ADVERTISEMENT

ಚರ್ಮರೋಗ ತಜ್ಞೆ ಮಹಾಜಬೀನ್ ಮಧುರಕರ್‌ಗೆ ರೇಣುಕಾಚಾರ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 12:18 IST
Last Updated 21 ಮಾರ್ಚ್ 2024, 12:18 IST
ಡಾ.ಮಹಜಬೀನ್ ಮಧುರಕರ್
ಡಾ.ಮಹಜಬೀನ್ ಮಧುರಕರ್   

ಬಾಳೆಹೊನ್ನೂರು: ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ,  ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ ನಡೆಯುತ್ತಿದ್ದು, ಬಾಗಲಕೋಟೆಯ ಚರ್ಮರೋಗ ತಜ್ಞೆ ಮಹಾಜಬೀನ್ ಮಧುರಕರ್‌ ಅವರಿಗೆ ‘ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ’ ಶುಕ್ರವಾರ ನಡೆಯಲಿದೆ.  ಪ್ರಶಸ್ತಿಯು ₹1 ಲಕ್ಷ ನಗದು, ಕಂಚಿನ ಪತ್ರ ಒಳಗೊಂಡಿದೆ.

ವಿಜಯಪುರ ಜಿಲ್ಲೆಯ ರಾಮಪುರ ಗ್ರಾಮದ ಮಹಾಜಬೀನ್‍, ಸಾಹೇಬ್ ಪಟೇಲ್ ಬಿ. ಮದರ್ಕರ್ ಮತ್ತು ಶಹಪುರಿ ಬೇಗಂ ಅವರ ಆರನೇಯ ಮಗಳು. ಪೋಲಿಯೊಗೆ ತುತ್ತಾದ ಕಾರಣ ಬಾಲ್ಯದಿಂದಲೇ ಗಾಲಿ ಕುರ್ಚಿಗೆ ಸೀಮಿತವಾಗಿ ಎಲ್ಲರಂತೆ ಬೆಳೆಯದೆ ತುಸು ಭಿನ್ನವಾಗಿ ಬೆಳೆದ ಅವರು ತಮ್ಮ ಪರಿಶ್ರಮದ ಮೂಲಕ ಸಾಧನೆಯ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ.

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ್) ಎಂಬಿಬಿಎಸ್‌ ಅಧ್ಯಯನ, ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಮ್.ಡಿ ಕೋರ್ಸ್‌ ಪೂರ್ಣಗೊಳಿಸಿ, ಬಾಗಲಕೋಟೆಯ ಹೃದಯಭಾಗದಲ್ಲಿ ಮದರಕರ್ ಆಸ್ಪತ್ರೆ ತೆರೆದು ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿ ಅನೇಕರ ಪಾಲಿಗೆ ಆಶಾ ಜ್ಯೋತಿಯಾಗಿದ್ದಾರೆ. ಮದರಕರ್ ಚಾರಿಟಬಲ್ ಫೌಂಡೇಶನ್‍ನ ನಿರ್ದೇಶಕರಾಗಿ, ಬೀಳಗಿಯ ಎಸ್.ಆರ್. ಪಾಟೀಲ ಮೆಡಿಕಲ್ ಕಾಲೇಜಿನ ಚರ್ಮರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಬಾಗಲಕೋಟೆಯ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ 25ಕ್ಕೂ ಹೆಚ್ಚು ಸಂಶೋಧನಾತ್ಮಕ ಲೇಖನಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿಗಳಲ್ಲಿ ಮಂಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.