
ಶೃಂಗೇರಿ: ತಾಲ್ಲೂಕಿನ ಗ್ರಾಮೀಣ ಸಂಪರ್ಕ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ಸಮಸ್ಯೆಯಾಗಿವೆ. ಗ್ರಾಮೀಣ ಭಾಗದ ಮುಖ್ಯ ರಸ್ತೆಗಳೂ ಹೊಂಡ, ಗುಂಡಿಯಿಂದ ಕೂಡಿದ್ದು, ಡಾಂಬರು ಕಂಡ ರಸ್ತೆ ನಿರ್ವಹಣೆ ಇಲ್ಲದೇ ಸೊರಗಿವೆ. ಮಳೆಗಾಲದ ಸಂಚಾರವಂತೂ ಹೇಳತೀರದಾಗಿದೆ.
ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊದಲುಕೊಡಿಗೆ ಗಣಪತಿ ದೇವಸ್ಥಾನದಿಂದ ಕಿರುಕೋಡುಗೆ ತಲುಪಿ, ಪಡುಬೈಲಿಗೆ ಸೇರುವ ರಸ್ತೆ ಸಂಚಾರಕ್ಕೆ ದುಸ್ತರವಾಗಿದ್ದು, ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.ಈ ಭಾಗದಲ್ಲಿ ಸಂಚಾರಿಸುವಾಗ ದ್ವಿಚಕ್ರ ವಾಹನ ಸವಾರರು ಹಿಂಬದಿ ಸವಾರರನ್ನು ಇಳಿಸಿಕೊಂಡು ಮುಂದಕ್ಕೆ ಸಾಗಿ ಬಳಿಕ ಅವರನ್ನು ಹತ್ತಿಸಿಕೊಂಡು ಹೋಗುವುದು ನಿತ್ಯದ ಪಾಡಾಗಿದೆ. ಶಾಲಾ ವಾಹನಗಳು ಸೇರಿ ಇತರೆ ವಾಹನಗಳು ಹೊಂಡ ಗುಂಡಿಗಳಲ್ಲಿ ಎದ್ದು ಬಿದ್ದು ಸಂಚರಿಸುವ ಅಪಾಯಕಾರಿ ಸ್ಥಿತಿಯಿದೆ.
ರಸ್ತೆ ಪಕ್ಕದಲ್ಲಿ ಗ್ರಾಮ ಸಡಕ್ ಯೋಜನೆಯ ದೊಡ್ಡ ನಾಮಫಲಕ ಹಾಕಿದ್ದಾರೆ. ಆದರೆ ರಸ್ತೆ ಅಭಿವೃದ್ಧಿ ಮಾತ್ರ ಕಂಡಿಲ್ಲ. ಯಾವಾಗ ಕಾಮಗಾರಿ ಆರಂಭಿಸುತ್ತಾರೆ ಎಂದು ವರ್ಷದಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ರಸ್ತೆ ಅಭಿವೃದ್ಧಿಗೆ ಇನ್ನೂ ಕಾಲ ಕೊಡಿ ಬಂದಿಲ್ಲ. ಈ ಭಾಗದ ರಸ್ತೆಯಲ್ಲಿ ಕೊಟ್ಟೋಡಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಹಾಗೂ ವೂದಲಕೊಡಿಗೆ ಗಣಪತಿ ದೇವಸ್ಥಾನಗಳಿದ್ದು, ಪ್ರತಿ ದಿನವೂ ಇಲ್ಲಿಗೆ ಭಕ್ತರು ಬರುತ್ತಾರೆ. ರೈತರು ಪಟ್ಟಣಕ್ಕೆ ತೆರಳಲು ತಮ್ಮ ಜಮೀನುಗಳಿಗೆ ಹೋಗಬೇಕಾದರೆ ಈ ರಸ್ತೆಯಲ್ಲಿಯೇ ಸಂಚರಿಸಬೇಕಾಗುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಸಮರ್ಪಕವಾಗಿ ಚರಂಡಿ ಇಲ್ಲದೇ ನೀರು ರಸ್ತೆಯ ಮೇಲೆಯೇ ಹರಿದು ರಸ್ತೆಯ ದುಸ್ಥಿತಿ ಹೇಳತೀರದಾಗಿದೆ. ಈ ಭಾಗದಲ್ಲಿ ಹತ್ತಾರು ಮನೆಗಳಿಗೆ ಸಂಪರ್ಕಿಸುವ ರಸ್ತೆಯಾಗಿದ್ದು ವೃದ್ದರು, ಶಾಲಾ ಮಕ್ಕಳು, ಮಹಿಳೆಯರು, ವಾಹನ ಸವಾರರು, ನಿತ್ಯ ಸಂಕಟವನ್ನು ಅನುಭವಿಸುವಂತಾಗಿದೆ.
