ADVERTISEMENT

ಸಹಕಾರ ಕೇಂದ್ರ ಬ್ಯಾಂಕ್‌ನಿಂದ ₹858 ಕೋಟಿ ಕೆಸಿಸಿ ಬೆಳೆ ಸಾಲ ವಿತರಣೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 6:07 IST
Last Updated 31 ಅಕ್ಟೋಬರ್ 2025, 6:07 IST
ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ನಬಾರ್ಡ್‌ನ ಕರ್ನಾಟಕ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಸುರೇಂದ್ರ ಬಾಬು ಅವರನ್ನು ಗೌರವಿಸಲಾಯಿತು
ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ನಬಾರ್ಡ್‌ನ ಕರ್ನಾಟಕ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಸುರೇಂದ್ರ ಬಾಬು ಅವರನ್ನು ಗೌರವಿಸಲಾಯಿತು   

ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2024-25ನೇ ಸಾಲಿನಲ್ಲಿ ಜಿಲ್ಲೆಯ 69,850 ರೈತರಿಗೆ ₹983 ಕೋಟಿ ಮೊತ್ತದ ಕೆಸಿಸಿ ಬೆಳೆ ಸಾಲ ನೀಡಲು ಇರಿಸಿಕೊಂಡಿದ್ದ ಗುರಿಯಲ್ಲಿ, ಮಾರ್ಚ್ ಅಂತ್ಯಕ್ಕೆ 56,915 ರೈತರಿಗೆ ₹858.24 ಕೋಟಿಯಷ್ಟು ಕೆಸಿಸಿ ಬೆಳೆಸಾಲ ವಿತರಿಸಿದೆ ಎಂದು ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಿ.ನಾಯಕ್ ತಿಳಿಸಿದರು. 

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ನಬಾರ್ಡ್‌ನ ಕರ್ನಾಟಕ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಸುರೇಂದ್ರ ಬಾಬು ಅವರ ಸಮ್ಮುಖದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಬ್ಯಾಂಕ್‌ನ ಪ್ರಗತಿ ವರದಿಯನ್ನು ಮಂಡಿಸಿ ಮಾಹಿತಿ ನೀಡಿದರು.

2025-26ನೇ ಸಾಲಿಗೆ ಹಣಕಾಸಿನ ಲಭ್ಯತೆ ಆಧರಿಸಿ ₹1 ಸಾವಿರ ಕೋಟಿ ಕೃಷಿ ಸಾಲ ನೀಡುವ ಗುರಿ ಹೊಂದಲಾಗಿದೆ. 2024-25ನೇ ಸಾಲಿಗೆ ಶೇ 3ರ ಬಡ್ಡಿ ದರದಲ್ಲಿ 339 ರೈತರಿಗೆ ₹17 ಕೋಟಿ ಮಧ್ಯಮಾವಧಿ ಸಾಲ ವಿತರಣಾ ಗುರಿ ನಿಗದಿಪಡಿಸಿಕೊಂಡಿದ್ದು, ಕಳೆದ ಮಾರ್ಚ್ ಅಂತ್ಯಕ್ಕೆ 232 ರೈತರಿಗೆ ₹15.90 ಕೋಟಿ ಸಾಲ ವಿತರಿಸಲಾಗಿದೆ. 2024-25ನೇ ಸಾಲಿಗೆ ಒಟ್ಟು 12,759 ಸಾಲಗಾರ ಸದಸ್ಯರಿಗೆ ₹474.67 ಕೋಟಿ ಕೃಷಿಯೇತರ ಸಾಲ ನೀಡಲಾಗಿದೆ. ಪ್ರಸ್ತುತ ವರ್ಷ ₹370 ಕೋಟಿಯ ಕೃಷಿಯೇತರ ಸಾಲ ವಿತರಣಾ ಗುರಿ ಹೊಂದಿದ್ದು, ಇದರೊಂದಿಗೆ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.

ADVERTISEMENT

ಬ್ಯಾಂಕ್‌ನಲ್ಲಿ ಕಳೆದ ಮಾರ್ಚ್ ಅಂತ್ಯದವರೆಗೆ ಒಟ್ಟು 6,400 ಸ್ವಸಹಾಯ ಗುಂಪುಗಳಿದ್ದು, 2024-25ರಲ್ಲಿ 61 ಸ್ವಸಹಾಯ ಗುಂಪುಗಳಿಗೆ ₹89 ಲಕ್ಷ ಸಾಲ ವಿತರಿಸಲಾಗಿದೆ. ಈ ಮೂಲಕ ಜಿಲ್ಲೆಯ ಬಡ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಬಹು ಸೇವಾ ಯೋಜನೆಯ ಮೂಲಕ 43 ಸಂಘಗಳಿಗೆ ₹15.97 ಕೋಟಿ ಸಾಲವನ್ನು ಕನಿಷ್ಠ ಬಡ್ಡಿ (ಶೇ 4) ದರದಲ್ಲಿ ಗೋದಾಮು ನಿರ್ಮಾಣಕ್ಕೆ ನೀಡಲಾಗಿದೆ ಎಂದು ತಿಳಿಸಿದರು.

