ADVERTISEMENT

ಚಿಕ್ಕಮಗಳೂರು: ಕಳೆದ ವರ್ಷಕ್ಕಿಂತ ಸಾವಿರ ಹೆಕ್ಟೇರ್‌ನಲ್ಲಿ ಹಿಂಗಾರು ಬೆಳೆ ಕುಸಿತ

ಮುಸುಕಿನ ಜೋಳ ಬಿತ್ತನೆಯೇ ಇಲ್ಲ

ವಿಜಯಕುಮಾರ್ ಎಸ್.ಕೆ.
Published 19 ಜನವರಿ 2026, 4:32 IST
Last Updated 19 ಜನವರಿ 2026, 4:32 IST
ಚಿಕ್ಕಮಗಳೂರು ತಾಲ್ಲೂಕಿನ ಮಾಗಡಿ ಬಳಿ ರೈತರೊಬ್ಬರು ಟೊಮೆಟೊ ಬೆಳೆಯಲ್ಲಿ ಕಳೆ ತೆಗೆಯಲು ಕುಂಟೆ ಬೇಸಾಯ ಮಾಡುತ್ತಿರುವುದು
ಚಿಕ್ಕಮಗಳೂರು ತಾಲ್ಲೂಕಿನ ಮಾಗಡಿ ಬಳಿ ರೈತರೊಬ್ಬರು ಟೊಮೆಟೊ ಬೆಳೆಯಲ್ಲಿ ಕಳೆ ತೆಗೆಯಲು ಕುಂಟೆ ಬೇಸಾಯ ಮಾಡುತ್ತಿರುವುದು   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹಿಂಗಾರು ಬೆಳೆಗಳ ಬಿತ್ತನೆ ಪೂರ್ಣಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಒಂದು ಸಾವಿರ ಹೆಕ್ಟೇರ್‌ನಲ್ಲಿ ಬತ್ತನೆ ಕಡಿಮೆಯಾಗಿದ್ದು, ಮೆಕ್ಕೆ ಜೋಳ ಬಿತ್ತನೆಯೇ ಆಗಿಲ್ಲ.

ಚಿಕ್ಕಮಗಳೂರು, ಕಡೂರು, ತರೀಕೆರೆ ಮತ್ತು ಅಜ್ಜಂಪುರದಲ್ಲಿ ಮುಂಗಾರು ಮತ್ತು ಹಿಂಗಾರು ಬಿತ್ತನೆಯಾಗುತ್ತದೆ. ಉಳಿದ ಮಲೆನಾಡಿನ ತಾಲ್ಲೂಕುಗಳಲ್ಲಿ ಪ್ಲಾಂಟೇಷನ್ ಬೆಳೆಗಳು ಪ್ರಮುಖವಾಗಿವೆ.

ಮುಂಗಾರಿನಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದ ಬಿತ್ತನೆ ಕಾರ್ಯ ಕೂಡ ಚುರುಕಾಗಿತ್ತು. ಹಿಂಗಾರಿನಲ್ಲೂ ಉತ್ತಮ ಮಳೆಯಾಗಿದೆ. ಆದರೆ, ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ನಿರಂತರವಾಗಿ ಮಳೆ ಸುರಿದಿದ್ದರಿಂದ ಬಿತ್ತನೆ ಕಡಿಮೆಯಾಗಿರಬಹುದು ಎಂದು ಅಂದಾಜಿಸಲಾಗಿದೆ.

ADVERTISEMENT

ಹಿಂಗಾರಿನಲ್ಲಿ ಹಿಂಗಾರಿ ಜೋಳ, ಮುಸುಕಿನ ಜೋಳ (ಮೆಕ್ಕೆಜೋಳ), ಹುರುಳಿ, ಕಡಲೆ, ಅಲಸಂದೆ ಬಿತ್ತನೆ ಮಾಡಲಾಗುತ್ತದೆ. ಅದರಲ್ಲೂ ಪ್ರಮುಖವಾಗಿ ಕಡಲೆ ಬೆಳೆಯನ್ನು ಹೆಚ್ಚಿನದಾಗಿ ಬೆಳೆಯಲಾಗುತ್ತಿದೆ. ಹಿಂಗಾರಿ ಜೋಳ ವಾರ್ಷಿಕ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದೆ.

