ಕೊಪ್ಪ: ‘ಮಲೆನಾಡಿಗರನ್ನು ಉಳಿಸಿ’ ಎಂಬ ನಿಟ್ಟಿನಲ್ಲಿ ಸರ್ಕಾರದ ಎದುರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಲೆನಾಡು ಜನಪರ ಒಕ್ಕೂಟ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೆ.20ರಂದು ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಕ್ಷೇತ್ರ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಈ ಹೋರಾಟ ಹಲವು ವರ್ಷಗಳಿಂದ ನಡೆಸುತ್ತಿದ್ದೇವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಹಿ ಸಂಗ್ರಹಿಸುವುದರ ಜತೆಗೆ
ಸಭೆಗಳನ್ನು ನಡೆಸಲಾಗಿದೆ. ಸಭೆಗಳಲ್ಲಿ ಮಲೆನಾಡಿಗರು ಎದುರಿಸುತ್ತಿರುವ ಹಲವಾರು ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಪ್ರತಿಭಟನೆಗೆ ಬೆಂಗಳೂರಿನಲ್ಲಿರುವ ಮಲೆನಾಡಿ ಗರು ಕೈ ಜೋಡಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ’ ಎಂದರು.
‘ಮಲೆನಾಡನ್ನು ವಿಶೇಷ ಕೃಷಿ ವಲಯವಾಗಿ ಘೋಷಿಸಬೇಕು. ಹಾಲಿನ ಘಟಕ ಸ್ಥಾಪಿಸಿ ಕೆಎಂಎಫ್ ಸಂಪರ್ಕ ಕಲ್ಪಿಸಬೇಕು. ಎಲೆಚುಕ್ಕಿ ರೋಗಕ್ಕೆ ಲಸಿಕೆ ಸಂಶೋಧಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 10 ಎಕರೆ ಜಾಗವನ್ನು ಆಶ್ರಯ ನಿವೇಶನಕ್ಕೆ ಕಾಯ್ದಿರಿಸಬೇಕು. ಪರಿಸರ ಸೂಕ್ಷ್ಮ ವಲಯ,
ಹುಲಿ ಯೋಜನೆ ಇತ್ಯಾದಿಗಳಿಂದ ಆಗುವ ತೊಂದರೆ ತಪ್ಪಿಸಬೇಕು. ಸೆಕ್ಷನ್ 4 ವಾಪಸ್ ಪಡೆಯುವುದು, ಏಪ್ರಿಲ್ 15ಅನ್ನು ಮಲೆನಾಡು ದಿನವನ್ನಾಗಿ ಆಚರಿಸುವುದು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ಮುಖ್ಯಮಂತ್ರಿಯವರು ಮಲೆನಾಡಿಗರ ಸಭೆ ಕರೆಯವುದಾಗಿ ಹೇಳಿದ್ದರೂ ಈವರೆಗೆ ಸಭೆ ಕರೆದಿಲ್ಲ’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲೆನಾಡು ಜನಪರ ಒಕ್ಕೂಟದ ಮುಖಂಡರಾದ ಪ್ರವೀಣ್ ಬೆಳ್ಳಾಲೆ, ಉದಯ್ ಹಸಿರುಕೊಡಿಗೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.