ADVERTISEMENT

‘ಜನರಿಗೆ ಸ್ಪಂದಿಸುವುದು ಕರ್ತವ್ಯ’

ಕೊರಡಿಹಿತ್ಲು ಜಯಪುರ ಸಂಪರ್ಕ ರಸ್ತೆ ಕಾಮಗಾರಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 6:23 IST
Last Updated 17 ನವೆಂಬರ್ 2022, 6:23 IST
ಕೊರಡಿಹಿತ್ಲು ಜಯಪುರ ಸಂಪರ್ಕ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು
ಕೊರಡಿಹಿತ್ಲು ಜಯಪುರ ಸಂಪರ್ಕ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು   

ಕೊಪ್ಪ: ‘ಜನರ ಬೇಡಿಕೆಗೆ ಸ್ಪಂದಿಸುವುದು ಜನಪ್ರತಿನಿಧಿ, ಅಧಿಕಾರಿಗಳ ಕರ್ತವ್ಯ’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ನುಗ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಕೊರಡಹಿತ್ಲು(ಕ್ವಾರ್ಡ್ ಹಿಟ್ಲೊ), ಹೊಸೂರು, ದೇವರಖಾನ್, ಬಂಡಾಡಿ, ಅಲಗೇಶ್ವರ ಮೂಲಕ ಜಯಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

‘ಈ ಹಿಂದೆ ಭೇಟಿ ನೀಡಿದ್ದಾಗ ರಸ್ತೆ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ಅದನ್ನು ಸಕಾರಾತ್ಮಕವಾಗಿ ಪರಿಗಣಿಸಿ, ಸ್ಪಂದಿಸಿದ್ದೇನೆ’ ಎಂದರು.

ADVERTISEMENT

‘ಸಮ್ಮಿಶ್ರ ಸರ್ಕಾರವಿದ್ದಾಗ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಸ್ತಾವ ಸಲ್ಲಿಸಿದ್ದೆ. ಪಿಎಂಜಿಎಸ್‌ವೈ ಅಡಿಯಲ್ಲಿ ಈ ರಸ್ತೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಇಲಾಖೆಗೆ ಸೇರಿಸಿ, ₹3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಪ್ರಸ್ತುತ ₹50 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ’ ಎಂದರು.

ಹಕ್ಕುಪತ್ರ: ’94 ಸಿ, 94 ಸಿಸಿ, ನಮೂನೆ 50, 53, 57ರಲ್ಲಿ ಅನೇಕ ಮಂದಿ ಅರ್ಜಿ ಸಲ್ಲಿಸಿ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ಅರಣ್ಯ ಇಲಾಖೆ ಒಪ್ಪಿಗೆ ಪಡೆದು ಹಕ್ಕುಪತ್ರ ನೀಡಬೇಕು ಎಂದು ಸರ್ಕಾರ ಜಿಲ್ಲಾಧಿಕಾರಿ ಮೂಲಕ ಆದೇಶ ಮಾಡಿಸಿರುವುದು ಹಕ್ಕುಪತ್ರ ನೀಡಲು ಸಮಸ್ಯೆಯಾಗುತ್ತಿದೆ, ಕಾನೂನು ಚೌಕಟ್ಟು ಮೀರಿ ಹಕ್ಕುಪತ್ರ ನೀಡುವುದು ಸಾಧ್ಯವಿಲ್ಲ. ಆದೇಶ ವಾಪಸ್ ಪಡೆದರೆ ಸಮಸ್ಯೆ ಬಗೆಹರಿಯಲಿದೆ’ ಎಂದು ಅವರು ವಿವರಿಸಿದರು.

ರಸ್ತೆ ಹೋರಾಟ ಸಮಿತಿಯ ನೇತೃತ್ವ ವಹಿಸಿದ್ದ ಶಶಿ ಮಾತನಾಡಿ, ‘ರಸ್ತೆ ಅಭಿವೃದ್ಧಿ ಪಡಿಸುವಂತೆ ಕಳೆದ ವರ್ಷ ಶಾಸಕರಿಗೆ ಮನವಿ ಸಲ್ಲಿಸಿದ್ದೆವು. ಅವರು ಗ್ರಾಮದ ಸಮಸ್ಯೆಯನ್ನು ಹೃದಯದಿಂದ ನೋಡಿದ್ದಾರೆ’ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಅವರನ್ನು ರಸ್ತೆ ಹೋರಾಟ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಸನ್ಮಾನಿಸಿ, ಅಭಿನಂದಿಸಲಾಯಿತು.

ಮೈಸೂರ್ ಪ್ಲಾಂಟೇಶನ್ ವ್ಯವಸ್ಥಾಪಕ ಪ್ರತಾಪ್, ವಿಶ್ವನಾಥ್, ಉಮೇಶ್, ಚಂದ್ರೇಗೌಡ, ವಿದ್ಯಾಧರ್, ರಾಘವೇಂದ್ರ, ಬಿ.ಟಿ.ಶಿವರಾಮ್, ಗುಲಾಬಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಅನ್ನಪೂರ್ಣ ನರೇಶ್, ಪ್ರಧಾನ ಕಾರ್ಯದರ್ಶಿ ನುಗ್ಗಿ ಮಂಜುನಾಥ್, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಚಿಂತನ್, ಕೀರ್ತನ್, ಕವಿರಾಜ್, ಮಣಿ, ಅಹಮ್ಮದ್ ಹಾಜಿ, ನಾಗಪ್ಪಗೌಡ, ಎಚ್.ಕೆ.ಪ್ರಶಾಂತ್, ರಜತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.