ಚಿಕ್ಕಮಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಾಸಿಸುವ ಪ್ರದೇಶಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಜೊತೆಗೆ ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಅಗತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಕುಂದು– ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಲ್ಲಲ್ಲೇ ಮುಖಂಡರ ಸಭೆಗಳನ್ನು ನಡೆಸಲಾಗುತ್ತಿದೆ. ಸಮಾಜದಲ್ಲಿ ಶಾಂತಿ, ಸಾಮರಸ್ಯ ಮೂಡಿಸಲು ಈ ರೀತಿಯ ಸಭೆಗಳಲ್ಲಿ ಮುಖಂಡರು ಭಾಗವಹಿಸುವಿಕೆ ಮುಖ್ಯ ಎಂದರು.
ಸರ್ಕಾರದಿಂದ ದೊರಕುವ ಸೌಲಭ್ಯಗಳ ಬಗ್ಗೆ ಜನರಿಗೆ ಮುಖಂಡರು ತಿಳಿವಳಿಕೆ ಮೂಡಿಸಬೇಕು. ದೂರು ದಾಖಲಿಸುವಾಗ ಇರುವ ಉತ್ಸಾಹ ಅದು ಅಂತಿಮ ಹಂತ ತಲುಪುವ ತನಕ ಇರುವಂತೆ ನೋಡಿಕೊಳ್ಳಬೇಕು. ಇತ್ತೀಚೆಗೆ ದೌರ್ಜನ್ಯ ಪ್ರಕರಣಗಳಿಗೆ ನ್ಯಾಯ ದೊರಕುವುದು ಕಡಿಮೆಯಾಗಿದೆ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೃಷ್ಣಮೂರ್ತಿ ಅವರು, ಕಳೆದ ಸಭೆಯಲ್ಲಿ ವ್ಯಕ್ತವಾದ ವಿಷಯಗಳ ಬಗ್ಗೆ ಅನುಪಾಲನ ವರದಿಯನ್ನು ಸಭೆಗೆ ತಿಳಿಸಿದರು.
ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಟ್ಟು 223 ಅಬಕಾರಿ ಪ್ರಕರಣಗಳನ್ನು ದಾಖಲಿಸಿ ಒಂದು ಸಾವಿರ ಲೀಟರ್ ಮದ್ಯ ನಾಶಪಡಿಸಲಾಗಿದೆ. 64 ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ. 46 ಪ್ರಕರಣ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಉಳಿದ 13 ಪ್ರಕರಣಗಳು ತನಿಖೆ ಹಂತದಲ್ಲಿವೆ ಎಂದು ಹೇಳಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ರಶ್ಮಿ, ಡಿವೈಎಸ್‌ಪಿ ಶೈಲೇಂದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.