4,100 ಹೆಕ್ಟೇರ್‌ನಲ್ಲಿ ಬಿತ್ತನೆಯಾಗುವ ಗುರಿ ಹೊಂದಲಾಗಿತ್ತು. 4,622 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಉಳಿದ ಬೆಳೆಗಳು ವಾರ್ಷಿಕ ಗುರಿಯನ್ನು ಮುಟ್ಟಿಲ್ಲ. ಮೆಕ್ಕೆಜೋಳ 250 ಹೆಕ್ಟೇರ್‌ನಲ್ಲಿ ಬಿತ್ತನೆಯಾಗುವ ಗುರಿ ಹೊಂದಲಾಗಿತ್ತು. ಆದರೆ ಒಂದೇ ಒಂದು ಹೆಕ್ಟೇರ್‌ನಲ್ಲೂ ಬಿತ್ತನೆಯಾಗಿಲ್ಲ ಎಂದು ಕೃಷಿ ಇಲಾಖೆ ಅಂಕಿ–ಅಂಶಗಳು ಹೇಳುತ್ತವೆ.

ಮೆಕ್ಕೆಜೋಳ ಮುಂಗಾರಿನಲ್ಲಿ ಬೆಳೆದ ರೈತರು ಬೆಲೆ ಕುಸಿತದಿಂದ ತೊಂದರೆ ಅನುಭವಿಸಿದರು. ಹಾಸನದ ಖರೀದಿ ಕೇಂದ್ರಕ್ಕೆ ಒಯ್ದು ವಾಪಸ್ ತಂದು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಯಿತು. ಇದು ಕೂಡ ರೈತರಲ್ಲಿ ಬೇಸರ ತರಿಸಿದೆ. ಇದರಿಂದ ಹಿಂಗಾರಿನಲ್ಲಿ ಬಿತ್ತನೆಯನ್ನೇ ಮಾಡಿಲ್ಲ ಎಂದು ರೈತರು ಹೇಳುತ್ತಾರೆ.

ಪೂರಕ ಮಾಹಿತಿ: ಎನ್. ಸೋಮಶೇಖರ್, ಜೆ.ಒ. ಉಮೇಶ್‌ಕುಮಾರ್

ಕಡೂರಿನಲ್ಲಿ ರಾಗಿ ಬೆಳೆ ಬೆಳೆದಿರುವುದು
ಅಜ್ಜಂಪುರದಲ್ಲಿ ಕುಸುಬೆ ಬೆಳೆಗೆ ಔಷಧಿ ಸಿಂಪರಣೆ ಮಾಡುತ್ತಿರುವುದು

ಅಜ್ಜಂಪುರ: ರಾಗಿಯತ್ತ ಮುಖ ಮಾಡಿದ ರೈತರು

ತಾಲ್ಲೂಕಿನಲ್ಲಿ ಜೋಳ ಕಡಲೆ ರಾಗಿ ಪ್ರಮುಖ ಹಿಂಗಾರು ಬೆಳೆಯಾಗಿ ಬಿತ್ತನೆಯಾಗಿವೆ. ಸುಮಾರು 3 ಸಾವಿರ ಹೆಕ್ಟೇರ್‌ನಲ್ಲಿ ಕಡಲೆ ಬಿತ್ತನೆಯಾಗಿದೆ. ಬೆಳೆಯಲ್ಲಿ ಸೊರಗು ಮತ್ತು ಕಾಯಿ ಕೊರಕ ರೋಗ ಬಾಧೆ ಕಾಣಿಸಿಕೊಂಡಿದೆ. ಅಲ್ಲಲ್ಲಿ ಗಿಡಗಳು ಒಣಗಿ ಸಾಯುತ್ತಿವೆ. ಇದರಿಂದಾಗಿ ಇಳುವರಿ ಪ್ರಮಾಣ ತಗ್ಗುವ ಆತಂಕ ಎದುರಾಗಿದೆ. ಎಕರೆಗೆ 10ರಿಂದ 12 ಕ್ವಿಂಟಲ್‌ ಬದಲಿಗೆ 5ರಿಂದ 6 ಕ್ವಿಂಟಲ್‌ಗೆ ಇಳುವರಿ ಬರುವ ನಿರೀಕ್ಷೆ ಇದೆ. ಜೋಳ ಸುಮಾರು 2500 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಳೆದ ವಾರ ಸುರಿದ ಮಳೆಗೆ ಹೆಬ್ಬೂರು ಕಾಟಿಗನರೆ ನಾರಣಾಪುರ ಹರಿಯನಹಳ್ಳಿ ಭಾಗದಲ್ಲಿ ಜೋಳ ನೆಲಕ್ಕುರುಳಿದೆ. ಹಿಂಗಾರಿನಲ್ಲಿ ಈಗ ರಾಗಿ ಬೆಳೆಯತ್ತ ರೈತರು ಹೆಚ್ಚಿನ ಪ್ರಮಾಣದಲ್ಲಿ ಮುಖ ಮಾಡಿದ್ದಾರೆ. ಬೆಂಬಲ ಬೆಲೆ ₹4886 ಇರುವುದರಿಂದ ಮತ್ತು ಮೇವಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ರೈತರು ಆಸಕ್ತಿ ವಹಿಸಿದ್ದಾರೆ. ತಾಲ್ಲೂಕಿನಲ್ಲಿ ಮುಂಗಾರಿನ ಈರುಳ್ಳಿ ಮತ್ತು ಆಲೂಗಡ್ಡೆ ಕಟಾವಿನ ಬಳಿಕ ಸುಮಾರು 600 ಹೆಕ್ಟೇರಿನಲ್ಲಿ ರಾಗಿ ಹಿಂಗಾರಿನಲ್ಲಿ ಬಿತ್ತನೆ ಮಾಡಿದ್ದು ಪೈರು ಉತ್ತಮವಾಗಿದೆ.‌‌ ರಾಣೆಬೆನ್ನೂರು ಭಾಗದಲ್ಲಿ ಹೆಚ್ಚಾಗಿ ಕಂಡುಬರುವ ಕುಸುಬೆಯನ್ನು ತಾಲ್ಲೂಕಿನ ಶಿವನಿ ಕಣಬಗಟ್ಟ ಹರಿಯನಹಳ್ಳಿ ಭಾಗದ ರೈತರು 25ರಿಂದ 30 ಎಕರೆಯಲ್ಲಿ ಬಿತ್ತನೆ ಮಾಡಿದ್ದಾರೆ. ಹೊಸದಾಗಿ ಪ್ರಯೋಗ ಮಾಡಿರುವ ಬೆಳೆ ಉತ್ತಮವಾಗಿದೆ.

