ADVERTISEMENT

ಬೀಜೋತ್ಪಾದನೆಯಲ್ಲಿ ಸ್ವಾವಲಂಬನೆ: ರೈತರಿಗೆ ವರವಾದ ‘ಅಂಗಾಂಶ’ ಆಲೂಗಡ್ಡೆ

ಕಲ್ಲಾಪುರ ಗ್ರಾಮದ ಗಿಣೀಶ್ ಸಾಧನೆ

ಬಾಲು ಮಚ್ಚೇರಿ
Published 15 ಜೂನ್ 2022, 5:44 IST
Last Updated 15 ಜೂನ್ 2022, 5:44 IST
ಅಂಗಾಂಶ ಪದ್ಧತಿಯಲ್ಲಿ ಬೆಳೆದ ಆಲೂಗಡ್ಡೆ ಸಸಿಗಳೊಂದಿಗೆ ಗಿಣೀಶ್‌
ಅಂಗಾಂಶ ಪದ್ಧತಿಯಲ್ಲಿ ಬೆಳೆದ ಆಲೂಗಡ್ಡೆ ಸಸಿಗಳೊಂದಿಗೆ ಗಿಣೀಶ್‌   

ಕಡೂರು: ಆಲೂಗಡ್ಡೆ ಬೆಳೆಯಲು ರೈತರಿಗೆ ಗುಣಮಟ್ಟದ ಬಿತ್ತನೆ ಬೀಜದ ಕೊರತೆ ಇರುವ ಸಂದರ್ಭದಲ್ಲಿ ಅಂಗಾಂಶ ಕೃಷಿ ಮೂಲಕ ತಾಲ್ಲೂಕಿನ ರೈತರಿಗೆ ಬೀಜೋತ್ಪಾದನೆಯಲ್ಲಿ ಸ್ವಾವಲಂಬಿಯಾಗುವ ದಾರಿ ತೋರಿದ್ದಾರೆ ಕಲ್ಲಾಪುರ ಗ್ರಾಮದ ಗಿಣೀಶ್.

ಗಿಣೀಶ್‌ಗೆ ಕೇವಲ 20 ಗುಂಟೆ ಜಮೀನು ಇದೆ. ಜೀವನ ನಿರ್ವಹಣೆಗಾಗಿ ತರಕಾರಿ ಸಸಿಗಳ ನರ್ಸರಿ ಮಾಡಿದರು. ಆದರೆ, ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದರು. ನರ್ಸರಿಯಿಂದ ಹೆಚ್ಚಿನ ಲಾಭ ಬರಲಿಲ್ಲ. ಆಗ ಹೊಳೆದದ್ದೇ ಅಂಗಾಶ ಕೃಷಿಯ ಹೊಸ ಹಾದಿ.

ಸುಮಾರು 5 ಎಕರೆ ಪ್ರದೇಶದಲ್ಲಿ ಆಲೂಗೆಡ್ಡೆ ಬಿತ್ತನೆ ಮಾಡಲು ಬಿತ್ತನೆ ಬೀಜಕ್ಕಾಗಿಯೇ ರೈತರು
₹ 75 ಸಾವಿರದಿಂದ ₹1 ಲಕ್ಷ ಖರ್ಚು ಮಾಡಬೇಕು. ಅದರಲ್ಲೂ ಬಿತ್ತನೆ ಬೀಜಕ್ಕಾಗಿ ಪಂಜಾಬ್ ರಾಜ್ಯವನ್ನು ಅವಲಂಬಿಸಬೇಕು. ಅಲ್ಲಿಂದ ಸಿಗುವುದು ಬಿತ್ತನೆಗಾಗಿ ಇರುವ ಬೀಜದ ಆಲೂಗಡ್ಡೆಯಲ್ಲ. ದಪ್ಪ ಆಲೂಗೆಡ್ಡೆಯಲ್ಲಿರುವ ಕಣ್ಣುಗಳನ್ನು ಕತ್ತರಿಸಿ, ಅದನ್ನೇ ಇಲ್ಲಿ ಬಿತ್ತನೆ ಮಾಡುತ್ತಾರೆ. ಇದರಲ್ಲಿ ಎಲ್ಲವೂ ಮೊಳಕೆಯೊಡೆಯುತ್ತವೆ ಎಂಬ ಖಾತರಿಯಿಲ್ಲ. ಕಡೂರು ಭಾಗದ ಆಲೂಗಡ್ಡೆ ಬೆಳೆಗಾರರಿಗೆ ಬಿತ್ತನೆ ಬೀಜದ್ದೇ ದೊಡ್ಡ ಸಮಸ್ಯೆ. ಈ ಸಮಸ್ಯೆಗಳತ್ತ ಗಮನ ಹರಿಸಿದ ಗಿಣೀಶ್ ಅವರಿಗೆ ತೋಟಗಾರಿಕಾ ಇಲಾಖೆಯ ಮಾರ್ಗದರ್ಶನದೊಂದಿಗೆ ‘ಅಂಗಾಂಶ ಕೃಷಿ‘ ಮೂಲಕ ಬಿತ್ತನೆ ಬೀಜದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದಾರಿ ಕಂಡಿತು.

