ADVERTISEMENT

ಅನುಭವದ ಕೃಷಿಯಿಂದ ಲಾಭ ಜಾಸ್ತಿ

ಅಡಿಕೆ, ಕಾಳು ಮೆಣಸು ಬೆಳೆಯ ರೋಗಗಳ ನಿರ್ವಹಣೆ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 18 ಮೇ 2023, 15:42 IST
Last Updated 18 ಮೇ 2023, 15:42 IST
ನರಸಿಂಹರಾಜಪುರ ತಾಲ್ಲೂಕು ಕಳ್ಳಿಕೊಪ್ಪದ ಮಾತೃಶ್ರೀ ಫಾರಂ ನ ಧರ್ಮಪ್ಪಗೌಡ ಅವರ ಮನೆಯಂಗಳದಲ್ಲಿ ನಡೆದ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಪ್ರಗತಿಪರ ಕೃಷಿಕರಾದ ವನಜಾಕ್ಷಿಧರ್ಮಪ್ಪಗೌಡ ಚಾಲನೆ ನೀಡಿದರು
ನರಸಿಂಹರಾಜಪುರ ತಾಲ್ಲೂಕು ಕಳ್ಳಿಕೊಪ್ಪದ ಮಾತೃಶ್ರೀ ಫಾರಂ ನ ಧರ್ಮಪ್ಪಗೌಡ ಅವರ ಮನೆಯಂಗಳದಲ್ಲಿ ನಡೆದ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಪ್ರಗತಿಪರ ಕೃಷಿಕರಾದ ವನಜಾಕ್ಷಿಧರ್ಮಪ್ಪಗೌಡ ಚಾಲನೆ ನೀಡಿದರು   

ಕಳ್ಳಿಕೊಪ್ಪ(ಎನ್.ಆರ್.ಪುರ): ವೈಜ್ಞಾನಿಕ ಕೃಷಿ ಅಥವಾ ಅನುಭವದ ಆಧಾರದ ಮೇಲೆ ಕೃಷಿ ಮಾಡುವುದರಿಂದ ಹೆಚ್ಚು ಲಾಭ ಗಳಿಸಬಹುದು ಎಂದು ಬೆಂಗಳೂರಿನ ಕರ್ನಾಟಕ ಆಗ್ರೋ ಕೆಮಿಕಲ್ಸ್‌ನ ಹಿರಿಯ ವಿಜ್ಞಾನಿ ಡಾ.ಎಂ. ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿನ ಮಾತೃಶ್ರೀ ಫಾರಂನ ಧರ್ಮಪ್ಪ ಗೌಡರ ಮನೆಯಂಗಳದಲ್ಲಿ ಗುರುವಾರ ರೋಟರಿ ಕ್ಲಬ್ ಮತ್ತು ಲಯನ್ಸ್ ಕ್ಲಬ್, ಬೆಂಗಳೂರಿನ ಕರ್ನಾಟಕ ಆಗ್ರೋ ಕೆಮಿಕಲ್ಸ್ ಹಾಗೂ ಕೊಪ್ಪದ ಮಹಿಮಾ ಆಗ್ರೋ ಕ್ಲಿನಿಕ್ ಆಶ್ರಯದಲ್ಲಿ ನಡೆದ ಅಡಿಕೆ ಮತ್ತು ಕಾಳುಮೆಣಸು ಬೆಳೆಯಲ್ಲಿ ರೋಗ ನಿರ್ವಹಣೆ ಮತ್ತು ಸೂಕ್ಷ್ಮ ಪೋಷಕಾಂಶಗಳ ಕುರಿತ ವಿಚಾರ ಸಂಕಿರಣದಲ್ಲಿ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತಾಂತ್ರಿಕ ಮಾಹಿತಿ ನೀಡಿದರು.

‘ಮಲೆನಾಡು ಭಾಗದ ಭೂಮಿಯಲ್ಲಿ ಬೋರಾನ್ ಹಾಗೂ ಸಾರಜನಕದ ಕೊರತೆಯಿದೆ. ಬೋರಾನ್ ಕೊರತೆಯಿಂದ ಅಡಿಕೆಯ ಹರಳು ಉದುರುತ್ತಿದೆ. ಹಲವಾರು ರೈತರು ಗೂಗಲ್‌ನಲ್ಲಿ ಸಿಗುವ ಮಾಹಿತಿಯಂತೆ ಗಿಡಗಳಿಗೆ ಗೊಬ್ಬರ ನೀಡುತ್ತಿದ್ದು, ಅದು ಸರಿಯಲ್ಲ. ಎಲ್ಲಾ ಭೂಮಿಗೂ ಶಿಫಾರಸ್ಸಿನಂತೆ ಗೊಬ್ಬರ ನೀಡುವ ಅವಶ್ಯಕತೆಯಿಲ್ಲ. ಎಲ್ಲಾ ಗಿಡಗಳಿಗೂ 21 ಪೋಷಕಾಂಶಗಳು ಅಗತ್ಯವಾಗಿದ್ದು, ಅದರಲ್ಲಿ ಕನಿಷ್ಠ 17 ಪೋಷಕಾಂಶಗಳನ್ನು ಮಣ್ಣಿನ ಪರೀಕ್ಷೆ ಆಧಾರದ ಮೇಲೆ ನೀಡಬೇಕು’ ಎಂದರು.