ಕಡೂರು: ಕಡಿಮೆಯಾದ ಕಡಲೆ ಹುರುಳಿ ಬಿತ್ತನೆ

ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಹುರುಳಿ ಮತ್ತು ಹಿಂಗಾರು ಜೋಳ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ 5968 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ ಶೇ 74.6ರಷ್ಟು ಗುರಿ ಸಾಧನೆಯಾಗಿದೆ. 2831 ಹೆಕ್ಟೇರ್ ಕಡಲೆ 795 ಹೆಕ್ಟೇರ್ ಹುರುಳಿ ಮತ್ತು 2342 ಹೆಕ್ಟೇರ್ ಜೋಳ ಬಿತ್ತನೆಯಾಗಿದೆ. ಬೆಳೆ ಪರಿಸ್ಥಿತಿ ಉತ್ತಮ ಎನ್ನುವಂತಿದ್ದು ಇನ್ನೂ ಹಲವೆಡೆ ರಾಗಿ ಕೂಡ ಬಿತ್ತನೆಯಾಗಿ ತೆನೆ ಕಟ್ಟುವ ಹಂತದಲ್ಲಿದೆ. ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ರಾಗಿ ಫೆಬ್ರುವರಿ ಮಧ್ಯಭಾಗ ಅಥವಾ ಅಂತ್ಯಕ್ಕೆ ಕಟಾವು ಆಗುವ ಸಂಭವವಿದ್ದು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವುದು ಕಷ್ಟವಾಗಬಹುದು. ಹಲವೆಡೆ ಜೋಳ ತೆನೆ ಕಟ್ಟುವಲ್ಲಿ ಹಿನ್ನಡೆ ಅನುಭವಿಸಿದೆ.

ತರಕಾರಿ ಬೆಳೆ ನಿರಂತರ

ಚಿಕ್ಕಮಗಳೂರು ಮತ್ತು ಕಡೂರು ತಾಲ್ಲೂಕಿನಲ್ಲಿ ತರಕಾರಿ ಬೆಳೆ ನಿರಂತರವಾಗಿ ಬೆಳೆಯಲಾಗುತ್ತಿದೆ. ಟೊಮೆಟೊ ಬೀನ್ಸ್ ಸೌತೆಕಾಯಿ ಸೇರಿ ಹಲವು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬಹುತೇಕ ಎಲ್ಲಾ ಕೆರೆಗಳಲ್ಲಿ ನೀರಿದ್ದು ರೈತರಿಗೆ ವರದಾನವಾಗಿದೆ. ಕೊಳವೆ ಬಾವಿ ಹೊಂದಿರುವ ರೈತರು ಸಹ ತರಕಾರಿ ಬೆಳೆಯುತ್ತಿದ್ದಾರೆ. ಕೆರೆಗಳಲ್ಲಿ ನೀರು ಇರುವುದರಿಂದ ಅಂತರ್ಜಲ ಪ್ರಮಾಣ ಕುಸಿದಿಲ್ಲ. ಆದ್ದರಿಂದ ತರಕಾರಿ ಬೆಳೆಯಲು ಅನುಕೂಲ ಆಗಿದೆ ಎನ್ನುತ್ತಾರೆ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.