ADVERTISEMENT

ದತ್ತಪೀಠ: ಮೂಲಸೌಕರ್ಯ ಕಲ್ಪಿಸಲು ಸೂಚನೆ

ಶ್ರೀರಾಮಸೇನೆಯಿಂದ ದತ್ತಮಾಲಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 13:57 IST
Last Updated 26 ಸೆಪ್ಟೆಂಬರ್ 2019, 13:57 IST
ಚಿಕ್ಕಮಗಳೂರಿನಲ್ಲಿ ಗುರುವಾರ ನಡೆದ ಸಭೆಯಲ್ಲಿ ಎಎಸ್ಪಿ ಎನ್‌ಎಸ್‌ಶ್ರುತಿ, ಎಸ್ಪಿ ಹರೀಶ್‌ ಪಾಂಡೆ, ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ಪಾಲ್ಗೊಂಡಿದ್ದರು.
ಚಿಕ್ಕಮಗಳೂರಿನಲ್ಲಿ ಗುರುವಾರ ನಡೆದ ಸಭೆಯಲ್ಲಿ ಎಎಸ್ಪಿ ಎನ್‌ಎಸ್‌ಶ್ರುತಿ, ಎಸ್ಪಿ ಹರೀಶ್‌ ಪಾಂಡೆ, ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ಪಾಲ್ಗೊಂಡಿದ್ದರು.   

ಚಿಕ್ಕಮಗಳೂರು: ದತ್ತ ಮಾಲಾ ಅಭಿಯಾನಕ್ಕೆ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ‌ದರ್ಗಾಕ್ಕೆ ಬರುವ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೂಚನೆ ನೀಡಿದರು.

ಶ್ರೀರಾಮ ಸೇನೆ ವತಿಯಿಂದ ಅ.13ರಂದು ದತ್ತಮಾಲಾ ಅಭಿಯಾನ ಏರ್ಪಡಿಸಿರುವ ನಿಮಿತ್ತ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಕಲ್ಪಿಸಬೇಕಾದ ಮೂಲಸೌಕರ್ಯಗಳ ಕುರಿತ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಕುಡಿಯುವ ನೀರು ಸಹಿತ ಮೂಲಸೌಕರ್ಯ ಕಲ್ಪಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.

ನಿರಂತರ ವಿದ್ಯುತ್ ಸರಬರಾಜು ಇರುವಂತೆ ನೋಡಿಕೊಳ್ಳಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು,

ADVERTISEMENT

ಗರದಿಂದ ಐ.ಡಿ.ಪೀಠ ಮಾರ್ಗದ ರಸ್ತೆಯ ರಿಪೇರಿ ಮಾಡಿಸಬೇಕು. ಮಾರ್ಗದ ತಿರುವು ಮತ್ತು ವಿವಿಧೆಡೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಲೊಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭಕ್ತಾಧಿಗಳ ಅಗತ್ಯಕ್ಕೆ ತಕ್ಕಂತೆ 10ರಿಂದ 15 ಮಿನಿ ಬಸ್ ಸೌಲಭ್ಯ ಒದಗಿಸಬೇಕೆಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ತಿಳಿಸಿದರು. ತಾತ್ಕಾಲಿಕ ಕ್ಲಿನಿಕ್‌ ತೆರೆಯಲು ವ್ಯವಸ್ಥೆ ಮಾಡಬೇಕು. ವೈದ್ಯರನ್ನು ನಿಯೋಜನೆ ಮಾಡಬೇಕು. ಆಂಬುಲೆನ್ಸ್‌ ವ್ಯವಸ್ಥೆ ಮಾಡಬೇಕು. ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ದತ್ತಪೀಠದಲ್ಲಿ ಕಟ್ಟಡಗಳಿಗೆ ಬಣ್ಣ ಬಳಿಸಲು, ಸಿ.ಸಿ.ಟಿವಿ ಅಳವಡಿಕೆ ಮಾಡುವಂತೆ ನಿರ್ಮಿತಿ ಕೇಂದ್ರದವರಿಗೆ ಸೂಚಿಸಿದರು. ಬಿಎಸ್‌ಎನ್‌ಎಲ್ ತರಂಗಾಂತರಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವಂತೆ ಹಾಗೂ ಅ.13ರಂದು ದತ್ತಪೀಠಕ್ಕೆ ಬರುವ ಪ್ರವಾಸಿಗರನ್ನು ನಿರ್ಬಂಧಿಸುವಂತೆ ಸಂಬಂಧಿಸಿದ ಇಲಾಖೆಯವರಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್‌ಪಾಂಡೆ ಮಾತನಾಡಿ, ಭದ್ರತೆಯ ದೃಷ್ಟಿಯಿಂದ ಬಂದೋಬಸ್ತ್ ಮಾಡಲಾಗುವುದು. ಭಕ್ತರು ಮಿನಿ ಬಸ್ಸುಗಳಲ್ಲಿ ಬಂದರೆ ಟ್ರಾಫಿಕ್ ಸಮಸ್ಯೆ ತಪ್ಪಿಸಬಹುದು ಎಂದು ರಾಮಸೇನೆಯವರಿಗೆ ತಿಳಿಸಿದರು.

ಶ್ರೀರಾಮಸೇನೆಯ ಮುಖಂಡರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.