ADVERTISEMENT

ಪಶ್ಚಿಮ ಘಟ್ಟಗಳ ಸಂರಕ್ಷಣೆ: ಗಾಡ್ಗಿಳ್‌ ವರದಿಯ ಶಿಫಾರಸು ಪುನರಾವಲೋಕನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2018, 16:09 IST
Last Updated 21 ಆಗಸ್ಟ್ 2018, 16:09 IST
ಪಶ್ಚಿಮ ಘಟ್ಟ
ಪಶ್ಚಿಮ ಘಟ್ಟ   

ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಸಂರಕ್ಷಣೆ ನಿಟ್ಟಿನಲ್ಲಿ ಪ್ರೊ.ಮಾಧವ ಗಾಡ್ಗೀಳ್‌ ವರದಿಯ ಶಿಫಾರಸುಗಳ ಕುರಿತು ಸರ್ಕಾರವು ಪುನರಾವಲೋಕನ ಮಾಡಿ, ಪರಿಹಾರ ರೂಪಿಸಬೇಕು ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ ಕಾರ್ಯಕರ್ತ ನಾಗೇಶ್‌ ಅಂಗೀರಸ ಇಲ್ಲಿ ಮಂಗಳವಾರ ಒತ್ತಾಯಿಸಿದರು.

ಹಿಂದಿನ ಯುಪಿಎ ಸರ್ಕಾರದಲ್ಲಿ ಜೈರಾಂ ರಮೇಶ್‌ ಪರಿಸರ ಸಚಿವರಾಗಿದ್ದಾಗ ಪಶ್ಚಿಮ ಘಟ್ಟದ ಸಂರಕ್ಷಣೆಗೆ ಸಮಗ್ರ ನೀತಿ ರೂಪಿಸಲು ಎರಡು ಸಮಿತಿ ರಚಿಸಲಾಗಿತ್ತು. ಪ್ರೊ.ಮಾಧವ ಗಾಡ್ಗೀಳ್‌ ನೇತೃತ್ವದ ಪಶ್ಚಿಮಘಟ್ಟದ ಪರಿಸರ ತಜ್ಞರ ತಂಡ (ಡಬ್ಲ್ಯುಜಿಇಇಪಿ), ಕಸ್ತೂರಿರಂಗನ್‌ ನೇತೃತ್ವದ ಉನ್ನತಮಟ್ಟದ ಕಾರ್ಯಕಾರಿ ತಂಡ (ಎಚ್‌ಎಲ್‌ಡಬ್ಲ್ಯುಜಿ) ಸಮಿತಿಗಳು ಪ್ರತ್ಯೇಕ ವರದಿಗಳನ್ನು ಸಲ್ಲಿಸಿವೆ. ಎರಡೂ ವರದಿಗಳನ್ನು ಅನುಷ್ಠಾನಗೊಳಿಸುವಲ್ಲಿ ಯುಪಿಎ ಸರ್ಕಾರ ವಿಫಲವಾಗಿತ್ತು. ಯುಪಿಎ ಸರ್ಕಾರದ ನಡೆಯನ್ನೇ ಮೋದಿ ನೇತೃತ್ವದ ಸರ್ಕಾರವು ಅನುಸರಿಸಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ದೂಷಿಸಿದರು.

ಅರಣ್ಯಅತೀವ ಒತ್ತುವರಿ, ಮರಳಿನ ದರೋಡೆ, ಗಣಿಗಾರಿಕೆ, ಎಸ್ಟೇಟ್‌ ಮಾಫಿಯಾಗಳು ಪಶ್ಚಿಮ ಘಟ್ಟಕ್ಕೆ ಮಾರಕವಾಗಿವೆ. ಬೆಳ್ತಂಗಡಿ, ಮೂಡಿಗೆರೆ, ಬಂಡೀಪುರ, ಕೊಡಗು ವ್ಯಾಪ್ತಿ, ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿಯ ಬಾರಿಮಲೆ, ರಾಮನಬೆಟ್ಟ, ಸೊಪ್ಪಿನಗುಡ್ಡ, ಹೊಸಮನೆಗುಡ್ಡ, ಕಡತಕಲ್ಲು ಘಾಟಿಯ ಕೃಷ್ಣಗಿರಿ, ಎಳನೀರು ಘಾಟಿಯ ಹಿರಿಮರಿಗುಪ್ಪೆ, ಭೈರಾಪುರ ಘಾಟಿಯ ದೀಪದಕಲ್ಲು, ಉಳಿಯಮಲೆ, ಮೇರುತಿಗರಿ, ಅಬ್ಬನೆಟ್ಟಿ, ವೆಂಕಟಗಿರಿ, ಮುಗಿಲಗಿರಿ, ಅಮೇದಿಕ್ಕಲ್‌ ಮೊದಲಾದ ಕಡೆಗಳಲ್ಲಿ ಕಾಫಿ ಎಸ್ಟೇಟ್‌ನವರು ಕಾಡು ಕಡಿದು ಗಿಡಗಳನ್ನು ನೆಟ್ಟಿದ್ದಾರೆ. ನಿಸರ್ಗವನ್ನು ಹಾಳು ಮಾಡಿರುವುದೇ ಈ ಬಾರಿಯ ಮಳೆಹಾಮಿಗೆ ಕಾರಣ ಎಂದು ಹೇಳಿದರು.

ADVERTISEMENT

ಟಿಂಬರ್‌ ಮಾಫಿಯಾಕ್ಕೆ ಅರಣ್ಯ ಆಪೋಷನವಾಗುತ್ತಿದೆ. ಭಾರಿ ವಾಹನಗಳ ಸಂಚಾರದಿಂದ ಮೋರಿ, ಸೇತುವೆಗಳು ಜಖಂಗೊಂಡಿವೆ. ರೆಸಾರ್ಟ್‌ಗಳು, ಹೋಮ್‌ ಸ್ಟೆಗಳಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಈಗ ಶಿಶಿಲಾ–ಭೈರಾಪುರ ಭಾಗದಲ್ಲಿ ಚತುಷ್ಟಥ ಹೆದ್ದಾರಿ ನಿರ್ಮಾಣಕ್ಕೆ ಸರ್ಕಾರವು ಯೋಜನೆ ರೂಪಿಸುತ್ತಿದೆ. ಇದು ಲೋಕಸಭೆ ಚುನಾವಣೆಗೆ ಹಣ ಮಾಡಿಕೊಳ್ಳುವ ಹುನ್ನಾರ ಎಂದು ಆರೋಪಿಸಿದರು.

ನಾಗೇಶ್‌ ಅಂಗೀರಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.