ಚಿಕ್ಕಮಗಳೂರು: ‘ಜಿಲ್ಲಾ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರ ಕಾಯಂ ಹಾಗೂ ನೇರಪಾವತಿ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಪ್ರೊ.ಬಿ.ಕೃಷ್ಣಪ್ಪ ಅವರ 87ನೇ ಜಯಂತಿ ಮತ್ತು ದಸಂಸ ಸದಸ್ಯತ್ವ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಆಸ್ಪತ್ರೆಗಳು, ಗ್ರಾಮ ಪಂಚಾಯಿತಿಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ನೇರ ಪಾವತಿಯಡಿಗೆ ತರಲು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗವುದು ಎಂದರು.
ಜೀವದ ಹಂಗು ತೊರೆದು ನಗರದಾದ್ಯಂತ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.
‘ದಲಿತ ಚಳವಳಿ ಹರಿಕಾರ ಪ್ರೊ.ಬಿ.ಕೃಷ್ಣಪ್ಪ ಅವರು ಅಸಮಾನತೆ, ಅಸ್ಪೃಶ್ಯತೆ ವಿರುದ್ಧ ಹೋರಾಡಿ ಶೋಷಿತರ ಧ್ವನಿಯಾದವರು. ದಲಿತ ಸಮುದಾಯಕ್ಕೆ ಸೀಮಿತರಾಗದೆ ನೊಂದವರಿಗೆ ನ್ಯಾಯ ಕೊಡಿಸಲು ಚಳವಳಿ ರೂಪಿಸಿದ್ದರು. ಶೋಷಿತರ ಏಳಿಗೆಗೆ ಆಧಾರವಾಗಿದ್ದರು’ ಎಂದು ಸ್ಮರಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪ ಅವರು ಬಿ.ಆರ್.ಅಂಬೇಡ್ಕರ್ ಅವರ ಆಶಯದ ರಥವನ್ನು ಮುಂದಕ್ಕೆ ಎಳೆದವರು. ಸಾಧ್ಯವಾದಲ್ಲಿ ನಾವೂ ಆ ರಥವನ್ನು ಮುಂದೆ ಎಳೆಯಲು ಪ್ರಯತ್ನಿಸಬೇಕೇ ಹೊರತು, ಹಿಂದಕ್ಕೆ ತಳ್ಳುವ ಕೆಲಸ ಮಾಡಬಾರದು ಎಂದು ತಿಳಿಸಿದರು.
‘ದಸಂಸ ಸದಸ್ಯತ್ವ ಆಂದೋಲನ ಕೇವಲ ರಶೀದಿಗಳಿಗೆ ಸೀಮಿತವಾಗಬಾರದು. ವೈಚಾರಿಕತೆ ಅಳವಡಿಸಿಕೊಂಡು ಸದಸ್ಯತ್ವ ಪಡೆದಾಗ ಮಾತ್ರ ಅದಕ್ಕೆ ಶಕ್ತಿ ಬರಲಿದೆ. ವೈಚಾರಿಕತೆ ಅಳವಡಿಸಿಕೊಂಡು ಸಾಮಾಜಿಕ ನ್ಯಾಯದ ಪರ ಹೋರಾಟ ಮುನ್ನಡೆಸಬೇಕು’ ಎಂದರು.
ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಮಾತನಾಡಿ, ‘ಗುತ್ತಿಗೆ ಕಾರ್ಮಿಕರಿಗೆ ಸರ್ಕಾರ ನಿಗದಿಗೊಳಿಸಿರುವ ವೇತನ ಜೀವನಕ್ಕೆ ಸಾಕಾಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ಹಾಗೂ ಆರೋಗ್ಯದಲ್ಲಿ ಏರುಪೇರು ಉಂಟಾದರೆ ಸಂಕಷ್ಟ ಎದುರಾಗಲಿದೆ. ಹೀಗಾಗಿ ಸಮಾಜಕ್ಕಾಗಿ ದುಡಿಯುವ ಸ್ವಚ್ಛತಾ ಕರ್ಮಚಾರಿಗಳ ಮೂಲ ಬೇಡಿಕೆ ಈಡೇರಿಸಬೇಕು’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದಸಂಸ ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್, ‘ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು 1974ರಲ್ಲಿ ಪ್ರೊ.ಬಿ.ಕೃಷ್ಣಪ್ಪ ಅವರು ದಸಂಸ ಹುಟ್ಟು ಹಾಕಿದರು. ಶೋಷಿತರ ಪರ ಹೋರಾಟಕ್ಕಿಳಿದು ಬದುಕಿನುದ್ದಕ್ಕೂ ಅವರು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿದ್ದರು’ ಎಂದರು.
ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎನ್.ರಾಜಶೇಖರ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ.ಶಿವಾನಂದ ಸಾವಳಗಿ, ಮಾರುತಿ ಬಿ.ಹೊಸಮನಿ, ರಾಜಶೇಖರ್, ವೆಂಕಟರಾಮಪ್ಪ, ದುರ್ಗಾದಾಸ್, ಎನ್.ಲೋಕೇಶ್, ಕೆ.ನಂಜಪ್ಪ, ಆದಿನಾರಾಯಣ, ತಮ್ಮಣ್ಣ ಕಾನಗಡ್ಡಿ, ಮಹದೇವ ಪ್ರಸಾದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.