
ತರೀಕೆರೆ: ತಾಲ್ಲೂಕಿನ ಕ್ಷೇತ್ರ ಕಲ್ಲತ್ತಿಗಿರಿಯ ಸರ್ಕಲ್ ಸಮೀಪದ ಗಂಧದ ಗುಡಿ ಭಾಗದ 5ರ ಬಳಿ ಶುಕ್ರವಾರ ಕಾಡು ಪ್ರಾಣಿಗಳು ಹಾಗೂ ಜೇನು ದುಂಬಿಗಳಿಗೆ ನಿರ್ಮಾಣ ಮಾಡಿರುವ ಕುಡಿಯುವ ನೀರಿನ ತೊಟ್ಟಿಯನ್ನು ಉದ್ಘಾಟಿಸಲಾಯಿತು.
ಶ್ರೀಗಂಧ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಟಿ.ಎನ್.ವಿಶುಕುಮಾರ್ ಮಾತನಾಡಿ, ಸ್ವಚ್ಛತಾ ಅಭಿಯಾನದ ಭಾಗವಾಗಿ ವೇದಿಕೆ ಈಗಾಗಲೇ ಹಲವಾರು ಭಾರಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದೆ. ವೇದಿಕೆ ವತಿಯಿಂದ ಶ್ರೀಕ್ಷೇತ್ರ ಕಲ್ಲತ್ತಿಗಿರಿ, ಕೆಮ್ಮಣ್ಣಗುಂಡಿ ಗಿರಿಧಾಮ ಮತ್ತು ಹೆಬ್ಬೆ ಫಾಲ್ಸ್ ಭಾಗಗಳಿಗೆ ಬರುವ ಪ್ರವಾಸಿಗರು ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವ ಪ್ಲಾಸ್ಟಿಕ್ ಬ್ಯಾಗ್, ನೀರಿನ ಬಾಟಲಿ ಮುಂತಾದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಅದನ್ನು ತಿಗಡ ಗ್ರಾಮ ಪಂಚಾಯಿತಿ ವಶಕ್ಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಗಂಧದ ಗುಡಿ ಭಾಗದ 5ರ ಬಳಿ ಶ್ರೀಗಂಧ ರಕ್ಷಣಾ ವೇದಿಕೆಯ ವತಿಯಿಂದ ಹೋಂ ಸ್ಟೇಗಳನ್ನು ನಿರ್ಮಾಣ ಮಾಡಲಾಗಿದ್ದು, ತಲಾ 1 ಕೆ.ಜಿ.ಪ್ಲಾಸ್ಟಿಕ್ ತ್ಯಾಜ್ಯ ವಸ್ತುವನ್ನು ತಂದು ಕೊಡುವ ಪ್ರವಾಸಿಗರಿಗೆ ಒಂದು ರಾತ್ರಿ ತಂಗಲು ಉಚಿತ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀಗಂಧ ರಕ್ಷಣಾ ವೇದಿಕೆಯ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಮಂಜುಳ ವಿಜಯಕುಮಾರ್, ಪದಾಧಿಕಾರಿಗಳಾಗಿ ರೋಹಿಣಿ ಎನ್. ಮೂರ್ತಿ, ನಾಗವೇಣಿ ಹರಳಪ್ಪ ಆಯ್ಕೆಯಾದರು.
ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ಸಂಚಾಲಕಿ ಕಲ್ಪನಾ ಸುಧಾಮ, ತಾಲ್ಲೂಕು ಅಧ್ಯಕ್ಷೆ ಆಶಾ ಬೋಸ್ಲೆ, ಕಾರ್ಯದರ್ಶಿ ರಾಜೇಶ್ವರಿ ಸೀತಾರಾಮು ಮುಂತಾದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.