
ಚಿಕ್ಕಮಗಳೂರು: ‘ಮಾನವ ಧರ್ಮವನ್ನು ಸಂರಕ್ಷಣೆ ಮಾಡಿದ ಮಹಾಪುರುಷ ಎಂದರೆ ಅದು ಬಸವಣ್ಣ. ಸಮಾಜ ಪರಿವರ್ತನೆಗೆ ಶರಣ ಚಳವಳಿಯೇ ಮಾದರಿ ಮತ್ತು ಪರಿಹಾರ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಭಿಪ್ರಾಯಪಟ್ಟರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 40ರ ಸಂಭ್ರಮದ ಅಂಗವಾಗಿ ನಗರದ ಒಕ್ಕಲಿಗರ ಭವನದಲ್ಲಿ ಆಯೋಜಿಸಿದ್ದ ಸಂವಾದ, ವಿಚಾರಗೋಷ್ಠಿ, ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
12ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯ ವಿಚಾರಧಾರೆ, ಸಾಮಾಜಿಕ ಕ್ರಾಂತಿಯನ್ನು ಅಧ್ಯಯನ ಮಾಡುವುದು ಮತ್ತು ಪ್ರಚಾರ ಮಾಡುವುದು ಅತ್ಯಂತ ಮಹತ್ವದ ಕೆಲಸ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಆದಿಯಾಗಿ ಎಲ್ಲಾ ಶರಣರ ವಚನಗಳನ್ನು ಪ್ರಸಾರ ಮಾಡಲು ಅವಿರತವಾಗಿ ಶ್ರಮಿಸುತ್ತಿರುವ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದರು.
12ನೇ ಶತಮಾನದಲ್ಲಿ ಸಾಮಾಜಿಕ ಪರಿವರ್ತನೆಯನ್ನು ಶರಣರು ಮಾಡಿದರು. 21ನೇ ಶತಮಾನದಲ್ಲಿ ಇದೇ ನಿಟ್ಟಿನಲ್ಲಿ ಸಮಾಜ ಪರಿವರ್ತನೆ ಮಾಡಲು ಶರಣ ಸಾಹಿತ್ಯ ಪರಿಷತ್ತು ಕಾರ್ಯೋನ್ಮುಖವಾಗಬೇಕು ಎಂದು ಹೇಳಿದರು.
ಬಸವಣ್ಣ ಹಾಗೂ ಶರಣರ ವಿಚಾರಗಳು ಸಾರ್ವಕಾಲಿಕ. ರಾಜ್ಯ, ಹೊರ ರಾಜ್ಯ, ಹೊರ ದೇಶಗಳಲ್ಲಿ ಪ್ರಚಾರ ಮಾಡಲು ಶರಣ ಸಾಹಿತ್ಯ ಪರಿಷತ್ತು ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬಸವಣ್ಣ ಹಾಗೂ ಶಿವಶರಣರ ಆಶಯಗಳಿಗೆ ಅನುಸಾರವಾಗಿ ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ಬಸವಣ್ಣ ಪ್ರತಿಪಾದಿಸಿದ ಪ್ರಜಾಪ್ರಭುತ್ವದ ನೆಲೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಅನ್ನಭಾಗ್ಯ ಯೋಜನೆಯನ್ನು ಮುಖ್ಯಮಂತ್ರಿ ಘೋಷಿಸಿದರು ಎಂದು ಅವರು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ‘ದೇಶವನ್ನು ಗುಲಾಮಗಿರಿಯಿಂದ ಹೊರ ತರುವ ಪ್ರಯತ್ನವನ್ನು ಬಸವಣ್ಣ 12ನೇ ಶತಮಾನದಲ್ಲೇ ಮಾಡಿದ್ದರು. ದುಡಿಯುವ ಗುಣವನ್ನು ಮತ್ತು ದುಡಿಮೆಯ ಕೆಲ ಭಾಗವನ್ನು ಸಮಾಜಕ್ಕೆ ಹಂಚುವ ಮನೋಭಾವವನ್ನು ಬಸವಣ್ಣ ಜನರಲ್ಲಿ ಬಿತ್ತಿದ್ದರು’ ಎಂದರು.
