ADVERTISEMENT

ಚಿಕ್ಕಮಗಳೂರು | ಮಾದರಿ ಸಂಗ್ರಹ ‘ಸಾಹಸಿ’

ಕೊರೊನಾ ವಾರಿಯರ್ಸ್‌ ಕಾರ್ಯ ಅನನ್ಯ

ಬಿ.ಜೆ.ಧನ್ಯಪ್ರಸಾದ್
Published 25 ಜೂನ್ 2020, 19:30 IST
Last Updated 25 ಜೂನ್ 2020, 19:30 IST
ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರೊಬ್ಬರ ಮಾದರಿ ಸಂಗ್ರಹ ಕಾರ್ಯ.
ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರೊಬ್ಬರ ಮಾದರಿ ಸಂಗ್ರಹ ಕಾರ್ಯ.   

ಚಿಕ್ಕಮಗಳೂರು: ಕೋವಿಡ್‌ ಸಂಕಷ್ಟದ ಸುಳಿಯ ಈ ಕಾಲಘಟ್ಟದಲ್ಲಿ ಕೊರೊನಾ ವಾರಿಯರ್ಸ್‌ಗಳ ಮಿಡಿತವೇ ಆಶಾಕಿರಣ, ಈ ಮಂದಿ ಅಪಾಯದ ಸೆರಗಿನಲ್ಲೇ ಕಾರ್ಯನಿರ್ವಹಿಸುತ್ತಾರೆ. ಜಿಲ್ಲಾ ಸರ್ವೇಕ್ಷಣಾ ಘಟಕದ ಪ್ರಯೋಗಾಲಯ ಹಿರಿಯ ತಾಂತ್ರಿಕ ಸಿಬ್ಬಂದಿ ಎಚ್.ಡಿ.ವೆಂಕಟೇಶ್‌ 3,000ಕ್ಕೂ ಹೆಚ್ಚು ಮಾದರಿ (ಗಂಟಲು, ಮೂಗಿನ ದ್ರವ) ಸಂಗ್ರಹಿಸಿದ್ದು, ಅಹರ್ನಿಶಿ ಕೈಂಕರ್ಯದಲ್ಲಿ ತೊಡಗಿದ್ದಾರೆ.

ಇತರ ಜಿಲ್ಲೆಗಳಿಗೆ ಹೋಲಿಸಿದರೆ ಈವರೆಗೆ ಕಾಫಿನಾಡು ಕೋವಿಡ್‌ ವಿಚಾರದಲ್ಲಿ ತುಸು ಸುರಕ್ಷಾ ವಲಯದಲ್ಲಿದೆ. ಈ ನಿಟ್ಟಿನಲ್ಲಿ ಕೊರೊನಾ ವಾರಿಯರ್ಸ್‌ಗಳ ಕಾರ್ಯ ಅನನ್ಯ. ಕೊರೊನಾ ವೈರಾಣು ಪತ್ತೆಗೆ ಶಂಕಿತರ (ಜ್ವರ, ಶೀತ, ಕೆಮ್ಮು, ಉಸಿರಾಟ ತೊಂದರೆ....) ಗಂಟಲ, ಮೂಗಿನ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷಿಸಬೇಕು. ಮಾದರಿ ಸಂಗ್ರಹ ಸವಾಲಿನ ಕಾರ್ಯ. ಜಿಲ್ಲೆಯಲ್ಲಿ ವೆಂಕಟೇಶ್‌ ಅವರು ಪ್ರಸ್ತುತ ಅತಿಹೆಚ್ಚು ಮಾದರಿ ಸಂಗ್ರಹಿಸಿದ ‘ಸಾಹಸಿ’.

ಮಾ. 12ರಿಂದ ಮಾದರಿ ಸಂಗ್ರಹದ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾಲ್ಕೈದು ಗಂಟೆ ಪರ್ಸನಲ್‌ ಪ್ರೊಟೆಕ್ಷನ್‌ (ಪಿಪಿಇ) ಗೌನು ಧರಿಸಿ ಕೆಲಸ ಮಾಡುವುದೇ ಸವಾಲು. ಅದರೊಳಗೆ ಉಸಿರಾಡುವುದು ಸ್ವಲ್ಪ ಕಷ್ಟ. ಬೆವರು ಇಳಿಯುತ್ತದೆ. ಕೆಲಸದ ಒತ್ತಡ ಜಾಸ್ತಿ ಇದೆ, ಜತೆಗೆ ಅದಮ್ಯ ಉತ್ಸಾಹವೂ ಇದೆ, ಅವಿರತವಾಗಿ ಕಾರ್ಯದಲ್ಲಿ ತೊಡಗಿದ್ದೇನೆ. ಎಂಥದೇ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಂಡಿಲ್ಲ ಎಂಬುದು ಅವರ ಮನದಾಳದ ನುಡಿ.

ADVERTISEMENT

ಒಂದೇ ದಿನ 200ಕ್ಕೂ ಹೆಚ್ಚು ಮಾದರಿ ಸಂಗ್ರಹಿಸಿದ ನಿದರ್ಶನಗಳು ಇವೆ. ಒಬ್ಬರಿಗೆ ಎರಡರಿಂದ ಮೂರು ನಿಮಿಷ ಸಾಕು. ವೃದ್ಧರು, ಕಂದಮ್ಮಗಳಿಗೆ ತುಸು ಜಾಸ್ತಿ ಸಮಯ ಹಿಡಿಯುತ್ತದೆ. ಕೋವಿಡ್‌ ಆಸ್ಪತ್ರೆಯಲ್ಲಿ ಸೋಂಕಿತರ (ಪಾಸಿಟಿವ್‌ ಪ್ರಕರಣಗಳು) ಮಾದರಿ ಸಂಗ್ರಹಿಸುವುದೇ ‘ಕಠಿಣ’ ಕಾರ್ಯ. ಯಾವುದೇ ಅಂಜಿಕೆ ಇಲ್ಲ, ಸಂತಸದಿಂದ ಕೆಲಸ ನಿರ್ವಹಿಸುತ್ತೇನೆ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.