ADVERTISEMENT

ಅನಿಯಮಿತ ವಿದ್ಯುತ್ ಕಡಿತ ಸಲ್ಲದು

ಕೊಪ್ಪ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆಯಲ್ಲಿ ಅಧಿಕಾರಿಗಳಿಗೆ ರಾಜೇಗೌಡ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 2:12 IST
Last Updated 23 ಜನವರಿ 2021, 2:12 IST
ಕೊಪ್ಪ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ್ ಪರಮೇಶ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಶಾಸಕ ಟಿ.ಡಿ.ರಾಜೇಗೌಡ ಇದ್ದರು.
ಕೊಪ್ಪ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ್ ಪರಮೇಶ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಶಾಸಕ ಟಿ.ಡಿ.ರಾಜೇಗೌಡ ಇದ್ದರು.   

ಕೊಪ್ಪ: ‘ರೈತರು ಈಗಾಗಲೇ ಸಂಕಷ್ಟ ದಲ್ಲಿದ್ದಾರೆ. ಬೆಳೆಗೆ ನೀರು ಹಾಯಿಸುವ ಕಾಲದಲ್ಲಿ ಅನಿಯಮಿತವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ಅವರು ಮತ್ತಷ್ಟು ಸಂಕಷ್ಟಕ್ಕೀಡಾಗುತ್ತಾರೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಇಲ್ಲಿನ ಮೆಸ್ಕಾಂ ಕಚೇರಿ ಎದುರು ಬ್ಲಾಕ್ ಕಾಂಗ್ರೆಸ್ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ‘ವಿದ್ಯುತ್ ಬಿಲ್ ಪಾವತಿಸುವಂತೆ ಮನವೊಲಿಸಿ. ಆದರೆ, ಅವರನ್ನು ಒತ್ತಡಕ್ಕೆ ಸಿಲುಕಿಸಬೇಡಿ’ ಎಂದು ಸ್ಥಳದಲ್ಲಿದ್ದ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದ ಪರಿಸ್ಥಿತಿ ಸುಧಾರಿಸಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಬಿಜೆಪಿ, ಭರವಸೆ ಈಡೇರಿಸಿಲ್ಲ. ಉದ್ಯೋ ಗಕ್ಕೆ ಪೂರಕವಾದ ಯೋಜನೆಯನ್ನೂ ಜಾರಿಗೆ ತಂದಿಲ್ಲ. ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ನಿರಂತರವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ’ ಎಂದು ದೂರಿದರು.

ADVERTISEMENT

‘ಕೇಂದ್ರವು ಜನವಿರೋಧಿ ನೀತಿ ಅನುಸರಿಸಿದೆ. ಅಗತ್ಯ ವಸ್ತುಗಳ ಬೆಲೆ, ಔಷಧದ ಬೆಲೆ ಹೆಚ್ಚಳವಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗಿದೆ, ಬಡವರಿಗೆ ಸಿಗಬೇಕಿದ್ದ ಸಿಲಿಂಡರ್‌ನ ಸಬ್ಸಿಡಿ ಹಣ ನೀಡದೇ ಬಡವರು ಸಿಲಿಂಡರ್ ಖರೀದಿಸದಂತಾಗಿದೆ’ ಎಂದು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎಂ.ಸತೀಶ್, ಕ್ಷೇತ್ರ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ ಮಾತನಾಡಿದರು.

ಪಕ್ಷದ ಮುಖಂಡ ಎ.ಎಸ್.ನಾಗೇಶ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಅನ್ನಪೂರ್ಣ ನರೇಶ್, ಪ್ರಧಾನ ಕಾರ್ಯ ದರ್ಶಿಗಳಾದ ಎಚ್.ಎಸ್.ಇನೇಶ್, ನುಗ್ಗಿ ಮಂಜುನಾಥ್, ಪಂಚಾಯತ್ ರಾಜ್ ಸಂಘಟನೆಯ ನವೀನ್ ಮಾವಿನಕಟ್ಟೆ, ಕಸಬಾ ಕಾಂಗ್ರೆಸ್ ಘಟಕದ ಚಿಂತನ್ ಬೆಳಗೊಳ ಇದ್ದರು.

ಮನವಿ ಸಲ್ಲಿಕೆ: ‘ಕೇಂದ್ರ ರೈತ ವಿರೋಧಿ ವಿದ್ಯುತ್ ಕಾಯ್ದೆ ತಂದಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದೆ. ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿದೆ. ಕೃಷಿ ಪಂಪ್ ಸೆಟ್ ವಿದ್ಯುತ್ ಕಡಿತ ಮಾಡುತ್ತಿದೆ. ಇವುಗಳನ್ನು ಕೂಡಲೇ ಹಿಂಪಡೆಯಲು ಸರ್ಕಾರಕ್ಕೆ ಸೂಚಿಸಬೇಕು’ ಎಂದು ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ್ ಪರಮೇಶ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.