ADVERTISEMENT

420 ನಂಬರ್‌ನವರು 400 ಗುರಿ ಎನ್ನುತ್ತಾರೆ: ಪ್ರಕಾಶ್ ರಾಜ್

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 16:28 IST
Last Updated 16 ಮಾರ್ಚ್ 2024, 16:28 IST
ಪ್ರಕಾಶ್ ರಾಜ್
ಪ್ರಕಾಶ್ ರಾಜ್   

ಚಿಕ್ಕಮಗಳೂರು: ‘420 ನಂಬರ್‌ನವರು ಲೋಕಸಭೆ ಚುನಾವಣೆಯಲ್ಲಿ 400 ಸೀಟುಗಳನ್ನು ಪಡೆಯುವುದಾಗಿ ಮಾತನಾಡುತ್ತಿದ್ದಾರೆ, ಏನ್‌ ಮಾಡೊದು’ ಎಂದು ನಟ ಪ್ರಕಾಶ್‌ ರಾಜ್‌ ಲೇವಡಿ ಮಾಡಿದರು.

ಚಿಕ್ಕಮಗಳೂರು ಪ್ರೆಸ್‌ಕ್ಲಬ್ ಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಸುದ್ದಿಗಾರರಿಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ಪಕ್ಷವಾಗಲಿ ಇಷ್ಟೇ ಸೀಟು ಗೆಲ್ಲುತ್ತೇವೆ ಎಂಬುದು ಅಹಂಕಾರವಾಗುತ್ತದೆ. ಜನ ಕೊಟ್ಟರೆ ತೆಗೆದುಕೊಳ್ಳಬೇಕು’ ಎಂದು ಹೇಳಿದರು.

‘ನಾಳೆಯೇ ಬದಲಾಗಬೇಕು ಎಂಬುದು ನನ್ನ ಆಶಯವಲ್ಲ, ನಿಧಾನವಾಗಿಯಾದರೂ ಜನರಿಗೆ ಅರ್ಥವಾಗುತ್ತದೆ. ಈಗಿರುವ ಎರಡು ಪಕ್ಷಗಳಲ್ಲಿ ಅಷ್ಟೇನು ಭಿನ್ನತೆ ಇಲ್ಲ. ಆ ಪಕ್ಷದವರು ಈ ಪಕ್ಷಕ್ಕೆ ಹೋಗುತ್ತಾರೆ, ಬಟ್ಟೆಯ ಬಣ್ಣ ಬದಲಿಸುತ್ತಾರೆ ಅಷ್ಟೆ. ಹಣಬಲವೇ ಚುನಾವಣೆಯಲ್ಲಿ ಗೆಲ್ಲುತ್ತಿದೆ ಎಂದರೆ ಪ್ರಜಾಪ್ರಭುತ್ವ ಸೋಲುತ್ತಿದೆ. ಸಾಮಾನ್ಯ ಜನರು ಪ್ರತಿ ಚುನಾವಣೆಯಲ್ಲಿ ಸೋಲುತ್ತಿದ್ದೇವೆ ಎಂದೇ ಅರ್ಥ‘ ಎಂದರು.

ADVERTISEMENT

‘ಇಂದಿರಾ ಗಾಂಧಿ ಕಾಲದಲ್ಲಿ ಘೋಷಿತ ಸರ್ವಾಧಿಕಾರಿ ಆಡಳಿತ ಇತ್ತು. ಈಗ ಅಘೋಷಿತ ಸರ್ವಾಧಿಕಾರಿ ಆಡಳಿತ ಇದೆ. ಆಗ ಮಾಧ್ಯಮಗಳು ಸರ್ವಾಧಿಕಾರದ ವಿರುದ್ಧ ಇದ್ದವು, ಈಗ ಮಾರಿಕೊಂಡು ಸರ್ವಾಧಿಕಾರದ ಪರ ಇವೆ. ಈ ಚುನಾವಣೆಯಲ್ಲಿ ಸರ್ವಾಧಿಕಾರ ಬದಲಾಗುವ ನಂಬಿಕೆ ಇದೆ. ಒಂದೇ ಪಕ್ಷಕ್ಕೆ ಅಷ್ಟು ದೊಡ್ಡ ಬಹುಮತ ಸಿಗುವ ಸಾಧ್ಯತೆ ಇಲ್ಲ. ಆದ್ದರಿಂದಲೇ ಪ್ರಾದೇಶಿಕ ಪಕ್ಷಗಳನ್ನು ಒಡೆಯುವ ಕೆಲಸ ಮಾಡಲಾಗಿದೆ. ಉದಾಹರಣೆಗೆ ಆಂಧ್ರ ಪ್ರದೇಶಲ್ಲಿ ಮೂರು ಪಕ್ಷಗಳ ಹಿಂದೆ ಮಹಾಪ್ರಭುಗಳೇ(ನರೇಂದ್ರ ಮೋದಿ) ಇದ್ದಾರೆ’ ಎಂದು ವಿಶ್ಲೇಷಿಸಿದರು.

‘ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ಸ್‌ ಲಿಮಿಟೆಡ್‌ನಿಂದ (ಎಂಇಐಎಲ್‌) ₹1200 ಕೋಟಿ ದೇಣಿಗೆಯನ್ನು ಕೇಂದ್ರದ ಆಡಳಿತ ಪಕ್ಷ ಪಡೆದುಕೊಂಡಿದೆ. ಈ ಪಕ್ಷದ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ), ಐ.ಟಿ ದಾಳಿ ನಡೆಯಬೇಕಲ್ಲವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.