ADVERTISEMENT

ಸರ್ವಜ್ಞರ ತ್ರಿಪದಿ: ಸಮಾಜ ತಿದ್ದುವ ಚಿಕಿತ್ಸಕ ಶಕ್ತಿ; ಎ.ಎನ್. ಮಹೇಶ್ ಅಭಿಮತ

ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ ಉದ್ಘಾಟಿಸಿದ ಎ.ಎನ್. ಮಹೇಶ್ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 6:51 IST
Last Updated 21 ಫೆಬ್ರುವರಿ 2026, 6:51 IST
ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂತ ಕವಿ ಸರ್ವಜ್ಞ ಜಯಂತಿಯನ್ನು ಕಾರ್ಯಕ್ರಮ ಉದ್ಘಾಟಿಸಲಾಯಿತು
ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂತ ಕವಿ ಸರ್ವಜ್ಞ ಜಯಂತಿಯನ್ನು ಕಾರ್ಯಕ್ರಮ ಉದ್ಘಾಟಿಸಲಾಯಿತು   

ಚಿಕ್ಕಮಗಳೂರು: ಕನ್ನಡದ ಮಹಾನ್ ಸಂತ, ಕವಿ ಮತ್ತು ದಾರ್ಶನಿಕ ಸರ್ವಜ್ಞರ ತ್ರಿಪದಿಗಳು ಕೇವಲ ಸಾಹಿತ್ಯವಲ್ಲ; ಅವು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಚಿಕಿತ್ಸಕ ಶಕ್ತಿಯಾಗಿವೆ ಎಂದು ಕೇಂದ್ರ ಸರ್ಕಾರದ ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

16ನೇ ಶತಮಾನದಲ್ಲಿ ಸಮಾಜದಲ್ಲಿದ್ದ ವರ್ಗ ಸಂಘರ್ಷ, ಮೇಲು-ಕೀಳು ಹಾಗೂ ಜಾತಿ ಪದ್ಧತಿಯ ವಿರುದ್ಧ ಸರ್ವಜ್ಞ ತಮ್ಮ ಸಾಹಿತ್ಯದ ಮೂಲಕ ದೊಡ್ಡ ಹೋರಾಟವನ್ನೇ ಮಾಡಿದ್ದರು ಎಂದರು.

ADVERTISEMENT

ಇಂದಿನ ವೇಗದ ಯುಗದಲ್ಲಿ ಜನರು ಸುದೀರ್ಘ ಕಾವ್ಯಗಳನ್ನು ಓದಲು ಸಮಯವಿಲ್ಲದಿದ್ದರೂ, ಸರ್ವಜ್ಞರ ಮೂರೇ ಸಾಲಿನ ತ್ರಿಪದಿಗಳು ಇಂದಿನ ಮಾಹಿತಿ ತಂತ್ರಜ್ಞಾನದ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಹೇಳಿದರು.

ಸರ್ವಜ್ಞ ಎಂದರೆ ಎಲ್ಲವನ್ನೂ ತಿಳಿದವನು ಎಂದರ್ಥ. ಆದರೆ, ಸರ್ವಜ್ಞರು ತಾವು ಎಲ್ಲರ ಬಳಿ ಒಂದೊಂದು ನುಡಿ ಕಲಿತು ಈ ಹಂತಕ್ಕೆ ತಲುಪಿದ್ದಾಗಿ ಹೇಳಿಕೊಳ್ಳುವ ಮೂಲಕ ವಿನಯಕ್ಕೆ  ಮಾದರಿ ಆಗಿದ್ದಾರೆ ಎಂದು ತಿಳಿಸಿದರು.

ಕರ್ನಾಟಕದ ಸರ್ವಜ್ಞರು ಮತ್ತು ತಮಿಳುನಾಡಿನ ತಿರುವಳ್ಳುವರ್ ಅವರ ಸಾಹಿತ್ಯ ಮತ್ತು ಜೀವನ ಶೈಲಿಯಲ್ಲಿ ಸಾಮ್ಯತೆಗಳಿವೆ. ಈ ದಾರ್ಶನಿಕರು ಭಾಷೆ ಮತ್ತು ಪ್ರಾದೇಶಿಕ ಗಡಿಗಳನ್ನು ಮೀರಿ ನಿಲ್ಲುತ್ತಾರೆ. ಅದಕ್ಕಾಗಿಯೇ ಬೆಂಗಳೂರಿನಲ್ಲಿ ತಿರುವಳ್ಳುವರ್ ಮತ್ತು ತಮಿಳುನಾಡಿನಲ್ಲಿ ಸರ್ವಜ್ಞರ ಪ್ರತಿಮೆಯನ್ನು ಸ್ಥಾಪಿಸಿ ಉಭಯ ರಾಜ್ಯಗಳ ನಡುವಿನ ಬಾಂಧವ್ಯವನ್ನು ವೃದ್ಧಿಸಲಾಗಿದೆ ಎಂದರು.

ಕೇವಲ ಪಾರಂಪರಿಕ ವೃತ್ತಿಗಳಿಗೆ ಅಂಟಿಕೊಳ್ಳದೆ, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಅವರನ್ನು  ಎಂಜಿನಿಯರ್, ವಕೀಲರು, ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನಾಗಿ ಮಾಡುವಂತೆ ಪೋಷಕರಿಗೆ ಕರೆ ನೀಡಿದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿದರು.

ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಸಿ.ನಾಗಪ್ಪ ಶೆಟ್ಟಿ ಉಪನ್ಯಾಸ ನೀಡಿದರು.

ಉಪತಹಶೀಲ್ದಾರ್ ರಾಮರಾವ್ ದೇಸಾಯಿ, ಜಿಲ್ಲಾ ಕುಂಬಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಂ.ಗಂಗಾಧರ್, ತಾಲ್ಲೂಕು ಕುಂಬಾರರ ಸಂಘದ ಅಧ್ಯಕ್ಷ ಬಿ.ಆರ್.ಜಯಪ್ರಕಾಶ್, ಮುಖಂಡರಾದ ಎಂ.ಬಿ.ಅಶೋಕ್ ಕುಮಾರ್, ಕೆ.ಪರಮೇಶ್, ಹುಣಸೇಮಕ್ಕಿ ಲಕ್ಷ್ಮಣ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.