ADVERTISEMENT

ಶಕಟಪುರ ಮಠದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 3:09 IST
Last Updated 19 ಫೆಬ್ರುವರಿ 2026, 3:09 IST
ಕೊಪ್ಪ ತಾಲ್ಲೂಕು ಶಕಟಪುರ ಮಠದಲ್ಲಿ ಆಯೋಜಿರುವ ವಿಶೇಷ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು
ಕೊಪ್ಪ ತಾಲ್ಲೂಕು ಶಕಟಪುರ ಮಠದಲ್ಲಿ ಆಯೋಜಿರುವ ವಿಶೇಷ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು   

ಕೊಪ್ಪ: ತಾಲ್ಲೂಕಿನ ಶಕಟಪುರ ಮಠದಲ್ಲಿ ಫೆ. 19ರಿಂದ 24ರವರೆಗೆ ಮಠದ ಪೀಠಾಧೀಶ್ವರ ವಿದ್ಯಾಭಿನವ ಶ್ರೀಕೃಷ್ಣಾನಂದ ತೀರ್ಥ ಶ್ರೀಗಳ ಪೂರ್ಣಾಭಿಷೇಕ, ಮಹಾಸನ ಆರೋಹಣ ಕಾರ್ಯಕ್ರಮ, ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಮಠದ ವ್ಯವಸ್ಥಾಪಕ ರಾಘವ ತಿಳಿಸಿದರು.

ಮಂಗಳವಾರ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಫೆ. 19ಕ್ಕೆ ಸಹಸ್ರ ನಾಲಿಕೇರ ಮಹಾಗಣಯಾಗ, ಮೇಧಾ ದಕ್ಷಿಣಮೂರ್ತಿ ಹೋಮ, ಲಲಿತ ಸಹಸ್ರನಾಮ ಹೋಮ. 20ಕ್ಕೆ ಸಹಸ್ರ ಕಮಲಗಳಿಂದ ಸೂಕ್ತ ಮಹಾಯಾಗ, ವಿಷ್ಣು ಸಹಸ್ರನಾಮ ಹೋಮ. 21ಕ್ಕೆ ಶೀಘ್ರ ದೀರ್ಘಾಯುರಾರೋಗ್ಯಪ್ರದ ಲಕ್ಷ್ಮೀನರಸಿಂಹ ಯಾಗ, ಶಿವ ಸಹಸ್ರನಾಮ ಹೋಮ. 22ಕ್ಕೆ ಮಹಾಪೂರ್ಣಾಭಿಷೇಕ, ಗುರುವಂದನ ಸಮಾರಂಭ, ಮಹಾಗಣೇಶ್ವರ ಸಹಸ್ರನಾಮ ಹೋಮ. 23ಕ್ಕೆ ಮಹಾ ಮೃತ್ಯುಂಜಯ ಯಾಗ, ಸದ್ಗುರು ದತ್ತಾತ್ರೇಯ ಹೋಮ, ಶತ ಚಂಡಿಕಾಯಾಗ ನಿಮಿತ್ತ ಸಪ್ತಶತಿ ಪುರಸ್ಚರಣೆ ಆರಂಭ, ಸೂರ್ಯ ಸಹಸ್ರನಾಮ ಹೋಮ. 24ಕ್ಕೆ ಶತಚಂಡಿಕಾ ಮಹಾಯಾಗ ನಡೆಯಲಿದೆ’ ಎಂದರು.

ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ಪ್ರತಿದಿನ ದೇವಿ ಪಂಚಾಯತನ ಪೂಜೆ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಫೆ. 22ರಂದು ಸಂಜೆ 5.30ರಿಂದ 7ರವರೆಗೆ ಆಸ್ಥಾನ ವಿಧಿಸಿ ಸಂಹಿತಾ ಶಿವರಾಮನ್, ಆಸ್ಥಾನ ವಿದ್ವಾನ್ ಶ್ರೇಯಸ್ ಶಿವರಾಮನ್ ತಂಡದಿಂದ ಅಮೋಘ ಮ್ಯಾಂಡಲಿನ್ ವಾದನ ಕಾರ್ಯಕ್ರಮ ಆಯೋಜಿಸಿದೆ. ಸಂಜೆ 7ರಿಂದ ಪ್ರಮುಖ ರಾಜಬೀದಿಯಲ್ಲಿ ಅಲಂಕೃತ ರಜತಪಲ್ಲಕ್ಕಿ ಮಹೋತ್ಸವ ಜರುಗಲಿದೆ ಎಂದು ವಿವರಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ, ಬೆಂಗಳೂರಿನ ವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ, ಭೀಮಸೇತು ಮುನಿವ್ರಂದ ಮಠದ ರಘುವರೇಂದ್ರ ತೀರ್ಥ ಶ್ರೀಪಾದರು, ತಮಿಳುನಾಡು ಹೊಸುರಿನ ಶಕಟಪುರ ಪುಣ್ಯಶ್ರಮವಾಸ ಶ್ರೀಕೃಷ್ಣಾತ್ಮಾನಂದ ಸರಸ್ವತಿ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಮಠದ ಆಡಳಿತಾಧಿಕಾರಿ ಎಂ.ಚಂದ್ರಮೌಳೀಶ್ವರ ಮಾತನಾಡಿ, ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಾರ್ವಜನಿಕರು, ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಮಠದ ಭಕ್ತರಾದ ಬಿ.ಎಚ್. ದಿವಾಕರ್ ಭಟ್ ಭಂಡಿಗಡಿ, ಪ್ರಶಮನಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಉದಯಶಂಕರ್ ಇದ್ದರು.