2024-25ನೇ ಸಾಲಿನ ಅಂತ್ಯಕ್ಕೆ ₹ 65.10 ಕೋಟಿ ಷೇರು ಬಂಡವಾಳ ಹೊಂದಿದ್ದು, 2.20 ಲಕ್ಷಕ್ಕೂ ಹೆಚ್ಚು ಠೇವಣಿದಾರರ ಮೂಲಕ ₹1,426.78 ಕೋಟಿ ವಿವಿಧ ರೀತಿಯ ಠೇವಣಿಯನ್ನು ಸಂಗ್ರಹಿಸಲಾಗಿದೆ. 2023-24ನೇ ಸಾಲಿನಲ್ಲಿ ಶಾಸನಬದ್ಧ ಲೆಕ್ಕಪರಿಶೋಧನೆ ಹಾಗೂ ನಬಾರ್ಡ್ ನಡೆಸಿದ ತಪಾಸಣೆಯಲ್ಲಿ ಈ ಬ್ಯಾಂಕ್ ಸತತವಾಗಿ ‘ಎ’ ಶ್ರೇಣಿಯನ್ನು ಹೊಂದಿದೆ. ಅದೇ ವರ್ಷ ರಾಜ್ಯ ಅಪೆಕ್ಸ್ ಬ್ಯಾಂಕ್‌ನಿಂದ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಡಿಸಿಸಿ ಬ್ಯಾಂಕ್‌ಗಳಿಗೆ ನೀಡುವ ಪ್ರಶಸ್ತಿ ಪೈಕಿ ಈ ಬ್ಯಾಂಕ್‌ಗೆ 2ನೇ ಸ್ಥಾನ ಲಭಿಸಿದ್ದು, ₹ 2 ಲಕ್ಷ ನಗದು ಪುರಸ್ಕಾರಕ್ಕೂ ಭಾಜನವಾಗಿದೆ ಎಂದು ವಿವರಿಸಿದರು.

ಮೊಬೈಲ್ ಬ್ಯಾಂಕಿಂಗ್ ಸೇವೆ ಹಾಗೂ ಶಾಖೆಗಳಲ್ಲಿ ಮೈಕ್ರೊ ಎಟಿಎಂ ವ್ಯವಸ್ಥೆ ಜಾರಿಗೊಳಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡುತ್ತಿರುವ ಐಎಂಪಿಎಸ್ ಮತ್ತು ಯುಪಿಐ-ಫೋನ್ ಪೇ ಸೇವೆಯನ್ನು ನಮ್ಮ ಬ್ಯಾಂಕ್‌ನ ಗ್ರಾಹಕರಿಗೂ ಒದಗಿಸಿದ್ದು, ಸಹಕಾರ ಬ್ಯಾಂಕ್‌ಗಳೂ ಷೆಡ್ಯೂಲ್ ಬ್ಯಾಂಕ್‌ಗಳಿಗೆ ಸರಿಸಮಾನವಾದ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉತ್ತಮ ಸೇವೆ ನೀಡುತ್ತಿದೆ. ಪ್ಯಾಕ್ಸ್ ಗಣಕೀಕರಣ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಜಿಲ್ಲೆಯ 6 ಪ್ಯಾಕ್ಸ್‌ಗಳನ್ನು ಕೇಂದ್ರ ಸರ್ಕಾರದಿಂದ ಇ-ಪ್ಯಾಕ್ಸ್ ಎಂದು ಗುರುತಿಸಿದ್ದು, ಈ ಪೈಕಿ ಚಿಕ್ಕಮಗಳೂರು ತಾಲ್ಲೂಕಿನ ಕೆ.ಆರ್.ಪೇಟೆ ಪ್ಯಾಕ್ಸ್ ರಾಜ್ಯದ ಪ್ರಥಮ ಇ-ಪ್ಯಾಕ್ಸ್ ಎಂದು ಗುರುತಿಸಿಕೊಂಡಿದೆ ಎಂದರು.

ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್, ಉಪಾಧ್ಯಕ್ಷ ಎಚ್.ಬಿ.ಸತೀಶ್, ನಿರ್ದೇಶಕರಾದ ಮುಗಳವಳ್ಳಿ ಪರಮೇಶ್ವರಪ್ಪ, ಎಂ.ಎಸ್.ನಿರಂಜನ್ ಅವರನ್ನು ಅಭಿನಂದಿಸಿದರು. ನಬಾರ್ಡ್‌ನ ಜಿಲ್ಲಾ ವ್ಯವಸ್ಥಾಪಕ ಇಮ್ಯಾನ್ಯುಯೆಲ್ ರೆಜಿಸ್ ಭಾಗವಹಿಸಿದ್ದರು.