ADVERTISEMENT

ಕಿಗ್ಗಾ ಜಾತ್ರೆ: ಅನ್ಯ ಧರ್ಮದ ವ್ಯಾಪಾರಸ್ಥರಿಗೆ ಅವಕಾಶ ನೀಡದಂತೆ ಮನವಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 7:21 IST
Last Updated 17 ಮಾರ್ಚ್ 2023, 7:21 IST

ಶೃಂಗೇರಿ: ತಾಲ್ಲೂಕಿನ ಮರ್ಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕಿಗ್ಗಾದಲ್ಲಿ ನಡೆಯುವ ಶಾಂತ ಸಮೇತ ಋಷ್ಯಶೃಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅನುಮತಿ ನೀಡಬಾರದು ಎಂದು ಶೃಂಗೇರಿ ತಾಲ್ಲೂಕಿನ ಜಾಗೃತ ಹಿಂದೂ ಬಾಂಧವರು ಸಂಘಟನೆಯಿಂದ ತಹಶೀಲ್ದಾರ್ ಪಿ.ಗೌರಮ್ಮ ಅವರಿಗೆ ಮನವಿ ನೀಡಲಾಗಿದೆ.

ಮನವಿಯಲ್ಲಿ ಏನಿದೆ: ‘ಬಹಳ ಹಿಂದಿನ ಕಾಲದಿಂದ ಹಿಂದೂ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಭಕ್ತಿಪೂರ್ವಕವಾಗಿ ಹರಕೆಯನ್ನು ಸಲ್ಲಿಸಿ, ಕಾಣಿಕೆಯನ್ನು ಅರ್ಪಿಸಿ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗುವ ಜೊತೆಗೆ ಪರೋಕ್ಷವಾಗಿ ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಈ ಜಾತ್ರಾ ಮಹೋತ್ಸವದಲ್ಲಿ ಹಲವಾರು ಮಳಿಗೆಗಳು ಬರುವುದು ಸಾಮಾನ್ಯ. ಆದರೆ, ಹಿಂದೂಗಳ ಧಾರ್ಮಿಕ ಪ್ರತೀಕವಾದ ಜಾತ್ರೆಗೆ ಅನ್ಯ ಧರ್ಮದ ವ್ಯಾಪಾರಸ್ಥರು ಹೊರ ಊರಿನಿಂದ ಬಂದು ಸಮಾಜ ವಿರೋಧಿ ಕೆಲಸದಲ್ಲಿ ಭಾಗಿಯಾದ ಘಟನೆಗಳು ಇತ್ತೀಚೆಗೆ ಕಂಡುಬಂದಿದೆ. ಈ ಅನ್ಯ ಮತೀಯರು ಈ ಹಿಂದೆ ಹೈಕೋರ್ಟ್ ನೀಡಿದ ತೀರ್ಪಿನ್ನು ವಿರೋಧಿಸಿ ರಾಜ್ಯದಾದ್ಯಂತ ಬಂದ್ ನಡೆಸಿ ದೇಶದ ಸಂವಿಧಾನ ಮತ್ತು ಕಾನೂನಿನ ವಿರೋಧಿಗಳು ನಾವು ಎಂಬಂತೆ ತೋರಿದ ಉದ್ಧಟತನದ ಅವರ ನಡೆಯು ಬಹುಸಂಖ್ಯಾತ ಹಿಂದೂಗಳಲ್ಲಿ ಆಕ್ರೋಶ ಮತ್ತು ಅಸಹನೆಗೆ ಕಾರಣವಾಗಿದೆ’ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

‘ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಅನ್ಯ ಮತೀಯರು ವ್ಯಾಪಾರದಿಂದ ಬರುವ ಲಾಭದ ಒಂದು ಪಾಲನ್ನು ದೇಶ ವಿರೋಧಿ ಚಟುವಟಿಕೆಗಳಿಗೂ ಬಳಸುತ್ತಾರೆ ಎಂಬ ಅಭಿಪ್ರಾಯವಿದೆ. ಆದ್ದರಿಂದ ದೇವಸ್ಥಾನದ ಅಭಿವೃದ್ಧಿಗೆ ನಿರಂತರ ಸಹಕರಿಸುತ್ತಿರುವ ಹಿಂದೂ ಭಕ್ತರ ಭಾವನೆಯನ್ನು ಗೌರವಿಸಬೇಕೆಂದು ಆಗ್ರಹಿಸುತ್ತೇವೆ’ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.