ಚಿಕ್ಕಮಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಜನರು ಭರ್ಜರಿ ಖರೀದಿಗೆ ಮುಂದಾಗಿದ್ದಾರೆ. ಪಟಾಕಿ ಅಂಗಡಿಗಳಲ್ಲಿ ವಹಿವಾಟು ಜೋರಾಗಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಮಾರ್ಕೇಟ್ ರೋಡ್, ಎಂಜಿ ರಸ್ತೆ, ಶಂಕರಪುರ ರಸ್ತೆ, ಹನುಮಂತಪ್ಪ ವೃತ್ತ, ಎಐಟಿ ವೃತ್ತ ಸೇರಿ ನಗರದಲ್ಲಿ ಖರೀದಿ ಬಲು ಜೋರಾಗಿತ್ತು. ಪೂಜಾ ಕೈಂಕಾರ್ಯಕ್ಕೆ ಬೇಕಾದ ಬಾಳೆಗಿಡ, ಮಾವಿನ ಸೊಪ್ಪು, ಹೂವು, ಹಣ್ಣು, ಪಟಾಕಿಗಳ ಖರೀದಿಯಲ್ಲಿ ಮುಗಿಬಿದ್ದರು.
ನಗರದ ಕವಿರತ್ನ ಕಾಳಿದಾಸ ರಸ್ತೆಯಲ್ಲಿ ಪಟಾಕಿ ವ್ಯಾಪಾರ ಜೋರಾಗಿದೆ. ನಗರಸಭೆ ಆದೇಶದಂತೆ ಹಸಿರು ಪಟಾಕಿ ಹಾಗೂ ಮಾಲಿನ್ಯ ರಹಿತ ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. 30 ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ. ಮಕ್ಕಳ, ದೊಡ್ಡವರು ಬಗೆ ಬಗೆಯ ಪಟಾಕಿ ಖರೀದಿಸಿ ಸಂಭ್ರಮಿಸಿದರು.
ಈ ಭಾರಿ ದೀಪಾವಳಿ ಹಬ್ಬಕ್ಕೆ ಹೂವು, ಹಣ್ಣುಗಳ ದರದಲ್ಲಿ ಸ್ವಲ್ಪ ಇಳಿಕೆ ಕಂಡಿದ್ದು, ಚಂಡು ಹೂವು ಒಂದು ಮಾರಿಗೆ ₹50, ಸೇವಂತಿಗೆ ಮಾರಿಗೆ ಹೂವು ₹80, ಮಲ್ಲಿಗೆ ಮಾರಿಗೆ ₹100 ಇದೆ. ಹಣ್ಣುಗಳ ದರ ಸ್ಥಿರವಾಗಿದ್ದು, ಒಂದು ಕೆ.ಜಿ ಸೇಬಿಗೆ ₹120, ದಾಳಿಂಬೆ ಬೆಲೆ ₹100, ಬಾಳೆಹಣ್ಣು ಕೆ.ಜಿಗೆ ₹100 ಇದೆ.
ಮಾರುಟ್ಟೆಯಲ್ಲಿ ಮಣ್ಣಿನ ಹಣತೆಗಳು ₹20 ರೂಪಾಯಿಂದ ₹150 ರೂಪಾಯಿ ತನಕ ಮಾರಾಟವಾದವು. ಮಣ್ಣಿನ ಹಣತೆ, ಬೊಂಬೆಗಳ ಹಣತೆ, ಪಕ್ಷಿಗಳ ಹಣತೆ, ದೇವರ ಹಣತೆಗಳು ಮಾರುಕಟ್ಟೆಯಲ್ಲಿವೆ. ಜೊತೆಗೆ ಬಣ್ಣ–ಬಣ್ಣದ ಬಗೆಬಗೆಯ ಆಕಾಶ ಬುಟ್ಟಿಗಳು ಮಾರಾಟ ಜೋರಾಗಿತ್ತು.
ದೀಪಾವಳಿ ಅಮವಾಸ್ಯೆ, ಬಲಿಂದ್ರನ ಪೂಜೆ, ಮಂಗಳವಾರ ಬಲಿಪಾಡ್ಯಮಿ ದೀಪಾವಳಿ ಹಬ್ಬ ಇದ್ದು ಗ್ರಾಹಕರಲ್ಲಿ ಸಂಭ್ರಮ ಮನೆಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.