
ಡಿ.ಮಹೇಶ್
ಚಿಕ್ಕಮಗಳೂರು: ‘ರೈತ ಸಂಘ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಆಂತರಿಕ ಭಿನ್ನಾಭಿಪ್ರಾಯಗಳ ಬದಿಗೊತ್ತಿ ರೈತರ ಅಭಿವೃದ್ಧಿಗೆ ಒಟ್ಟಾಗಿ ಮುಂದಿನ ಹೋರಾಟ ರೂಪಿಸುತ್ತೇವೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಹೇಶ್ ಹೇಳಿದರು.
ಜಿಲ್ಲೆಯ ಸಂಘಟನೆಯ ಅಹಿತಕರ ಘಟನೆಗಳನ್ನು ರಾಜ್ಯ ಸಮಿತಿ ಗಮನಿಸಿದೆ. ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ತಂಡ ಜಿಲ್ಲೆಗೆ ಬಂದು ಕಾರ್ಯಕರ್ತರೊಂದಿಗೆ ಚರ್ಚಿಸಿದೆ. ಸಂಘಟನೆಯ ಆಂತರಿಕ ವಿಚಾರಗಳನ್ನು ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಶಿಸ್ತು ಪುನರಾವರ್ತನೆಯಾದರೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘಟನೆಯ ಹಿತದೃಷ್ಟಿಯಿಂದ ರಾಜ್ಯ ಸಮಿತಿಯ ಮಾರ್ಗದರ್ಶನದಂತೆ ಭಿನ್ನಾಭಿಪ್ರಾಯಗಳಿಗೆ ಗಮನ ಕೊಡದೆ ಎಲ್ಲರೂ ಶ್ರಮ ವಹಿಸಿ ಸಂಘಟನೆ ಬಲಗೊಳಿಸಲಾಗುವುದು ಎಂದರು.
ಜ.26 ರಂದು ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟು ಪ್ರತಿಭಟನಾ ಸಮಾವೇಶ ನಡೆಸಲು ರಾಜ್ಯ ಸಮಿತಿ ಸಲಹೆ ನೀಡಿದೆ. ಬಗರ್ ಹುಕ್ಕುಂ ಸಾಗುವಳಿದಾರರ ಸಮಸ್ಯೆ, ಬಯಲು ಸೀಮೆ ಕೆರೆಗಳಿಗೆ ಭದ್ರಾ ಉಪಕಣಿವೆ ಯೋಜನೆಯ ನೀರು ಹರಿಸುವ ಕಾಮಗಾರಿ ಸೇರಿ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಸಿ. ಸುನಿಲಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಚಂದ್ರಶೇಖರ್, ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ. ಬಸವರಾಜು, ಮುಖಂಡ ಕೆ.ಕೆ. ಕೃಷ್ಣೇಗೌಡ, ತಾಲ್ಲೂಕು ಉಪಾಧ್ಯಕ್ಷ ಬಿ.ಯು. ಪರ್ವತೇಗೌಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.