ADVERTISEMENT

ಹಿಂದಿನಿಂದಲೂ ರೈತರು ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಮನೆಗೆ ಬಂದು ಸಮರ್ಪಕ ಮಾಹಿತಿ ನೀಡುತ್ತಿರುವುದರಿಂದ ವೈಜ್ಞಾನಿಕ ಕೃಷಿ ಮಾಡುತ್ತಿದ್ದಾರೆ. ಕೃಷಿಯಲ್ಲಿ ಕಲಿಯುವುದು ಬಹಳ ಇದೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಈ.ಸಿ.ಜೋಯಿ ಮಾತನಾಡಿ, ‘ಮಲೆನಾಡು ಭಾಗದಲ್ಲಿ ಕಾಫಿ, ಅಡಿಕೆ, ಕಾಳುಮೆಣಸನ್ನು ಹೆಚ್ಚಾಗಿ ಬೆಳೆಯುತ್ತಾರೆ. ವೈಜ್ಞಾನಿಕವಾಗಿ ಕೃಷಿ ಮಾಡುವುದರಿಂದ ಹೆಚ್ಚು ಲಾಭ ಗಳಿಸಬಹುದು’ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಎಸ್.ಸಂತೋಷ್ ಕುಮಾರ್ ಮಾತನಾಡಿ, ‘ಇತ್ತೀಚೆಗೆ ಅಡಿಕೆಗೆ ರೋಗ ಬಾಧೆ ಹೆಚ್ಚಾಗಿದೆ. ಅಡಿಕೆ ಎಳೆ ಹಳದಿ ರೋಗ, ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದ್ದು ಸೂಕ್ತ ಪರಿಹಾರ ಸಿಕ್ಕಿಲ್ಲ’ ಎಂದರು.

ಮಾತೃಶ್ರೀ ಫಾರಂನ ಮಾಲೀಕ ಎಚ್.ಡಿ.ವಿನಯ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಅಡಿಕೆಗೆ ಉತ್ತಮ ಧಾರಣೆಯಿದ್ದರೂ ರೋಗಗಳ ಬಾಧೆ ಹೆಚ್ಚಾಗಿದೆ. ರೈತರಿಗೆ ವೈಜ್ಞಾನಿಕ ಕೃಷಿಯ ಬಗ್ಗೆ ಜಾಗೃತಿ ಮೂಡಿಸಲು ವಿಜ್ಞಾನಿಗಳನ್ನು ಕರೆಸಿ ವಿಚಾರ ಸಂಕಿರಣ ಆಯೋಜಿಸಲಾಗಿದೆ’ ಎಂದರು.

ಕಳ್ಳಿಕೊಪ್ಪದ ಪ್ರಗತಿಪರ ಕೃಷಿಕರಾದ ವನಜಾಕ್ಷಿ ಧರ್ಮಪ್ಪಗೌಡ ಚಾಲನೆ ನೀಡಿದರು. ಕರ್ನಾಟಕ ಆಗ್ರೋ ಕೆಮಿಕಲ್ಸ್‌ನ ಮಾರಾಟ ವಿಭಾಗದ ಎಂ.ಮಹದೇವ್, ನಾಗೇಂದ್ರ, ಮಾತೃಶ್ರೀ ಫಾರಂನ ಮಾಲೀಕ ವಿನೋದ್ ಇದ್ದರು.

ರೈತರೊಂದಿಗೆ ಡಾ.ಎಂ.ನಾರಾಯಣಸ್ವಾಮಿ ಸಂವಾದ ನಡೆಸಿದರು. ಹಿರಿಯ ವಿಜ್ಞಾನಿ ಡಾ.ಎಂ.ನಾರಾಯಣಸ್ವಾಮಿ ಹಾಗೂ ವನಜಾಕ್ಷಿ ಧರ್ಮಪ್ಪ ಗೌಡ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.