ಸಾಹಿತಿ ಬಸವರಾಜ ಸಾದರ ಅವರು ಸಮಾರೋಪ ಭಾಷಣ ಮಾಡಿದರು. ಶಾಸಕ ಎಚ್.ಡಿ. ತಮ್ಮಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಕಾಂಗ್ರೆಸ್ ಮುಖಂಡರಾದ ಬಿ.ಎಂ. ಸಂದೀಪ್, ಎಂ.ಸಿ. ಶಿವಾನಂದಸ್ವಾಮಿ, ಬಿ.ಬಿ. ನಿಂಗಯ್ಯ, ಎಂ.ಪಿ. ಕುಮಾರಸ್ವಾಮಿ, ಎಂ.ಎಲ್. ಮೂರ್ತಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್, ಬಿಜೆಪಿ ಮುಖಂಡ ಎಚ್.ಸಿ. ಕಲ್ಮರುಡಪ್ಪ, ರೈತ ಮುಖಂಡ ಗುರುಶಾಂತಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಎಂ. ಮಂಜುನಾಥಸ್ವಾಮಿ ಭಾಗವಹಿಸಿದ್ದರು.
Quote - ರಾಜ್ಯದ ಹಲವೆಡೆಯಿಂದ ಬಂದಿದ್ದ ಮಹನೀಯರು ಸಮ್ಮೇಳನಕ್ಕೆ ಸಾಕ್ಷಿಯಾದರು. ಎಲ್ಲಾ ಸಂಕಟಗಳಿಗೆ ಉತ್ತರ ಶೋಧಿಸುವ ಚರ್ಚೆಗಳು ನಡೆದಿವು. ಮೂರು ದಿನಗಳ ಸಮ್ಮೇಳನ ಅತ್ಯಂತ ಯಶಸ್ವಿಯಾಗಿದೆ. ರವೀಶ್ ಕ್ಯಾತನಬೀಡು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ
Quote - ಚಕ್ಕಮಗಳೂರಿನಲ್ಲಿ ಮೂರು ದಿನಗಳ ಕಾಲ ಜ್ಞಾನ ಮತ್ತು ಅನ್ನ ದಾಸೋಹ ಯಶಸ್ವಿಯಾಗಿ ನಡೆದಿದೆ. ಎಲ್ಲರ ಶ್ರಮ ಮತ್ತು ಸಹಕಾರದಿಂದ ಇದು ಸಾಧ್ಯವಾಗಿದೆ. ಸಿ.ಸೋಮಶೇಖರ್ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ
Cut-off box - ‘ಒಂದೇ ಧರ್ಮ ಒಬ್ಬನೇ ನಾಯಕ: ಅಪಾಯಕಾರಿ’ ‘ಒಂದೇ ದೇವರು ಒಂದೇ ಧರ್ಮ ಒಬ್ಬನೇ ನಾಯಕ ಒಂದೇ ಪಕ್ಷ ಎಂಬುದು ಮುಂದೆ ಸರ್ವಾಧಿಕಾರಿಯಾಗುವ ಅಪಾಯವಿದೆ’ ಎಂದು ಸಾಹಿತಿ ನಟರಾಜ್ ಭೂದಾಳ್ ಹೇಳಿದರು. ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಗೋಷ್ಠಿಯಲ್ಲಿ ವಚನ–ಶ್ರಮಣಧಾರೆಗಳ ಸಂಧಿಭೂಮಿ ಕುರಿತು ವಿಚಾರ ಮಂಡಿಸಿದರು. ‘ಶೂದ್ರ ಧಾರ್ಮಿಕ ಆವರಣವು ಹೊರಗಿನ ಅನ್ಯ ದೇವರನ್ನು ಆರಾಧಿಸುವುದಿಲ್ಲ. ಅನೇಕಗಳಿಂದ ಅನೇಕವಾಗುವುದೇ ನಿಸರ್ಗದ ಸತ್ಯ. ಈ ಅನೇಕಗಳನ್ನು ಒಳಗೊಳ್ಳುವ ಪ್ರಕ್ರಿಯೆ ಅತ್ಯಂತ ಪ್ರಮುಖವಾಗಿ ನಡೆದಿದ್ದು 12ನೇ ಶತಮಾನದಲ್ಲಿ’ ಎಂದರು. ಸಾಹಿತಿ ಎಚ್.