
ರವೀಶ್ ಕ್ಯಾತನಬೀಡು
ಚಿಕ್ಕಮಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿಗೆ 40 ವರ್ಷ ತುಂಬಿದ್ದು, ಇದರ ಅಂಗವಾಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಮೂರು ದಿನಗಳ ಸಂವಾದ, ವಿಚಾರಗೋಷ್ಠಿ, ಸಮಾವೇಶ ಆಯೋಜಿಸಲಾಗಿದೆ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರವೀಶ್ ಕ್ಯಾತನಬೀಡು ತಿಳಿಸಿದರು.
ಎಐಟಿ ವೃತ್ತ ಸಮೀಪದ ಒಕ್ಕಲಿಗರ ಭವನದಲ್ಲಿ ಫೆ. 9ರಿಂದ 11 ರವರೆಗೆ ಸಂವಾದ ನಡೆಯಲಿದೆ. ಫೆ. 9ರಂದು ಸಂಜೆ 4.30ಕ್ಕೆ ಕಡೂರು ಎಳನಾಡು ಸಂಸ್ಥಾನ ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಆರಂಭವಾಗಲಿವೆ. ಸಂಜೆ 5.30ಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕಾರ್ಯಕ್ರಮ ಉದ್ಘಾಟನೆ ಮಾಡುವರು. ಬಸವತತ್ವ ಪೀಠದ ಬಸವಮರುಳುಸಿದ್ಧ ಸ್ವಾಮೀಜಿ ಹಾಗೂ ಕರಡಿಗವಿ ಮಠ ಕಲ್ಮರಡೇಶ್ವರ ಶಿವಯೋಗ ತಪೋವನ ಶಿವಶಂಕರ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.
ಸಂಜೆ 7.30ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಉದ್ಘಾಟಿಸುವರು. ಫೆ. 10ರಂದು ಬೆಳಿಗ್ಗೆ 10ಕ್ಕೆ ನಡೆಯುವ ವಿಚಾರ ಸಂಕಿರಣವನ್ನು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಉದ್ಘಾಟಿಸುವರು. ಬೆಳಿಗ್ಗೆ 11.30ಕ್ಕೆ ಲೇಖಕಿ ಎಚ್.ಎಸ್. ಅನುಪಮಾ ಅವರು ‘ನಮ್ಮೊಳಗಿನ ಶೋಧನೆಗೆ ವಚನಗಳ ಓದು’, ದೇವು ಪತ್ತಾರ ಅವರು ‘ಈವರೆಗಿನ ಓದು ಮತ್ತು ಹೊಸ ಸಾಧ್ಯತೆ’ ಕುರಿತು ವಿಚಾರ ಮಂಡನೆ ಮಾಡುವರು ಎಂದು ತಿಳಿಸಿದರು.
ಮಧ್ಯಾಹ್ನ 2.30ಕ್ಕೆ ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರು ‘ವಚನ ಕ್ರಾಂತಿಯ ಮುಂದಣ ಕಥನ’, ಮೀನಾಕ್ಷಿ ಬಾಳಿ ಅವರು ‘ವಚನ-ಪ್ರತಿರೋಧದ ನೆಲೆಗಳು’, ಜೆ.ಎಸ್.ಪಾಟೀಲ್ ಅವರು ‘ವಚನ ಚಳವಳಿಗಳ ಉಗಮದ ಕಾರಣ, ಸ್ವರೂಪ ಮತ್ತು ಉದ್ದೇಶಗಳು’ ಕುರಿತು ವಿಚಾರ ಮಂಡನೆ ಮಾಡುವರು ಎಂದು ವಿವರಿಸಿದರು.
ಸಂಜೆ 5ಗಂಟೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ, ಕದಳಿ ಮಹಿಳಾ ವೇದಿಕೆ ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಘಟಕಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ಹೇಳಿದರು.
ಫೆ. 11ರಂದು ಬೆಳಿಗ್ಗೆ 10.30ಕ್ಕೆ ಸಿದ್ದನಗೌಡ ಪಾಟೀಲ್ ಅವರು ‘ಶ್ರಮಕ್ಕೆ ವಿಶ್ವ ಮೌಲ್ಯ ತಂದುಕೊಟ್ಟ ಶರಣ ಸಿದ್ದಾಂತ’, ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರು ‘ಸಮಾಜವಾದದ ನೆಲೆಯಲ್ಲಿ ಶರಣರ ಚಿಂತನೆಗಳು’, ಬಿ.ಎಲ್.ಶಂಕರ್ ಅವರು ‘ಶರಣತತ್ವ ಅರ್ಥದ ಸಮಾನ ಹಂಚಿಕೆಯ ಮಾರ್ಗ’ ಕುರಿತು ವಿಚಾರ ಮಂಡನೆ ಮಾಡುವರು ಎಂದು ತಿಳಿಸಿದರು.
ಸಂಜೆ 5.10ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ತೋಂಟದ ಸಿದ್ದರಾಮ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ಸಚಿವ ಕೆ.ಜೆ. ಜಾರ್ಜ್ ಭಾಗವಹಿಸಲಿದ್ದು, ಶಾಸಕ ಎಚ್.ಡಿ. ತಮ್ಮಯ್ಯ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಗುರುಶಾಂತಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಿ.ಎಂ. ಮಂಜುನಾಥಸ್ವಾಮಿ, ವಿಜಯಕುಮಾರ್ ಪಿಳ್ಳೇನಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.