ADVERTISEMENT

ಅಂಚೆ ಕಚೇರಿ ಬಳಿ ಶೌಚಾಲಯ ನಿರ್ಮಿಸಲು ವಿರೋಧ: ಮೂಡಿಗೆರೆ ಪ.ಪಂ.ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 3:07 IST
Last Updated 30 ಸೆಪ್ಟೆಂಬರ್ 2025, 3:07 IST
ಮೂಡಿಗೆರೆ ಅಂಚೆ ಕಚೇರಿ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಿಸದಂತೆ ಒತ್ತಾಯಿಸಿ ಸೋಮವಾರ ಪಟ್ಟಣ ಪಂಚಾಯಿತಿ ಎದುರು ಸಾರ್ವಜನಿಕರು ಪ್ರತಿಭಟನೆ ನಡೆಸಿದರು
ಮೂಡಿಗೆರೆ ಅಂಚೆ ಕಚೇರಿ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಿಸದಂತೆ ಒತ್ತಾಯಿಸಿ ಸೋಮವಾರ ಪಟ್ಟಣ ಪಂಚಾಯಿತಿ ಎದುರು ಸಾರ್ವಜನಿಕರು ಪ್ರತಿಭಟನೆ ನಡೆಸಿದರು   

ಮೂಡಿಗೆರೆ: ಪಟ್ಟಣದ ಅಂಚೆ ಕಚೇರಿ ಬಳಿ ಶೌಚಾಲಯ ನಿರ್ಮಿಸಬಾರದೆಂದು ಒತ್ತಾಯಿಸಿ ಪಟ್ಟಣದ ನಿವಾಸಿಗಳು ಸೋಮವಾರ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ಖಾಜಾ ಹುಸೇನ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎಂ.ಆರ್.ಜಗದೀಶ್ ಮಾತನಾಡಿ, ‘ಪಟ್ಟಣ ಪಂಚಾಯಿತಿಯಲ್ಲಿ ಕೀಳು ಮಟ್ಟದ ಆಡಳಿತ ವ್ಯವಸ್ಥೆ ನಡೆಯುತ್ತಿದೆ. ಸಾರ್ವಜನಿಕರ ಉಪಯೋಗಕ್ಕೆ ಬಾರದ ಎಲ್ಲಾ ಕೆಲಸಗಳು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಪಟ್ಟಣದಲ್ಲಿ ಹಿಂದೆ 3 ಶೌಚಾಲಯ ನಿರ್ಮಿಸಿ 2 ಶೌಚಾಲಯ ನಿರ್ವಹಣೆ ಇಲ್ಲದೇ ನೆಲಸಮ ಮಾಡಿದ್ದಾರೆ. ಈಗ ಉಳಿದುಕೊಂಡಿರುವ ತಾಲ್ಲೂಕು ಕಚೇರಿ ಬಳಿಯ ಶೌಚಾಲಯ ಕೂಡ ನಿರ್ವಹಣೆ ಇಲ್ಲದೇ ನಾರುತ್ತಿದೆ. ಹೊಸ ಶೌಚಾಲಯ ನಿರ್ಮಿಸುವ ಮುನ್ನ ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದಾದರೆ ಮಾತ್ರ ಶೌಚಾಲಯ ನಿರ್ಮಿಸಿ, ಸರ್ಕಾರದ ಹಣ ದುರುಪಯೋಗವಾಗುವಂತೆ ಕಾಟಾಚಾರಕ್ಕೆ ಶೌಚಾಲಯ ನಿರ್ಮಿಸುವುದಾದರೆ ಅಂತಹ ಶೌಚಾಲಯ ಅಗತ್ಯವಿಲ್ಲ' ಎಂದು ಆಗ್ರಹಿಸಿದರು.

ಪಟ್ಟಣದ ನಿವಾಸಿ ಮನ್‌ಮೋಹನ್ ಮಾತನಾಡಿ, 'ಪಟ್ಟಣದ ತತ್ಕೊಳ ರಸ್ತೆ ಸೇರಿದಂತೆ ಅನೇಕ ರಸ್ತೆಯ ಚರಂಡಿಗಳು ಬಾಯಿ ತೆರೆದುಕೊಂಡು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಎಲ್ಲಾ ರಸ್ತೆಗಳು ಗುಂಡಿ ಬಿದ್ದಿವೆ. ಎಲ್ಲಿ ನೋಡಿದರೂ ಕಸದ ರಾಶಿ ರಾರಾಜಿಸುತ್ತಿದೆ. ಇಂತಹ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು, ನೂರಾರು ವರ್ಷದಿಂದ ಅಂಚೆ ಕಚೇರಿಗೆ ತೆರಳುವ ಕಾಲುದಾರಿಯನ್ನು ಬಂದ್ ಮಾಡಿ ಶೌಚಾಲಯ ಕಟ್ಟಲು ಮುಂದಾಗಿರುವುದು ಅವೈಜ್ಞಾನಿಕವಾಗಿದೆ. ಶೌಚಾಲಯ ನಿರ್ಮಿಸುವ ಬಗ್ಗೆ ನಮ್ಮ ತಕರಾರು ಇಲ್ಲ. ಆದರೆ ಸಾರ್ವಜನಿಕರಿಗೆ ತೊಂದರೆಯಾಗದ ಪ್ರದೇಶದಲ್ಲಿ ಹೊಸ ಶೌಚಾಲಯ ನಿರ್ಮಿಸಬೇಕು' ಎಂದು ಒತ್ತಾಯಿಸಿದರು.

ADVERTISEMENT

ಪಟ್ಟಣ ಪಂಚಾಯಿತಿ ಸದಸ್ಯರಾದ ಅನುಕುಮಾರ್, ಸುಧೀರ್, ಮುಖಂಡರಾದ ಪ್ರಮೋದ್ ದುಂಡುಗ, ಜಗದೀಶ್, ಸುದೇವ್, ದಯಾಕರ್, ರತನ್ ಊರುಬಗೆ, ಸುಂದ್ರೇಶ್, ಚಂದ್ರೇಶ್, ನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.