶಾಸಕರ ಗಮನಕ್ಕೂ ತಂದಿದ್ದೇವೆ. ಮೇಲಧಿಕಾರಿಗಳ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು.–ಮಂಜುನಾಥ್.ಎಇಇ. ಸಣ್ಣನೀರಾವರಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.