ADVERTISEMENT

ತರೀಕೆರೆ: ಪಿಂಚಣಿಗೆ ಫಲಾನುಭವಿಗಳ ಪರದಾಟ

ಬ್ಯಾಂಕ್, ತಾಲ್ಲೂಕು ಕಚೇರಿಗೆ ವೃದ್ಧರ ಅಲೆದಾಟ

ದಾದಾಪೀರ್
Published 30 ನವೆಂಬರ್ 2020, 1:37 IST
Last Updated 30 ನವೆಂಬರ್ 2020, 1:37 IST
ತರೀಕೆರೆ ಪಟ್ಟಣದಲ್ಲಿ ಪಿಂಚಣಿ ಸಕಾಲದಲ್ಲಿ ಸಿಗದೆ ತಾಲ್ಲೂಕು ಕಚೇರಿಗೆ ಬಂದಿರುವ ಫಲಾನುಭವಿಗಳು.
ತರೀಕೆರೆ ಪಟ್ಟಣದಲ್ಲಿ ಪಿಂಚಣಿ ಸಕಾಲದಲ್ಲಿ ಸಿಗದೆ ತಾಲ್ಲೂಕು ಕಚೇರಿಗೆ ಬಂದಿರುವ ಫಲಾನುಭವಿಗಳು.   

ತರೀಕೆರೆ: ಸರ್ಕಾರದ ಸಾಮಾಜಿಕ ಭದ್ರತಾ ಸೌಲಭ್ಯಗಳು ಸಕಾಲದಲ್ಲಿ ಫಲಾನುಭವಿಗಳ ಕೈ ಸೇರದೆ ಬ್ಯಾಂಕ್ ಹಾಗೂ ತಾಲ್ಲೂಕು ಕಚೇರಿಗೆ ಸುತ್ತಿ ಬಸವಳಿಯುತ್ತಿದ್ದಾರೆ.

ಅರ್ಹ ಫಲಾನುಭವಿಗಳಿಗೆ ಜೀವನ ಸಂಧ್ಯಾ ಕಾಲದಲ್ಲಿ ಬದುಕು ನಡೆಸುವುದಕ್ಕಾಗಿ ಸರ್ಕಾರದ ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲರ ಪಿಂಚಣಿ ಹಾಗೂ ಮನಸ್ವಿನಿ ಪಿಂಚಣಿಯು ಬಹಳಷ್ಟು ಫಲಾನುಭವಿಗಳಿಗೆ ಹತ್ತಾರು ತಿಂಗಳು ಕಳೆದರೂ ಬಂದಿಲ್ಲ.

ತಾಲ್ಲೂಕಿನಲ್ಲಿ ಸಂಧ್ಯಾ ಸುರಕ್ಷಾ ಯೋಜನೆಗೆ 15,640, ವಿಧವಾ ವೇತನಕ್ಕೆ 7,017, ವೃದ್ಧಾಪ್ಯ ವೇತನಕ್ಕೆ 2,655, ಅಂಗವಿಕಲ ವೇತನಕ್ಕೆ 3,506 ಹಾಗೂ ಮನಸ್ವಿನಿ ಯೋಜನೆಗೆ 530 ಮಂದಿ ಫಲಾನುಭವಿಗಳಿದ್ದಾರೆ.

ADVERTISEMENT

ಪಿಂಚಣಿ ಸೌಲಭ್ಯವನ್ನು ಅಂಚೆ ಮತ್ತು ಬ್ಯಾಂಕ್‌ಗಳ ಮೂಲಕ ಫಲಾನುಭವಿಗಳ ಖಾತೆಗೆ ನೇರ ಜಮಾವಣೆ ಮಾಡಲಾಗುತ್ತದೆ. ಆದರೆ, ಫಲಾನುಭವಿಗಳು ಖಾತೆ ಹೊಂದಿರುವ ಬಹಳಷ್ಟು ಬ್ಯಾಂಕ್‌ಗಳು ಇತರೇ ಬ್ಯಾಂಕ್‌ಗಳೊಂದಿಗೆ ವಿಲೀನಗೊಂಡಿವೆ. ವಿಲೀನದಿಂದಾಗಿ ಫಲಾನುಭವಿಗಳ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್ ಹಾಗೂ ಬ್ಯಾಂಕ್‌ಗಳ ಹೆಸರು ಬದಲಾವಣೆಯಾಗಿದೆ. ಈ ಕಾರಣ ಗಳಿಂದಾಗಿ ಪಿಂಚಣಿಯನ್ನು ಫಲಾನುಭವಿ ಗಳ ಖಾತೆಗೆ ಹಾಕಲಾಗುತ್ತಿಲ್ಲ. ಫಲಾನು ಭವಿಗಳು ಈ ದೋಷವನ್ನು ಸರಿಪಡಿಸಿ ಕೊಳ್ಳಬೇಕಿದೆ. ಆದರೆ, ಅನಕ್ಷರಸ್ಥ ಹಾಗೂ ವೃದ್ಧ ಫಲಾನುಭವಿಗಳಿಗೆ ಇದು ಸಾಧ್ಯವಾಗುತ್ತಿಲ್ಲ.

‘ಅಂಚೆ ಇಲಾಖೆಯಲ್ಲಿಯೂ ತಾಂತ್ರಿಕ ಬದಲಾವಣೆಗಳು ನಡೆಯುತ್ತಿದ್ದು, ಈ ಬಗ್ಗೆ ಮಾಹಿತಿ ಇಲ್ಲದೆ ಇರುವುದು ಗೊಂದಲಕ್ಕೆ ಕಾರಣವಾಗಿದೆ’ ಎಂದು ತಾಲ್ಲೂಕು ಕಚೇರಿ ಅಧಿಕಾರಿಗಳು ಹೇಳುತ್ತಾರೆ.

‘ಕೊರೊನಾ ಸಂಕಷ್ಟದಲ್ಲಿ ನಮ್ಮ ಬದುಕಿಗೆ ಪಿಂಚಣಿ ಆಧಾರವಾಗಬೇಕಿತ್ತು. ಇದನ್ನೇ ನಂಬಿ ನಾವು ಬದುಕಿದ್ದೇವೆ. ಔಷಧಿಗಳಿಗಾಗಿ ಹಣವಿಲ್ಲದೆ ಪರದಾಡುತ್ತಿದ್ದೇವೆ. ಹತ್ತು ತಿಂಗಳಿಂದ ಪಿಂಚಣಿ ಬಂದಿಲ್ಲ. ಆಡಳಿತ ಕ್ರಮ ವಹಿಸಲಿ’ ಎಂದು ಫಲಾನುಭವಿಗಳಾದ ಶಾಂತಮ್ಮ ಮತ್ತು ಅಬ್ದುಲ್ ವಾಜೀದ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.