
ಚಿಕ್ಕಮಗಳೂರು: ಗೃಹ ಸಚಿವ ಜಿ.ಪರಮೇಶ್ವರ ವಿರುದ್ಧ ಅವಹೇಳನವಾಗಿ ಮಾತನಾಡಿದ ಆರೋಪದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಬಂಧನವಾಗಿದ್ದು, ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ಬೆಂಗಳೂರಿನ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾತನಾಡುವಾಗ ಸಂತೋಷ್ ಕೋಟ್ಯಾನ್ ಅವರು ಜಿ.ಪರಮೇಶ್ವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂಬುದು ಅವರ ಮೇಲಿರುವ ಆರೋಪ.
ಜಾತಿ ನಿಂದನೆ ಸೇರಿ ಅವರಿಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ವಕೀಲ ಅನಿಲ್‌ಕುಮಾರ್ ದೂರು ನೀಡಿದ್ದಾರೆ. ಅವರು ದಲಿತ ಸಮುದಾಯಕ್ಕೆ ಸೇರಿರುವ ಕಾರಣಕ್ಕೆ ಅವರು ಮತ್ತು ಅವರ ಮಗನ ಬಗ್ಗೆ ಸಂತೋಷ್ ಕೋಟ್ಯಾನ್ ಲಘುವಾಗಿ ಮಾತನಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ನಗರ ಠಾಣೆ ಪೊಲೀಸರು, ಬುಧವಾರ ಸಂಜೆ ಸಂತೋಷ್ ಅವರನ್ನು ಬಂಧಿಸಿದರು. ಠಾಣೆ ಬಳಿ ಸೇರಿದ ಬಿಜೆಪಿ ಕಾರ್ಯಕರ್ತರು, ಧರಣಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂತೋಷ್ ಕೋಟ್ಯಾನ್ ಅವರು ಪರಮೇಶ್ವರ ಅವರ ಜಾತಿ ನಿಂದನೆ ಮಾಡಿಲ್ಲ. ಜೈಲಿನಲ್ಲಿ ಕೈದಿಗಳಿಗೆ ದೊರಕುತ್ತಿರುವ ಐಶಾರಾಮಿ ಜೀವನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಯಾವುದಕ್ಕೂ ಅವರು ಉತ್ತರ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೇ ಜಾತಿ ನಿಂದನೆ ಎಂದು ಆರೋಪಿಸಿರುವುದು ಸರಿಯಲ್ಲ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.’
ಠಾಣೆಯ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ರಾತ್ರಿ 9ರ ತನಕ ಧರಣಿ ಮುಂದುವರಿಸಿದ್ದರು. ಸುತ್ತಮುತ್ತಲ ಬಡಾವಣೆ ನಿವಾಸಿಗಳು, ಪಕ್ಕದಲ್ಲೇ ಮಾರುಕಟ್ಟೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆ ಇದ್ದ ಕಾರಣ ಎಲ್ಲರನ್ನೂ ಪೊಲೀಸರು ಚದುರಿಸಿ ವಾಪಸ್ ಕಳುಹಿಸಿದರು. ಠಾಣೆಯ ಸುತ್ತಮುತ್ತ ಪೊಲೀಸರು ಬೀಗಿ ಬಂದೋಬಸ್ತ್ ಕೈಗೊಂಡಿದ್ದರು.
ಬಳಿಕ ಸಂತೋಷ್ ಕೋಟ್ಯಾನ್ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಿದರು. ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ನ್ಯಾಯಾಧೀಶರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಸುಳ್ಳು ಮೊಕದ್ದಮೆ: ಕಾನೂನು ಹೋರಾಟ ಸಂತೋಷ್ ಕೋಟ್ಯಾನ್ ವಿರುದ್ಧ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದರ ವಿರುದ್ಧ ನ್ಯಾಯಾಂಗ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಸಂತೋಷ್ ಕೋಟ್ಯಾನ್ ಭಾಷಣದಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸುವ ಯಾವುದೇ ವಿಷಯ ಇಲ್ಲ. ಆದರೂ ವಕೀಲರೊಬ್ಬರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎಂದರು. ಯಾವ ಕಾರಣಕ್ಕೆ ಬಂಧನವಾಗಿದೆ ಯಾರ ಹಸ್ತಕ್ಷೇಪವಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ರೀತಿಯ ಮೊಕದ್ದಮೆಗಳಿಗೆ ಮತ್ತು ಜೈಲಿಗೆ ಹೋಗಲು ಬಿಜೆಪಿ ಕಾರ್ಯಕರ್ತರು ಹೆದರುವುದಿಲ್ಲ ಎಂದು ಹೇಳಿದರು.
ದಲಿತರು ಎಂಬ ಕಾರಣಕ್ಕೆ ಅವಹೇಳನ’
‘ಜಿ.ಪರಮೇಶ್ವರ ಅವರು ಗೃಹ ಮಂತ್ರಿಯಾಗಿದ್ದರೂ ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರನ್ನು ಸಾರ್ವಜನಿಕವಾಗಿ ಅವಹೇಳನ ಮಾಡಲಾಗಿದೆ. ಅದ್ದರಿಂದ ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ವಕೀಲ ಅನಿಲ್‌ಕುಮಾರ್ ತಿಳಿಸಿದರು. ‘ಅವರು ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿ. ಅವರ ವೈಯಕ್ತಿಕ ಜೀವನ ಮತ್ತು ಕುಟುಂಬದವರ ಬಗ್ಗೆ ಕೀಳಾಗಿ ಮಾತನಾಡಿರುವುದರಿಂದ ನಮ್ಮ ಮನಸ್ಸಿಗೆ ನೋವಾಗಿದೆ. ಪರಮೇಶ್ವರ ಅವರ ವಿರುದ್ಧ ಈ ರೀತಿಯ ಅವಹೇಳನ ಮರುಕಳಿಸಬಾರದು’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.