ಮೂಡಿಗೆರೆ: ‘ಸಮಾಜದಲ್ಲಿ ಸೌಹಾರ್ದಯುತ ಬದುಕನ್ನು ರೂಪಿಸಿಕೊಂಡರೆ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ’ ಎಂದು ಚಿಕ್ಕಮಗಳೂರು ಕ್ರೈಸ್ತ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಟಿ. ಅಂತೋಣಿ ಸ್ವಾಮಿ ಹೇಳಿದರು.
ಕೊಟ್ಟಿಗೆಹಾರದ ಸೆಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಮಾತೆ ಮರಿಯಮ್ಮನವರ ಸ್ವರ್ಗಾರೋಹಣದ ಹಬ್ಬದ ವಿಶೇಷ ಪೂಜೆ ನೆರವೇರಿಸಿ, ಅವರು ಮಾತನಾಡಿದರು.
‘ದೇವರ ಮಾತೆಯು ನಮ್ಮೆಲ್ಲರಿಗೂ ತಾಯಿಯಾಗಿದ್ದು, ಅವರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಹಬಾಳ್ವೆ, ಸಹೋದರರಂತೆ ನಡೆದು ಸದೃಢ ದೇಶವನ್ನು ಕಟ್ಟಬೇಕಾದ ಹೊಣೆ ನಮ್ಮದಾಗಿದೆ. ಸಂವಿಧಾನದ ಮೂಲಭೂತ ಹಕ್ಕುಗಳಷ್ಟೇ ಕರ್ತವ್ಯಗಳು ಮುಖ್ಯವಾಗಿದ್ದು, ಹಕ್ಕುಗಳನ್ನು ಪಡೆದ ನಾವು ಕರ್ತವ್ಯದಿಂದ ವಿಮುಖರಾಗಬಾರದು’ ಎಂದರು.
ವಿಶೇಷ ಪೂಜೆಯಲ್ಲಿ ಧರ್ಮಗುರುಗಳಾದ ಫಾ. ಚಾರ್ಲ್ಸ್ ಪಿರೇರಾ, ಫಾ. ರಾಯಪ್ಪ, ಫಾ. ಸಂಜಯ್ ಜೋವಾನ್ನಿಸ್, ಫಾ.ಅಂತೋಣಿ ರಾಜ್, ಕೊಟ್ಟಿಗೆಹಾರ ಚರ್ಚ್‌ನ ಧರ್ಮಗುರು ಫಾ. ವಿಲಿಯಂ ಬರ್ನಾರ್ಡ್ ಭಾಗವಹಿಸಿದ್ದರು.
ರಾಜ್ಯ ಕ್ರೈಸ್ತ ನಿಗಮದ ನಿರ್ದೇಶಕ ಹರ್ಷ ಮೆಲ್ವಿನ್ ಲಸ್ರಾದೊ, ಪೆಲಿಕ್ಸ್ ಕ್ರಾಸ್ತ ಹಾಗೂ ವಿವಿಧ ಚರ್ಚ್‌ಗಳ ಧರ್ಮಗುರುಗಳನ್ನು ಸನ್ಮಾನಿಸಲಾಯಿತು. ತೆರೇಸಿಯಾ ಬೇಬಿ, ವಿನ್ಸೆಂಟ್ ಡಿಸೋಜ, ಐಸಿವೈಎಂ ಯುವ ಘಟಕ ಅಧ್ಯಕ್ಷ ಪ್ರೀತಂ ಲೋಬೊ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.