ADVERTISEMENT

‘ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಜೀವನದ ಅವಿಭಾಜ್ಯ ಅಂಗವಾಗಲಿ’

ಜಿಲ್ಲಾಮಟ್ಟದ ಕಂದಾಯ ಕಲಾ ಕ್ರೀಡಾ ಮಹೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 7:08 IST
Last Updated 10 ಜನವರಿ 2026, 7:08 IST
ನರಸಿಂಹರಾಜಪುರದ ಕುವೆಂಪು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಕಂದಾಯ ಕಲಾ ಕ್ರೀಡಾ ಮಹೋತ್ಸವದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿದರು
ನರಸಿಂಹರಾಜಪುರದ ಕುವೆಂಪು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಕಂದಾಯ ಕಲಾ ಕ್ರೀಡಾ ಮಹೋತ್ಸವದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿದರು   

ನರಸಿಂಹರಾಜಪುರ: ‘ಸರ್ಕಾರಿ ನೌಕರರ ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಜೀವನದ ಅವಿಭಾಜ್ಯ ಅಂಗವಾಗಬೇಕು’ ಎಂದು ಶಾಸಕ ಟಿ.ಡಿ.ರಾಜೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಕುವೆಂಪು ಕ್ರೀಡಾಂಗಣದಲ್ಲಿ ತಾಲ್ಲೂಕು ಕಂದಾಯ ನೌಕರರ ಸಂಘದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಕಂದಾಯ ಕಲಾ ಕ್ರೀಡಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸೋಲು– ಗೆಲುವಿಗಿಂತ ಎಲ್ಲರೂ ಭಾಗವಹಿಸುವುದು ಮುಖ್ಯವಾಗಿದೆ ಎಂದರು.

ಕಂದಾಯ ಇಲಾಖೆಯ ನೌಕರರು ಸರ್ಕಾರದ ಪ್ರಮುಖ ಭಾಗವಾಗಿದ್ದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಂವಿಧಾನಬದ್ಧ, ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ಹಾಗೂ ಸರ್ಕಾರದ ಜನಪರ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಸರ್ಕಾರಿ ನೌಕರರದ್ದಾಗಿದೆ ಎಂದರು.

ADVERTISEMENT

ಸರ್ಕಾರದ ಹಲವು ಇಲಾಖೆಗಳಲ್ಲಿ ಅನೇಕ ಹುದ್ದೆಗಳು ಖಾಲಿಯಿದ್ದರೂ, ಆ ಹುದ್ದೆಗಳ ಜವಾಬ್ದಾರಿ ಹೊತ್ತು ಅಧಿಕಾರಿಗಳು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಾಗಿದ್ದ 7ನೇ ವೇತನ ಆಯೋಗ ಜಾರಿಗೆ ತರಲಾಗಿದೆ. ಎನ್‌ಪಿಎಸ್ ಮತ್ತು ಒಪಿಎಸ್ ಬಗ್ಗೆ ಮನವಿ ಸಲ್ಲಿಸಿದ ಪರಿಣಾಮ ಒಪಿಎಸ್ ಜಾರಿಗೆ ತರಲು ಸರ್ಕಾರ ಸಮಿತಿ ನೇಮಿಸಿದೆ. ಇದನ್ನು ಜಾರಿಗೆ ತರಲು ತಾವು ಸಹ ಸರ್ಕಾರದ ಮೇಲೆ ಒತ್ತಡ ಹಾಕಲಾಗಿದೆ. 2006ಕ್ಕಿಂತ ಹಿಂದೆ ನೇಮಕವಾಗಿದ್ದ ಸುಮಾರು 11,300 ನೌಕರರನ್ನು ಎನ್‌ಪಿಎಸ್‌ನಿಂದ ಒಪಿಎಸ್‌ಗೆ ತರಲಾಗಿದೆ. ಉಳಿದವರಿಗೂ ಒಪಿಎಸ್ ವ್ಯಾಪ್ತಿಗೆ ತರಲು ಸರ್ಕಾರ ಸಮಿತಿ ರಚಿಸಲಾಗಿದೆ ಎಂದು ಅವರು ಹೇಳಿದರು.

