ADVERTISEMENT

ಪಿಡಿಒ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ನೌಕರರ ರಕ್ಷಣೆಗೆ ಕಟ್ಟುನಿಟ್ಟಿನ ಕಾನೂನು ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 6:58 IST
Last Updated 1 ನವೆಂಬರ್ 2022, 6:58 IST
ಪಿಡಿಒ ಮೇಲಿನ ಹಲ್ಲೆ ಖಂಡಿಸಿ ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನರೇಗಾ ತಾಲ್ಲೂಕು ನಿರ್ದೇಶಕ ಕಲ್ಲಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಪಿಡಿಒ ಮೇಲಿನ ಹಲ್ಲೆ ಖಂಡಿಸಿ ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನರೇಗಾ ತಾಲ್ಲೂಕು ನಿರ್ದೇಶಕ ಕಲ್ಲಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.   

ಕಡೂರು: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ಸರ್ಕಾರಿ ನೌಕರರ ಸಂಘ, ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸೋಮವಾರ ಕಡೂರಿನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಮಾತನಾಡಿ, ‘ನಾಗೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ವಸಂತಕುಮಾರ್ ಅಲ್ಲಿನ ಪಿಡಿಒ ಪದ್ದಣ್ಣ ಗವಾಡಿಯಾ ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಪಂಚಾಯಿತಿಯ ಅಭಿವೃದ್ಧಿಯಲ್ಲಿ ಪಿಡಿಒಗಳ ಪಾತ್ರ ಬಹುಮುಖ್ಯವಾದುದು. ಅಂತಹ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವುದು ಅಮಾನವೀಯ. ಜನಪ್ರತಿನಿಧಿಗಳ ಈ ವರ್ತನೆ ಸರಿಯಲ್ಲ. ಸರ್ಕಾರ ಕೂಡಲೇ ಸರ್ಕಾರಿ ನೌಕರರ ರಕ್ಷಣೆಗೆ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್ ಮಾತನಾಡಿ, ‘ಸರ್ಕಾರಿ ನೌಕರರ ಮೇಲಿನ ಹಲ್ಲೆಯನ್ನು ಖಂಡಿಸುತ್ತೇನೆ. ಹಲ್ಲೆಗೊಳಗಾದ ಪಿಡಿಒ ಅವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಂಘ ಸದಾ ಅವರನ್ನು ಬೆಂಬಲಿಸುತ್ತದೆ’ ಎಂದರು.

ADVERTISEMENT

ಮನವಿಯನ್ನು ತಾಲ್ಲೂಕು ನರೇಗಾ ನಿರ್ದೇಶಕ ಕಲ್ಲಪ್ಪ ಮತ್ತು ತಹಶೀಲ್ದಾರ್ ಉಮೇಶ್ ಅವರಿಗೆ ಸಲ್ಲಿಸಲಾಯಿತು. ಶಿಕ್ಷಕ ಮಲ್ಲಿಕಾರ್ಜುನ್ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮ‌ ಪಂಚಾಯಿತಿಗಳ ಪಿಡಿಒಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.