ADVERTISEMENT

ರೈಲ್ವೆ ಮಾರ್ಗ ವಿದ್ಯುದೀಕರಣ ಪೂರ್ಣ: ಪ್ರಾಯೋಗಿಕ ರೈಲು ಸಂಚಾರ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 13:34 IST
Last Updated 26 ಜೂನ್ 2022, 13:34 IST
ಬೀರೂರಿನಿಂದ ಹೊಸದುರ್ಗ ರೋಡ್ ನಿಲ್ದಾಣದವರೆಗೆ ಪೂರ್ಣಗೊಂಡಿರುವ ರೈಲ್ವೆ ವಿದ್ಯುದೀಕರಣ ಮಾರ್ಗದ ಪ್ರಾಯೋಗಿಕ ಸಂಚಾರ ಸೇವೆಗೆ ಶನಿವಾರ ಬೀರೂರು ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ಪ್ರಧಾನ ಎಲೆಕ್ಟ್ರಿಕಲ್ ಎಂಜಿಯರ್ ಜೈಪಾಲ್ ಸಿಂಗ್, ರೈಲ್ವೆ  ವಿಭಾಗೀಯ ಸಹಾಯಕ ವ್ಯವಸ್ಥಾಪಕ ದೇವಸಹಾಯಮ್ ಚಾಲನೆ ನೀಡಿದರು. ವಿಭಾಗೀಯ ನಿರ್ವಹಣಾ ವ್ಯವಸ್ಥಾಪಕ ಸರವಣ್ ಇದ್ದರು.
ಬೀರೂರಿನಿಂದ ಹೊಸದುರ್ಗ ರೋಡ್ ನಿಲ್ದಾಣದವರೆಗೆ ಪೂರ್ಣಗೊಂಡಿರುವ ರೈಲ್ವೆ ವಿದ್ಯುದೀಕರಣ ಮಾರ್ಗದ ಪ್ರಾಯೋಗಿಕ ಸಂಚಾರ ಸೇವೆಗೆ ಶನಿವಾರ ಬೀರೂರು ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ಪ್ರಧಾನ ಎಲೆಕ್ಟ್ರಿಕಲ್ ಎಂಜಿಯರ್ ಜೈಪಾಲ್ ಸಿಂಗ್, ರೈಲ್ವೆ  ವಿಭಾಗೀಯ ಸಹಾಯಕ ವ್ಯವಸ್ಥಾಪಕ ದೇವಸಹಾಯಮ್ ಚಾಲನೆ ನೀಡಿದರು. ವಿಭಾಗೀಯ ನಿರ್ವಹಣಾ ವ್ಯವಸ್ಥಾಪಕ ಸರವಣ್ ಇದ್ದರು.   

ಬೀರೂರು: ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗದ ಬೀರೂರು- ಹೊಸದುರ್ಗ ರೋಡ್ ನಿಲ್ದಾಣಗಳ ನಡುವಿನ ರೈಲ್ವೆ ಮಾರ್ಗ ವಿದ್ಯುದೀಕರಣ ಸಂಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಪ್ರಯಾಣಿಕ ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ಎಲೆಕ್ಷ್ಟ್ರಿಕಲ್ ಎಂಜಿನಿಯರ್ ಜೈಪಾಲ್ ಸಿಂಗ್ ಪ್ರಕಟಿಸಿದರು.

ಬೀರೂರು ರೈಲುನಿಲ್ದಾಣದಲ್ಲಿ ಶನಿವಾರ ಬೀರೂರು ಮತ್ತು ಹೊಸದುರ್ಗ ರೋಡ್ ರೈಲು ನಿಲ್ದಾಣಗಳ ನಡುವಿನ 39 ಕಿ.ಮೀ. ದೂರದ ರೈಲುಮಾರ್ಗ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಂತರರಾಜ್ಯ ಸಂಪರ್ಕ ಕಲ್ಪಿಸುವ ಬೆಂಗಳೂರು- ಹುಬ್ಬಳ್ಳಿ ಮಾರ್ಗದಲ್ಲಿ ಬೀರೂರು ಮೂಲಕ ಹಾದುಹೋಗುವ ರೈಲುಗಳು ವಿದ್ಯುತ್ ಮಾರ್ಗದಲ್ಲಿ ಚಲಿಸಲು ಅವಕಾಶ ಕಲ್ಪಿಸಲಾಗುತ್ತಿದ್ದು, ಬೆಂಗಳೂರಿನಿಂದ ಹುಬ್ಬಳ್ಳಿವರೆಗೆ ಕಾಮಗಾರಿ ಭರದಿಂದ ಸಾಗಿದೆ. ಸಂಪೂರ್ಣಗೊಂಡಿರುವ ಬೀರೂರು-ಹೊಸದುರ್ಗ ರೋಡ್ ನಡುವಣ ವಿದ್ಯುದೀಕರಣ ಮಾರ್ಗದಲ್ಲಿ ರೈಲು ಸಂಚಾರ ಪ್ರಾಯೋಗಿಕ ಪರೀಕ್ಷೆಯು ಯಶಸ್ವಿಯಾಗಿದ್ದು, ಸಂಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡುವುದು ಬಾಕಿ ಇದೆ ಎಂದು ತಿಳಿಸಿದರು.

ADVERTISEMENT

ರೈಲು ಪ್ರಾಯೋಗಿಕ ಸಂಚಾರಕ್ಕೆ ಹಸಿರು ನಿಶಾನೆ ತೋರಿದ ಸಹಾಯಕ ವಿಭಾಗೀಯ ವ್ಯವಸ್ಥಾಪಕ ದೇವಸಹಾಯಮ್, ‘ಬೆಂಗಳೂರಿನಿಂದ ಈ ಮಾರ್ಗವಾಗಿ ಹುಬ್ಬಳ್ಳಿ ಮೂಲಕ ದೇಶದ ವಿವಿಧ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ 50ಕ್ಕೂ ಹೆಚ್ಚಿನ ರೈಲುಗಳು ಸಂಚರಿಸುತ್ತಿದ್ದು, 2022ರ ಡಿಸೆಂಬರ್ ಒಳಗೆ ಈ ಮಾರ್ಗವನ್ನು ಸಂಪೂರ್ಣ ವಿದ್ಯುದೀಕರಣಗೊಳಿಸುವ ಗುರಿ ಹೊಂದಲಾಗಿದೆ. ಇದರಿಂದ ಗ್ರಾಹಕರ ಪ್ರಯಾಣದ ಸಮಯದಲ್ಲಿ ಉಳಿತಾಯವಾಗಲಿದೆ. ಇಲ್ಲಿ ಜೋಡಿಹಳಿ ನಿರ್ಮಾಣ ಕಾಮಗಾರಿ ಸಹ ಪ್ರಗತಿಯಲ್ಲಿದ್ದು, ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ಒದಗಿಸುವ ಜತೆಗೆ ಆಧುನೀಕರಣದ ಸೌಲಭ್ಯ ಒದಗಿಸಲು ಶ್ರಮಿಸಲಾಗುತ್ತಿದೆ’ ಎಂದು ತಿಳಿಸಿದರು.

ವಿಭಾಗೀಯ ನಿರ್ವಹಣಾ ವ್ಯವಸ್ಥಾಪಕ ಸರವಣ್, ಹುಬ್ಬಳ್ಳಿ ವಲಯ ವಿದ್ಯುತ್ ಎಂಜಿನಿಯರ್, ಅಧಿಕಾರಿಗಳು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.