ಮಹಿಳಾ ನೌಕರರಿಗೆ 6 ತಿಂಗಳು ಹೆರಿಗೆ ರಜೆ, ಮಾಸಿಕ 1 ದಿನ ಋತುಚಕ್ರ ರಜೆ ಘೋಷಿಸಲಾಗಿದೆ. ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯಡಿ ವ್ಯಾಪ್ತಿಗೆ ತರಲಾಗಿದೆ. ಕಂದಾಯ ಸಚಿವ ಕೃಷ್ಣೇಬೈರೆಗೌಡರು ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ. ಜಿಲ್ಲೆಯ ಜ್ವಲಂತ ಸಮಸ್ಯೆ ಬಗೆಹರಿಸಲು ನೂತನ ಜಿಲ್ಲಾಧಿಕಾರಿ ಸಹಕಾರ ನೀಡಬೇಕು. ಕಂದಾಯ ಇಲಾಖೆಯವರು ಸಹಕಾರ ನೀಡಿದರೆ ರೈತರ ಬದುಕು ಹಸನಾಗಲು ಸಾಧ್ಯ ಎಂದು ಶಾಸಕ ರಾಜೇಗೌಡ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಮಾತನಾಡಿ, ‘ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿದೆ. ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳುವುದರಿಂದ ವೃತ್ತಿ ಮತ್ತು ಜೀವನವನ್ನು ಸಮಚಿತ್ತದಿಂದ ಸ್ವೀಕರಿಸಬಹುದು. ಕ್ರೀಡೆಯಲ್ಲಿ ಎಲ್ಲರೂ ಗೆಲುವಿಗೆ ಹೋರಾಟ ಮಾಡುತ್ತಿರುತ್ತಾರೆ, ನೌಕರರ ಗೆಲುವು ಕರ್ತವ್ಯ ಸರಿಯಾಗಿ ನಿರ್ವಹಿಸುವುದೇಯಾಗಿದೆ. ವೈಯಕ್ತಿಕವಾಗಿ ಎಷ್ಟೇ ಸಾಧನೆ ಮಾಡಿದರೂ ಸರ್ಕಾರಿ ವ್ಯವಸ್ಥೆಯಲ್ಲಿ ಇಡೀ ತಂಡ ಒಟ್ಟಾಗಿ ಹೋಗದಿದ್ದರೆ ಸೋಲು ಕಟ್ಟಿಟ್ಟ ಬುತ್ತಿ. ಕರ್ತವ್ಯ ನಿರ್ವಹಿಸುವಾಗ ಸಾಕಷ್ಟು ಒತ್ತಡ ಅನುಭವಿಸಬೇಕಾಗುತ್ತದೆ. ಜೀವನ ಶೈಲಿ ಸಹ ಕೆಟ್ಟುಹೋಗುತ್ತದೆ ಇಂತಹ ಸಮಯದಲ್ಲಿ, ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ. ಸರ್ಕಾರಿ ನೌಕರರು ಕಲ್ಲು, ಮಣ್ಣು, ಮರ ಎತ್ತಿಡುವ ಕೆಲಸ ಮಾಡುವುದಿಲ್ಲ. ಮೆದುಳು ಉಪಯೋಗಿಸಿ ಕೆಲಸ ಮಾಡುವುದು. ಕ್ರೀಡೆಯಿಂದ ಸಾಕಷ್ಟು ಉಪಯೋಗವಿದೆ. ಪ್ರತಿನಿತ್ಯ ಕ್ರೀಡಾಕೂಟದಲ್ಲಿ ತೊಡಗಿಕೊಳ್ಳಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ತರೀಕೆರೆ ಉಪವಿಭಾಗಾಧಿಕಾರಿ ಎನ್.ವಿ. ನಟೇಶ್, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಬಿ.ಕೆ. ಸುದರ್ಶನ್, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರಾದ ನೂರಲ್ ಹುದಾ, ಕೆ.ಎಸ್. ರೇಷ್ಮಾ, ಸಿ.ಎಸ್. ಪೂರ್ಣಿಮಾ, ಎಸ್. ಅಶ್ವಿನಿ, ಎಸ್. ಶಾರದ, ಪಿ.ವಿ. ವಿನಾಯಕ ಸಾಗರ್, ಲಿಖಿತಾಮೋಹನ್, ಆರ್.ಎಂ. ಅನೂಪ್ ಸಂಜೋಗ್, ವಿಶ್ವಜಿತ್ ಮೆಹತಾ, ಕಂದಾಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್, ಕೊಪ್ಪ ಎಪಿಎಂಸಿ ಅಧ್ಯಕ್ಷ ಎಸ್.ಡಿ. ರಾಜೇಂದ್ರ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಜುಬೇದಾ, ಪ್ರಶಾಂತ್ ಶೆಟ್ಟಿ, ಸೈಯದ್ ವಸೀಂ, ಕಂದಾಯ ನಿರೀಕ್ಷಕ ಮಂಜುನಾಥ್ ಇದ್ದರು.

ರೈತರ ಸಮಸ್ಯೆಗಳಿಗೆ ಕಂದಾಯ ಇಲಾಖೆಯವರು ಸ್ಪಂದಿಸಬೇಕು

ಇಡೀ ಜಿಲ್ಲೆಯ ಆಡಳಿತ ಕಂದಾಯ ಇಲಾಖೆಗೆ ಸಂಬಂಧಿಸಿರುವುದರಿಂದ ಎಲ್ಲಾ ಜನಪ್ರತಿನಿಧಿಗಳಿಗೆ ಸಾಕಷ್ಟು ನಿರೀಕ್ಷೆಯಿದೆ. ರೈತ ಪ್ರಧಾನ ಜಿಲ್ಲೆಯಾಗಿರುವ ಚಿಕ್ಕಮಗಳೂರಿನಲ್ಲಿ ರೈತರು ಅನುಭವಿಸುವ ಸಮಸ್ಯೆಗಳಿಗೆ ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಪರಿಹಾರ ಕೊಡುವುದು ನೌಕರರ ಆದ್ಯ ಕರ್ತವ್ಯವಾಗಿದ್ದು ಇದಕ್ಕಾಗಿ ನಮ್ಮ ಶಕ್ತಿಯನ್ನು ವಿನಿಯೋಗಿಸಬೇಕು. ಉತ್ತಮ ಆರೋಗ್ಯ ಕಾಪಾಡಿಕೊಂಡು ಸಮಾಜಕ್ಕೆ ಕರ್ತವ್ಯ ಸರಿಯಾಗಿ ನಿರ್ವಹಿಸುವ ಮೂಲಕ ಕೊಡುಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.