ಚಿಕ್ಕಮಗಳೂರು: ‘ನೀಡಿದ್ದ ಭರವಸೆಯಂತೆ ಶಕ್ತಿ ಯೋಜನೆಯ ಮೊತ್ತವನ್ನು ಕೆಎಸ್‌ಆರ್‌ಟಿಸಿಗೆ ಸರ್ಕಾರ ಪಾವತಿಸಿದೆ. ಈ ಹಣದಲ್ಲಿ ನಿಗಮ ಹೊಸ ಬಸ್‌ಗಳನ್ನು ಖರೀದಿಸಿದೆ. ಚಾಲಕ, ನಿರ್ವಾಹಕರ ನೇಮಕಕ್ಕೆ ಸಾಧ್ಯವಾಗಿದೆ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಆಯೋಜಿಸಿದ್ದ ಶಕ್ತಿ ಯೋಜನೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜ್ಯದಾದ್ಯಂತ ಮಹಿಳೆಯರು 500 ಕೋಟಿ ಟ್ರಿಪ್‌ಗಳಲ್ಲಿ ಉಚಿತವಾಗಿ ಸಂಚರಿಸಿದ್ದು, ಇದರ ಮೊತ್ತ ₹12,669 ಕೋಟಿ ವರಮಾನ ನಿಗಮಕ್ಕೆ ಬಂದಿದೆ’ ಎಂದರು.
ರಾಜ್ಯ ಸರ್ಕಾರ ಐದೂ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಶಕ್ತಿ ಯೋಜನೆ ಯಶಸ್ವಿಯಾಗಿ ಎರಡು ವರ್ಷ ಪೂರೈಸಿದೆ. ಆದ್ದರಿಂದ ರಾಜ್ಯದಾದ್ಯಂತ ಎಲ್ಲ ಬಸ್ ನಿಲ್ದಾಣಗಳಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಚಿಕ್ಕಮಗಳೂರು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಮಲ್ಲೇಶ್‌ಸ್ವಾಮಿ ಮಾತನಾಡಿ, ‘ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಲು ಅವಕಾಶವಾಗಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ‘ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉತ್ತಮ ಅವಕಾಶ ಒದಗಿಸಿದಂತಾಗಿದೆ. ಮುಂದೆಯೂ ಮೂರು ವರ್ಷ ಐದು ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಮುಂದುವರಿಸಲಿದೆ’ ಎಂದು ಹೇಳಿದರು.
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಮಾತನಾಡಿ, ‘ಜಿಲ್ಲೆಯ ಎಲ್ಲಾ ಆರು ಘಟಕಗಳ ವಾಹನಗಳಲ್ಲಿ ಈವರೆಗೆ ಒಟ್ಟು 8.43 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಸಂಚರಿಸಿದ್ದು, ₹ 322.28 ಕೋಟಿ ವಿನಿಯೋಗಿಸಲಾಗಿದೆ. ಚಿಕ್ಕಮಗಳೂರು ಘಟಕ ಒಂದರಲ್ಲೇ ಒಟ್ಟು 2.28 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಸಂಚರಿಸಿದ್ದು, ನಿಗಮಕ್ಕೆ ₹79.45 ಕೋಟಿ ವರಮಾನ ಬಂದಿದೆ’ ಎಂದರು.
ಇದೇ ವೇಳೆ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.