ADVERTISEMENT

ಬೃಹತ್ ಶಿಲಾಯುಗದ ಸಮಾಧಿ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 1:58 IST
Last Updated 11 ಜನವರಿ 2021, 1:58 IST
ಬಾಳೆಹೊನ್ನೂರು ಸಮೀಪದ ಎತ್ತಿನಟ್ಟಿ ಬಳಿ ಪತ್ತೆಯಾದ ಎರಡು ಸಾವಿರ ವರ್ಷ ಹಿಂದಿನ ಶಿಲಾಯುಗದ ಸಮಾಧಿ.
ಬಾಳೆಹೊನ್ನೂರು ಸಮೀಪದ ಎತ್ತಿನಟ್ಟಿ ಬಳಿ ಪತ್ತೆಯಾದ ಎರಡು ಸಾವಿರ ವರ್ಷ ಹಿಂದಿನ ಶಿಲಾಯುಗದ ಸಮಾಧಿ.   

ಬಾಳೆಹೊನ್ನೂರು: ಕೊಪ್ಪ ತಾಲ್ಲೂಕಿನ ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಎತ್ತಿನಟ್ಟಿ ಎಂಬಲ್ಲಿ ಬೃಹತ್ ಶಿಲಾಯುಗ ಕಾಲಘಟ್ಟಕ್ಕೆ ಸೇರಿದ ನೆಲ ಸಮಾಧಿಯನ್ನು (Cist Burial) ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಪತ್ತೆ ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ‘ಈ ಪ್ರದೇಶದಲ್ಲಿ ಒಟ್ಟಿಗೆ ಇದೇ ಮಾದರಿಯ ಮೂರು ಸಮಾಧಿಗಳು ಕಂಡುಬಂದಿದ್ದು, ಪ್ರಸ್ತುತದಲ್ಲಿ ಒಂದು ಸಮಾಧಿ ಮಾತ್ರ ಸುಸ್ಥಿತಿಯಲ್ಲಿದೆ. ಈ ಸಮಾಧಿಯನ್ನು ನಾಲ್ಕು ದೊಡ್ಡ ಗಾತ್ರದ ಚಪ್ಪಡಿ ಕಲ್ಲುಗಳನ್ನು ಬಳಸಿ ಭೂಮಿಯ ಒಳಭಾಗದಲ್ಲಿ ನಿರ್ಮಿಸಿದ್ದು, ಸಮಾಧಿಯ ಮೇಲ್ಭಾಗದಲ್ಲಿ ನಿಂತುಕೊಂಡ ಸಂದರ್ಭದಲ್ಲಿ ಟೊಳ್ಳಾಗಿರುವಂತೆ ಭಾಸವಾಗುತ್ತದೆ. ಈ ರೀತಿಯ ಸಮಾಧಿಗಳಲ್ಲಿ ಮುಖ್ಯವಾಗಿ ಬೃಹತ್ ಶಿಲಾಯುಗಕ್ಕೆ ಸೇರಿದ ಮಾನವನ ಅಸ್ಥಿ ಅವಶೇಷಗಳನ್ನು, ಮಡಿಕೆಗಳನ್ನು, ಆತ ಉಪಯೋಗಿಸಿದಂತಹ ವಸ್ತುಗಳನ್ನು ಇಡಲಾಗುತ್ತದೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಕ್ಷೇತ್ರ ಕಾರ್ಯ ಶೋಧನೆ ಸಂದರ್ಭದಲ್ಲಿ ಸಮಾಧಿ ಇರುವ ಸ್ಥಳದಲ್ಲಿ ಕೆಂಪು ಕಪ್ಪು ವರ್ಣದ ಮಡಿಕೆಯ ಚೂರುಗಳು ಪತ್ತೆಯಾಗಿದ್ದು, ಇದು ಬೃಹತ್ ಶಿಲಾಯುಗದ ಸಮಾಧಿ ಎಂದು ಹೇಳಲು ಪುಷ್ಠಿಯನ್ನು ನೀಡುತ್ತದೆ. ಕಾಲಮಾನದ ದೃಷ್ಟಿಯಿಂದ ಈ ಸಮಾಧಿಗಳು ಕ್ರಿ.ಪೂ 1000 ರಿಂದ 2000 ವರ್ಷಗಳಷ್ಟು ಪ್ರಾಚೀನವಾದುದ್ದು ಎಂದು ಪುರಾತತ್ವಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂತಹುದೇ ಮಾದರಿಯ ಸಮಾಧಿಗಳನ್ನು ಈ ಹಿಂದೆ ಆರ್.ಶೇಜೇಶ್ವರ್ ಮತ್ತು ಜಿ. ಸುಂದರ್ ಅವರು ಚಿಟ್ಟೆಮಕ್ಕಿ ಮತ್ತು ಬೆಳವನಕೊಡಿಗೆಯಲ್ಲಿ ಪತ್ತೆ ಮಾಡಿದ್ದರು. ಪ್ರಸ್ತುತ ಪತ್ತೆ ಮಾಡಿರುವ ಸಮಾಧಿಗಳು ಈ ನೆಲೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿವೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಎತ್ತಿನಟ್ಟಿಯ ಫ್ರಾನ್ಸಿಸ್ ಡಿಸೋಜ ಸಂಶೋಧನೆಗೆ ಸಹಕಾರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.