ADVERTISEMENT

ಬಂಧಿತರ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಮೇ 2019, 1:49 IST
Last Updated 4 ಮೇ 2019, 1:49 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ರಾಧಿಕಾಕುಮಾರಸ್ವಾಮಿ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿ ಕಾಮೆಂಟ್‌ ಮಾಡಿದ್ದಾರೆಂಬ ದೂರಿಗೆ ಸಂಬಂಧಿಸಿದಂತೆ ಬಂಧಿಸಿರುವ ಅಜಿತ್‌ಶೆಟ್ಟಿ ಹಾಗೂ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ನಕಲಿ ಪತ್ರ ಸೃಷ್ಟಿ ದೂರಿನ ಹಿನ್ನೆಲೆಯಲ್ಲಿ ಬಂಧಿಸಿರುವ ಪತ್ರಕರ್ತ ಹೇಮಂತ್‌ ಕುಮಾರ್‌, ಶ್ರುತಿ ಬೆಳ್ಳಕ್ಕಿ, ಶಾರದಾ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಶಾಸಕ ಸಿ.ಟಿ.ರವಿ ಇಲ್ಲಿ ಶುಕ್ರವಾರ ಆಗ್ರಹಿಸಿದರು.

‘ಬಂಧಿತರನ್ನು ತಕ್ಷಣ ಬಿಡುಗಡೆ ಮಾಡಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸದಿದ್ದರೆ ಹೋರಾಟ ಹಾದಿ ತುಳಿಯುವುದು ಅನಿವಾರ್ಯ’ ಎಂದು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

‘ಕುಮಾರಸ್ವಾಮಿ ಮತ್ತು ರಾಧಿಕಾ ವಿಷಯ ಖಾಸಗಿಯಾಗಿರಬಹುದು. ವಿಷಯ ಖಾಸಗಿಯಾದರೂ ವ್ಯಕ್ತಿ(ಎಚ್‌ಡಿಕೆ) ಸಾರ್ವಜನಿಕವಾಗಿರುವುದರಿಂದ ಅವರ ಕೇಂದ್ರಿತವಾಗಿ ಚರ್ಚೆ ನಡೆದೇ ನಡೆಯುತ್ತದೆ. ಸಾರ್ವಜನಿಕ ಕ್ಷೇತ್ರದಲ್ಲಿರುವವರು ಒಳ್ಳೆದು ಮಾಡಿದಾಗಲೂ, ತಪ್ಪು ಮಾಡಿದಾಗಲೂ ಸುದ್ದಿಯಾಗುತ್ತದೆ. ಮುಚ್ಚಿಡಲು ಬಯಸಿದ್ದೇ ಚರ್ಚೆಗೆ ಹೆಚ್ಚು ಗ್ರಾಸವಾಗುತ್ತದೆ’ ಎಂದು ಕುಟುಕಿದರು.

ADVERTISEMENT

‘ಖಾಸಗಿ ವಿಷಯ ಪ್ರಸ್ತಾಪಿಸಿದ್ದು, ಲಿಂಗಾಯತ ಮತ್ತು ವೀರಶೈವ ಪ್ರತ್ಯೇಕ ಎಂಬ ಸರ್ಕಾರದ ನಿಲುವು ಕಾಮೆಂಟ್‌ ಮಾಡಿದ್ದೇ ದೊಡ್ಡ ವಿಷಯವಾಗಿದೆ.

ಬೇಳೂರು ಗೋಪಾಲ ಕೃಷ್ಣ ಅವರು ಪ್ರಧಾನಿ ಹತ್ಯೆಗೆ ಪ್ರಚೋದನೆ ಮಾಡುವ ಕೆಲಸ ಮಾಡಿದ್ದರು, ಅವರ ವಿರುದ್ಧ ಏನು ಕ್ರಮಕೈಗೊಂಡಿದ್ದೀರಿ, ಶ್ರೀರಾಮಚಂದ್ರನನ್ನೇ ಅವಹೇಳನವಾಗಿ ಚಿತ್ರಿಸುವ ಕೆಲಸ ಮಾಡಿದ ಪ್ರೊ.ಕೆ.ಎಸ್‌.ಭಗವಾಗನ್‌ ವಿರುದ್ಧ ಏನು ಕ್ರಮ ಜರುಗಿಸಿದ್ದೀರಿ’ ಎಂದು ಪ್ರಶ್ನಿಸಿದರು.

‘ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಾಂಗ್ರೆಸ್‌, ಜೆಡಿಎಸ್‌ನವರು ಮಾತನಾಡುತ್ತಾರೆ. ಲಿಂಗಾಯತ ಮತ್ತು ವೀರಶೈವ ಪ್ರತ್ಯೇಕ ಎಂದು ಕಾಂಗ್ರೆಸ್‌ನವರೇ ಸಚಿವಸಂಪುಟದಲ್ಲಿ ನಿರ್ಣಯಿಸಿ ಕಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ‘ಕಾಮೆಂಟ್‌’ ಮಾಡಿದವರ ಮೇಲೆ ಕೇಸು ದಾಖಲಿಸಿ ದೌರ್ಜನ್ಯ ಎಸಗುವ ಕೆಲಸವನ್ನು ಮಾಡಲಾಗುತ್ತಿದೆ’ ಎಂದು ದೂಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.