ಎಸ್. ಅನುಪಮಾ ಮಾತನಾಡಿ ‘ಬಸವಣ್ಣ ತನ್ನ ಹುಟ್ಟಿನ ಗುರುತನ್ನು ಕಳಚಿಕೊಂಡು ಹೊರಗೆ ಬಂದರು. ಇದು ಅಹಂಕಾರವನ್ನು ನಾಶ ಮಾಡಿಕೊಳ್ಳುವ ಬಹುದೊಡ್ಡ ಪ್ರಯತ್ನ’ ಎಂದು ಹೇಳಿದರು. ‘ಸಾಕಷ್ಟು ಜನ ತನ್ನ ಹಿಂದೆ ಬಂದರೂ ಎಂದಿಗೂ ಬಸವಣ್ಣ ಅಹಂಕಾರವನ್ನು ತಲೆಗೆ ಏರಿಸಿಕೊಳ್ಳಲಿಲ್ಲ. ಸಾಹಿತ್ಯ ರೈತ ಚಳವಳಿ ಕಟ್ಟುತ್ತಿರುವ ಸಂದರ್ಭದಲ್ಲಿ ನಾವು ಬಸವಣ್ಣನ ರೀತಿಯಲ್ಲಿ ಅಹಂಕಾರಗಳನ್ನು ಮೆಟ್ಟಿ ಸಾಮೂಹಿಕ ನಾಯಕತ್ವದ ಮಾದರಿ ಅನುಸರಿಸಬೇಕು’ ಎಂದು ಕಿವಿಮಾತು ಹೇಳಿದರು.
Cut-off box - ‘ಹಿತ್ತಾಳೆಯೇ ಚಿನ್ನವಾದಾಗ’ ‘ಕಬ್ಬಿಣಗಳೆಲ್ಲವೂ ಸೇರಿ ಹಿತ್ತಾಳೆಯನ್ನೇ ಚಿನ್ನವೆಂದು ತೀರ್ಮಾನಿಸುವ ಕಾಲ ಬಂದರೆ ನಿಜವಾದ ಚಿನ್ನ ಮತ್ತೆ ನೆಲದೊಳಗೆ ಹೋಗಲಿದೆ’ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಹೇಳಿದರು. ಸಮ್ಮೇಳನದಲ್ಲಿ ಗೋಷ್ಠಿಯಲ್ಲಿ ಸಮಾಜವಾದದ ನೆಲೆಯಲ್ಲಿ ಶರಣರ ಚಿಂತನೆಗಳ ಕುರಿತು ವಿಷಯ ಮಂಡಿಸಿದ ಅವರು ‘ಮತದಾರರು ಮಾಡುತ್ತಿರುವ ತಪ್ಪುಗಳಿಂದ ಸುಸಂಸ್ಕೃತರು ಸಜ್ಜನರು ಸಭ್ಯರು ವಿಚಾರವಂತರು ರಾಜಕಾರಣದಿಂದ ಹಿಂದೆ ಸರಿಯುವ ಸ್ಥಿತಿ ಬಂದಿದೆ. ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎಂದು ಬಸವಣ್ಣ ಹೇಳಿದ್ದರು. ವಿಧಾನ ಮಂಡಲ ಕಲಾಪಗಳಲ್ಲಿ ಇಂದು ಎಲ್ಲರ ಬಾಯಲ್ಲಿ ಎಲವೋ ಎಂಬ ಪದಗಳೇ ಬರುತ್ತಿವೆ. ಇದು ಅತ್ಯಂತ ವಿಷಾದದ ಸಂಗತಿ’ ಎಂದರು. ‘ರಾಜಕೀಯ ಸಾಮಾಜಿಕ ಆರ್ಥಿಕ ಸುಧಾರಣೆಗಳಾಗಬೇಕೆಂದರೆ ಯಾರಿಂದ ಆರಂಭವಾಗಬೇಕು ಎಂಬುದೇ ದೊಡ್ಡ ಸವಾಲು. ಇದಕ್ಕೆ ಬಸವಣ್ಣನ ವಚನಗಳಲ್ಲಿ ಉತ್ತರವಿದೆ’ ಎಂದು ಪ್ರತಿಪಾದಿಸಿದರು. ಸಾಹಿತಿ ರುದ್ರಸ್ವಾಮಿ ಅವರು ‘ಶ್ರಮಕ್ಕೆ ವಿಶ್ವ ಮೌಲ್ಯ ತಂದುಕೊಟ್ಟ ಶರಣರ ಸಿದ್ಧಾಂತ’ ವಿಷಯದ ಕುರಿತು ವಿಚಾರ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.