‘ಹಲವು ಕಡೆ ಗ್ರಾಮೀಣ ರಸ್ತೆಯ ಅಭಿವೃದ್ಧಿಗೆ ಮುಖ್ಯಮಂತ್ರಿ ಗ್ರಾಮೀಣ ಅಭಿವೃದ್ಧಿ ಯೋಜನೆ, ಕೇಂದ್ರ ಸರ್ಕಾರದ ಗ್ರಾಮ ಸಡಕ್ ಯೋಜನೆ ಹೀಗೆ ಯೋಜನೆಗಳ ಪಟ್ಟಿ ಸಾಕಷ್ಟಿದೆ. ಆದರೆ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಕಾಳಜಿ ಜನಪ್ರತಿನಿಧಿಗಳಿಗೆ ಇಲ್ಲ. ಗ್ರಾಮೀಣ ರಸ್ತೆಗಳ ಮೇಲೆ ಅವಲಂಬಿತರಾದ ತಾಲ್ಲೂಕಿನ ಗ್ರಾಮಸ್ಥರು ಪರದಾಡುವಂತಾಗಿದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಎ.ಎಸ್.ನಯನಾ ಬೇಸರ ವ್ಯಕ್ತಪಡಿಸಿದರು.
ಕಳೆದ ವರ್ಷ ಮತ್ತು ಈ ವರ್ಷ ಸುರಿದ ಮಳೆ ಭಾರಿ ಮಳೆಯಿಂದ ರಸ್ತೆಗಳು ಹಾಳಾಗಿದ್ದು, ಲೋಕೋಪಯೋಗಿ ರಸ್ತೆ ಮತ್ತು ಜಿಲ್ಲಾ ಪಂಚಾಯಿತಿ ರಸ್ತೆಯ ಹೊಂಡವನ್ನು ಮುಚ್ಚಿ ಸಂಚಾರಕ್ಕೆ ಯೋಗ್ಯಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ’ ಎಂದು ಶಾಸಕ ಟಿ.ಡಿ.ರಾಜೇಗೌಡ ‘ಪ್ರಜಾವಾಣಿ'ಗೆ ತಿಳಿಸಿದರು.
ವೂದಲುಕೊಡಿಗೆಯಿಂದ ಕಿರಕೋಡು ಸಂಪರ್ಕಿಸುವ ರಸ್ತೆ ಹಲವು ವರ್ಷದಿಂದ ಅಭಿವೃದ್ಧಿಯನ್ನೇ ಕಂಡಿಲ್ಲ. ಮಳೆಗಾಲದಲ್ಲಿ ಕೆಸರು ಬೇಸಿಗೆಯಲ್ಲಿ ಧೂಳುಮಯವಾಗಿದೆ. ಹೊಂಡ ಗುಂಡಿಯಿಂದ ಜನರು ಸಂಚರಿಸಲು ಯಾತನೆ ಅನುಭವಿಸುವಂತಾಗಿದೆ.ವಿಶ್ವನಾಥ ಭಟ್ ಕಿರುಕೋಡು ಗ್ರಾಮಸ್ಥ
ಮಳೆ ಕಡಿಮೆಯಾದ ನಂತರ ತಾಲ್ಲೂಕಿನ ಬಹುತೇಕ ಮುಖ್ಯ ರಸ್ತೆಗಳಿಗೆ ಗುಣಮಟ್ಟದ ಡಾಂಬರೀಕರಣ ಮಾಡಲಾಗುವುದು. ಗ್ರಾಮೀಣ ಭಾಗದ ರಸ್ತೆಯನ್ನು ಅನುದಾನ ಮತ್ತು ಆದ್ಯತೆ ಮೇಲೆ ಹಂತ ಹಂತವಾಗಿ ಡಾಂಬರೀಕರಣ ಮಾಡಲಾಗುವುದುಟಿ.ಡಿ.ರಾಜೇಗೌಡ ಶೃಂಗೇರಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.