ADVERTISEMENT

ಹಿಮಾಚಲ ಪ್ರದೇಶದಲ್ಲಿರುವ ಕೇಂದ್ರ ಸರ್ಕಾರದ ಆಲೂಗೆಡ್ಡೆ ಸಂಶೋಧನಾ ಕೇಂದ್ರದವರು ಅಭಿವೃದ್ಧಿಪಡಿಸಿದ ‘ಕುಫ್ರಿ ಹಿಮಾಲಿನಿ’ ಎಂಬ ಅಂಗಾಂಶ ಕೃಷಿ ಆಲೂಗಡ್ಡೆ ಬೆಳೆಯನ್ನು ಕಡೂರು ಪ್ರದೇಶದಲ್ಲಿ ಪರಿಚಯಿಸಲು ಮುಂದಾದರು. ತಮ್ಮ ನರ್ಸರಿಯಲ್ಲಿ ಈ ಆಲೂಗಡ್ಡೆ ಪ್ರಾಯೋಗಿಕವಾಗಿ ಬೆಳೆದು ನೋಡಿದರು. ಇದು ಯಶಸ್ಸು ಕಂಡ ಬೆನ್ನಲ್ಲೇ ಕಳೆದ ವರ್ಷ ಅಂಗಾಂಶ ಕೃಷಿ ಪದ್ಧತಿಯಲ್ಲಿ ಬೆಳೆಸಿದ 2.5 ಲಕ್ಷ ಆಲೂಗೆಡ್ಡೆ ಸಸಿಗಳನ್ನು ಹೊರರಾಜ್ಯಕ್ಕೆ ಪೂರೈಸಿದರು. 1 ಲಕ್ಷ ಗಿಡಗಳನ್ನು ಸ್ಥಳೀಯ ರೈತರಿಗೆ ನೀಡಿದರು. ಅಂಗಾಂಶ ಕೃಷಿಗೆ ತಮಗೆ ಖರ್ಚಾದ ಮೊತ್ತವನ್ನು ಮಾತ್ರ ರೈತರಿಂದ ಪಡೆದಿದ್ದಾರೆ.

‘ರೈತರು ಸ್ವತಃ ಬೀಜೋತ್ಪಾದನೆ ಮಾಡಿಕೊಂಡರೆ ಲಾಭ ಹೆಚ್ಚು. ತಾವು ಬೆಳೆ ಬೆಳೆಯುವುದರ ಜತೆಗೆ, ಬೇರೆಯವರಿಗೆ ಬಿತ್ತನೆ ಬೀಜಗಳನ್ನೂ ಮಾರಾಟ ಮಾಡಬಹುದು. ರೈತರು ಮನಸ್ಸು ಮಾಡಿದರೆ ಆಲೂಗಡ್ಡೆ ಬಿತ್ತನೆ ಬೀಜವನ್ನು ನಾವೇ ಬೇರೆ ರಾಜ್ಯಗಳಿಗೂ ಪೂರೈಸುವಷ್ಟು ಸ್ವಾವಲಂಬನೆ ಸಾಧಿಸಬಹುದು’ ಎನ್ನುತ್ತಾರೆ ಗಿಣೀಶ್‌. ಇವರ ಪ್ರಯತ್ನಕ್ಕೆ ಪತ್ನಿ ರೇಣುಕಾ ಅವರ ಸಹಕಾರವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.