ADVERTISEMENT

ಮಳೆ: ವಿವಿಧೆಡೆ ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 4:51 IST
Last Updated 22 ಅಕ್ಟೋಬರ್ 2021, 4:51 IST
ಚಿಕ್ಕಮಗಳೂರಿನ ರಾಮನಹಳ್ಳಿಯಲ್ಲಿ ಮನೆಯೊಂದರೊಳಕ್ಕೆ ನೀರು ನುಗ್ಗಿರುವುದು.
ಚಿಕ್ಕಮಗಳೂರಿನ ರಾಮನಹಳ್ಳಿಯಲ್ಲಿ ಮನೆಯೊಂದರೊಳಕ್ಕೆ ನೀರು ನುಗ್ಗಿರುವುದು.   

ಚಿಕ್ಕಮಗಳೂರು: ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ವಿಜಯಪುರ, ರಾಮನಹಳ್ಳಿ, ಗೌರಿಕಾಲುವೆ, ಟಿಪ್ಪುನಗರ ಸಹಿತ ವಿವಿಧೆಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ನಗರದಲ್ಲಿ ಸಂಜೆ 5.30ರ ಹೊತ್ತಿಗೆ ಬಿರುಸಾಗಿ ಮಳೆ ಸುರಿಯಿತು. ಗುಡುಗು ಮಿಂಚಿನ ಆರ್ಭಟ ಇತ್ತು. ರಾಮನಹಳ್ಳಿ, ವಿಜಯಪುರ, ಮಲ್ಲಂದೂರು ರಸ್ತೆ ಸಹಿತ ವಿವಿಧೆಡೆಗಳಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿಯಿತು. ಅಂಗಡಿ, ಮಳಿಗೆಗಳಿಗೆ ನೀರು ನುಗ್ಗಿದೆ.

‘ಮನೆಯೊಳಕ್ಕೆ ಚರಂಡಿ ನೀರು ನುಗ್ಗಿದೆ. ಕೊಳಚೆ ನೀರನ್ನು ಹೊರಹಾಕುವುದೇ ಮನೆಯವರಿಗೆಲ್ಲ ಕೆಲಸವಾಗಿದೆ’ ಎಂದು ರಾಮನಹಳ್ಳಿಯ ರಂಗಪ್ಪ ಸಂಕಷ್ಟ ತೋಡಿಕೊಂಡರು.

ADVERTISEMENT

ಕೆಎಸ್‌ಒಯು ಕೇಂದ್ರದ ಮುಂಭಾಗದ ಮೋರಿಯ ಸೇತುವೆ ನೆಲಕಚ್ಚಿದೆ, ಗಿರಿಶ್ರೇಣಿಯ ಹೊನ್ನಮ್ಮನ ಹಳ್ಳದ ಸೇತುವೆ ಬದಿಯ ಮಣ್ಣು ಕುಸಿದಿದೆ.

ಮಧುವನ ಬಡಾವಣೆಯ ಕೆಎಸ್‌ಒಯು ಕೇಂದ್ರದ ಮುಂಭಾಗದ ಮೋರಿಯ ಸೇತುವೆ ಕುಸಿದಿದೆ. ಕೇಂದ್ರದಲ್ಲಿದ್ದವರನ್ನು ಅಗ್ನಿ ಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಹೊರಕ್ಕೆ ದಾಟಿಸಿದರು. ಮೋರಿ ಸೇತುವೆ ಕುಸಿದ ಜಾಗದಲ್ಲಿ ಏಣಿ ಹಾಕಿ ದಾಟಿಸಲಾಯಿತು. ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಅವರು ಸ್ಥಳ ಪರಿಶೀಲನೆ ಮಾಡಿದರು.

‘ಈ ಹಿಂದೆಯೂ ಮೋರಿ ಸೇತುವೆ ಕುಸಿದಿತ್ತು. ಆಗ ನೀರು ಹರಿಯಲು ಎರಡು ಕಲ್ವರ್ಟ್‌ (ಸಿಮೆಂಟ್‌ ಕೊಳಚೆ) ಅಳವಡಿಸಿ ಮೇಲೆ ಮಣ್ಣು ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದರು. ಸರಿಯಾಗಿ ಕಾಮಗಾರಿ ನಿರ್ವಹಿಸಿಲ್ಲ. ಹೀಗಾಗಿ, ಮಳೆಗೆ ಮತ್ತೆ ಕುಸಿದಿದೆ’ ಎಂದು ಸ್ಥಳೀಯರು ದೂರಿದರು.

ಹೊನ್ನಮ್ಮನ ಹಳ್ಳದ ಸೇತುವೆ ಬದಿಯ ಮಣ್ಣು ಕುಸಿದಿದೆ. ಕೆಳಕ್ಕೆ ಇಳಿಯಲು ನಿರ್ಮಿಸಿದ್ದ ಮೆಟ್ಟಿಲುಗಳ ಬದಿಯ ಮಣ್ಣು ಕುಸಿದಿದೆ.

‘ಮಳೆಯಿಂದಾಗಿ ವಿವಿಧೆಡೆ ಮಣ್ಣು ಕುಸಿದಿದೆ. ನಿರಂತರವಾಗಿ ಮಳೆಯಾದರೆ ಸೇತುವೆ ಕುಸಿಯುವ ಸಾಧ್ಯತೆ ಇದೆ. ಗಿರಿಶ್ರೇಣಿ ಮಾರ್ಗದಲ್ಲಿ ಪ್ರವಾಸಿ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕು’ ಎಂದು ಅತ್ತಿಗುಂಡಿ ನಿವಾಸಿ ಸಂತೋಷ್‌ ಒತ್ತಾಯಿಸಿದರು.

‘ಸೇತುವೆ ಕುಸಿತ; ಪರಿಶೀಲನೆಗೆ ಎಂಜಿನಿಯರ್‌ಗೆ ಸೂಚನೆ’: ಕೆಎಸ್‌ಒಯು ಪ್ರಾದೇಶಿಕ ಕೇಂದ್ರದ ಮುಂದಿನ ಮೋರಿಯ ಸೇತುವೆ ಕುಸಿದಿರುವ ಜಾಗವನ್ನು ಪರಿಶೀಲಿಸಲು ಕೆಎಸ್‌ಒಯು ಎಂಜಿನಿಯರ್‌ಗೆ ತಿಳಿಸಿದ್ದೇನೆ. 22ರಂದು ಪರಿಶೀಲನೆ ಮಾಡಲಿದ್ದಾರೆ. ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಸೇತುವೆ ದುರಸ್ತಿಗೆ ಕ್ರಮ ವಹಿಸಲಾಗುವುದು. ಪರೀಕ್ಷಾ ಕೇಂದ್ರವನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಕೇಂದ್ರದ ನಿರ್ದೇಶಕಿಗೆ ಸೂಚನೆ ನೀಡಿದ್ದೇನೆ ಎಂದರು.

‘ಪರೀಕ್ಷಾ ಕೇಂದ್ರ ಸ್ಥಳಾಂತರ’:ಮುಕ್ತ ವಿಶ್ವ ವಿದ್ಯಾಲಯದ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳು ನಡೆಯುತ್ತಿವೆ. ಇನ್ನು 20 ದಿನ ಪರೀಕ್ಷೆಗಳು ಇವೆ ಎಂದು ಕೇಂದ್ರದ ನಿರ್ದೇಶಕ ಜಗದೀಶ್‌ ತಿಳಿಸಿದರು.

ಪರೀಕ್ಷಾ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು. ಪರೀಕ್ಷಾರ್ಥಿಗಳು ಮೊ: 8197818807 ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.