ADVERTISEMENT

ಮೂಡಿಗೆರೆ: ನಿವೇಶನ ರಹಿತರಿಂದ ಹಕ್ಕುಪತ್ರಕ್ಕೆ ಒತ್ತಾಯಿಸಿ ಪ್ರತಿಭಟನೆ

ಮೂಡಿಗೆರೆ: ನಿವೇಶನ ರಹಿತರಿಂದ ಹಕ್ಕುಪತ್ರಕ್ಕೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 12:19 IST
Last Updated 27 ಜೂನ್ 2022, 12:19 IST
ನಿವೇಶನ ನೀಡುವಂತೆ ಒತ್ತಾಯಿಸಿ ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ನಿವೇಶನ ರಹಿತ ಕಾರ್ಮಿಕರು ಪ್ರತಿಭಟನೆ ನಡೆಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷಕುಮಾರ್‌ಗೆ ಮನವಿ ಸಲ್ಲಿಸಿದರು.
ನಿವೇಶನ ನೀಡುವಂತೆ ಒತ್ತಾಯಿಸಿ ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ನಿವೇಶನ ರಹಿತ ಕಾರ್ಮಿಕರು ಪ್ರತಿಭಟನೆ ನಡೆಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷಕುಮಾರ್‌ಗೆ ಮನವಿ ಸಲ್ಲಿಸಿದರು.   

ಮೂಡಿಗೆರೆ: ತಾಲ್ಲೂಕಿನ ನಿವೇಶನ ರಹಿತರಿಗೆ ಸರ್ಕಾರ, ಚುನಾಯಿತ ಪ್ರತಿನಿಧಿಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ನಿವೇಶನರಹಿತ ಕಾರ್ಮಿಕರ ಸಂಘದ ಅಧ್ಯಕ್ಷ ಡಿ. ರವಿ ಆರೋಪಿಸಿದರು.

ತಾಲ್ಲೂಕಿನ ಚಿನ್ನಿಗಾ, ಬಣಕಲ್, ಗೋಣಿಬೀಡು, ಮಾಕೋನಹಳ್ಳಿ, ನಂದೀಪುರ ಹಾಗೂ ಹೆಸ್ಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತ ಕಾರ್ಮಿಕರು ಸೋಮವಾರ ತಾಲ್ಲೂಕು ಪಂಚಾಯಿತಿ ಮುಂಭಾಗ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ನಿವೇಶನಕ್ಕಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಕಾರ್ಮಿಕರು ಇಂದು ಮನೆಯಿಲ್ಲದೇ ಬಾಡಿಗೆ ಮನೆಗಳಲ್ಲಿ, ಕೂಲಿ ಲೈನುಗಳಲ್ಲಿ ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿವೇಶನವಿದ್ದರೂ ಅದನ್ನು ಹಂಚಿಕೆ ಮಾಡಿ ವಿತರಣೆ ಮಾಡದೇ ಕಾಲಹರಣ ಮಾಡಲಾಗುತ್ತಿದೆ. ಹೋರಾಟ ನಡೆಸುತ್ತಿರುವವರೆಲ್ಲರೂ ಸ್ಥಳೀಯ ನಿವಾಸಿಗಳೇ ಆಗಿದ್ದು, ಹತ್ತಾರು ಬಾರಿ ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಕಚೇರಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ತಾಲ್ಲೂಕಿನಲ್ಲಿ 429 ನಿವೇಶನ ರಹಿತ ಕಾರ್ಮಿಕ ಕುಟುಂಬಗಳಿದ್ದು, ಅವರೆಲ್ಲರಿಗೂ ಹಕ್ಕುಪತ್ರ ನೀಡುವವರೆಗೂ ಹೋರಾಟ ನಡೆಸಲಾಗುವುದು’ ಎಂದರು.

ADVERTISEMENT

ಸಂಘದ ಕಾರ್ಯದರ್ಶಿ ರಾಜೇಶ್ ಮಾತನಾಡಿ, ‘ನಿವೇಶನ ಹಂಚಿಕೆ ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವಿದೆ. ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಸುಲಭವಾಗಿ ಶ್ರೀಮಂತರಿಗೆ ನಮೂನೆ 53, ನಮೂನೆ 57 ಅಡಿಯಲ್ಲಿ ಮಂಜೂರು ಮಾಡುವ ಅಧಿಕಾರಿಗಳು, ಬಡವರು ಸೂರಿಗಾಗಿ ನಿವೇಶನವನ್ನು ಬೇಡಿದರೆ ನೀಡಲು ತಾತ್ಸಾರ ತೋರುತ್ತಾರೆ. ಪ್ರತಿ ಹೋರಾಟ ಮಾಡಿದಾಗಲೂ ನಿವೇಶನ ನೀಡುವ ಭರವಸೆ ನೀಡುವ ಅಧಿಕಾರಿಗಳು, ಹೋರಾಟದ ಬಳಿಕ ನಿರ್ಲಕ್ಷ್ಯ ವಹಿಸುತ್ತಾರೆ. ಕೂಡಲೇ ನಿವೇಶನಕ್ಕೆ ಮಂಜೂರಾಗಿರುವ ಭೂಮಿಯನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಿ, ಹಕ್ಕುಪತ್ರ ವಿತರಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಮನವಿಯನ್ನು ಸ್ವೀಕರಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷಕುಮಾರ್, ‘ತಾನು ಇಲ್ಲಿಗೆ ಬಂದು ಕೆಲವೇ ದಿನಗಳಾಗಿವೆ. ನಿವೇಶನ ರಹಿತರಿಗೆ ನಿವೇಶನ ನೀಡುವ ಬಗ್ಗೆ ಗಮನ ಹರಿಸಿದ್ದೇನೆ. ನಂದೀಪುರದಲ್ಲಿ ನಿವೇಶನಕ್ಕಾಗಿ ಜಾಗ ಕಾಯ್ದಿರಿಸಲಾಗಿದೆ. ಬೇರೆ ಕಡೆಗಳಲ್ಲಿ ಸ್ಥಳ ಗುರುತು ಮಾಡಿ ನಿವೇಶನ ಹಂಚಿಕೆ ಮಾಡಲು ತಹಶೀಲ್ದಾರ್‌ರೊಂದಿಗೆ ಮಾತನಾಡುತ್ತೇನೆ. ಪಿಡಿಒಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು. ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.

ಸಂಘದ ಕಾರ್ಯದರ್ಶಿ ರಾಜೇಶ್, ಪದಾಧಿಕಾರಿಗಳಾದ ಕೃಷ್ಣಪ್ಪ, ಪ್ರತಿಮಾ, ಗೌರಮ್ಮ, ವಿಶಾಲ, ಮಂಜುನಾಥ್, ರವಿಚಿನ್ನಿಗ, ವಿಠಲ್ ಜಿ. ಹೊಸಳ್ಳಿ, ಜಯೇಂದ್ರ, ಉಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.