ADVERTISEMENT

ಶಿರವಾಸೆ ಮುಳ್ಳೇಗೌಡರು ಮಾದರಿ ಗ್ರಾಮಕ್ಕೆ ನಾಂದಿ: ಶಾಸಕ ಎಚ್.ಡಿ.ತಮ್ಮಯ್ಯ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 15:40 IST
Last Updated 4 ಜುಲೈ 2025, 15:40 IST
ಶಿರವಾಸೆ ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ, ಸಂಸ್ಥಾಪಕರ ದಿನದ ಕಾರ್ಯಕ್ರಮವನ್ನು ಶಾಸಕ ಎಚ್.ಡಿ ತಮ್ಮಯ್ಯ ಉದ್ಘಾಟಿಸಿದರು
ಶಿರವಾಸೆ ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ, ಸಂಸ್ಥಾಪಕರ ದಿನದ ಕಾರ್ಯಕ್ರಮವನ್ನು ಶಾಸಕ ಎಚ್.ಡಿ ತಮ್ಮಯ್ಯ ಉದ್ಘಾಟಿಸಿದರು   

ಚಿಕ್ಕಮಗಳೂರು: ‘ಶಿಕ್ಷಣ, ಆರೋಗ್ಯ, ಜನರ ಬದುಕಿಗೆ ಆದ್ಯತೆ ಕೊಡುವ ಸರ್ಕಾರ ಮತ್ತು ಜನಪ್ರತಿನಿಧಿ ಮಾತ್ರ ಜನಮಾನಸದಲ್ಲಿ ಉಳಿಯುತ್ತಾರೆ’ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.

ಶಿರವಾಸೆ ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ, ಸಂಸ್ಥಾಪಕರ ದಿನಾಚರಣೆ ಎಸ್.ಬಿ. ಮುಳ್ಳೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಶುಕ್ರವಾರ ಶಾಲೆಯ ನೂತನ ಬಸ್‌ ಉದ್ಘಾಟಿಸಿ ಅವರು ಮಾತನಾಡಿದರು.

ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ವಿವೇಕಾನಂದ ವಿದ್ಯಾಸಂಸ್ಥೆ ಮಾದರಿಯಾಗಿದೆ. ವಿವಿಧ ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ತಾವು ಕನ್ನಡಪರ ಹೋರಾಟಗಳಲ್ಲಿಯೂ ಭಾಗವಹಿಸಿದ್ದ ಪರಿಣಾಮ ಸಾರ್ವಜನಿಕ ಬದುಕಿನಲ್ಲಿ ಯಶಸ್ವಿಯಾಗಲು ಸಹಕಾರಿಯಾಗಿದೆ ಎಂದರು.

ADVERTISEMENT

ಶಿರವಾಸೆ ಮುಳ್ಳೇಗೌಡರು ಶಿರವಾಸೆಯನ್ನು ಮಾದರಿ ಗ್ರಾಮವನ್ನಾಗಿ ಮಾಡಿ, ಜನರ ಬದುಕಿಗೆ ಅಗತ್ಯವಾಗಿ ಬೇಕಾಗಿದ್ದ ಆಸ್ಪತ್ರೆ, ಸೊಸೈಟಿ, ಗ್ರಾಮ ಪಂಚಾಯಿತಿ, ಶಾಲೆಯನ್ನು ತೆರೆದು ಶಿಕ್ಷಣಕ್ಕೆ ಆದ್ಯತೆ ನೀಡಿದ ಪರಿಣಾಮ ಅವರ ಜಯಂತಿ ಆಚರಿಸುತ್ತಿರುವುದು ಅರ್ಥಪೂರ್ಣ ಎಂದು ಬಣ್ಣಿಸಿದರು.

ವೀರಶೈವ ಮಠಗಳು ಉಚಿತ ಶಿಕ್ಷಣ, =ಅನ್ನದಾಸೋಹ ನಡೆಸುವ ಮೂಲಕ ಸಮಾಜದಲ್ಲಿ ಮುಂಚೂಣಿಯಲ್ಲಿವೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ₹60 ಲಕ್ಷ ವೆಚ್ಚದಲ್ಲಿ ಶಾಲೆಗೆ ವಾಹನ ಕೊಡುಗೆ ನೀಡಿದ್ದಾರೆ ಎಂದರು.

ಎಲ್ಲಾ ವರ್ಗದ ನೌಕರರು, ವ್ಯಾಪಾರಸ್ಥರು ಪ್ರತಿಭಟನೆ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ರೈತರು ಕೃಷಿ ಕಾರ್ಯವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರೆ ಪ್ರಪಂಚ ಹಸಿವಿನಿಂದ ಸಾಯಬೇಕಾಗುತ್ತದೆ. ಇದನ್ನು ಮನಗಂಡು ಅನ್ನದಾತ ಬಂಧುಗಳಿಗೆ ಸರ್ಕಾರಗಳು ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣ ಹುಲಿಯ ಹಾಲಿದ್ದಂತೆ ಎಂದು ಹೇಳಿದ್ದಾರೆ. ಶ್ರಮಪಟ್ಟು ವಿದ್ಯಾರ್ಥಿಗಳು ಶಿಕ್ಷಣವನ್ನು ಕಲಿತಾಗ ಮಾತ್ರ ಜೀವನದಲ್ಲಿ ಹುಲಿಗಳಾಗಿ ಘರ್ಜಿಸುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲ್ಲೂಕಿನಲ್ಲಿ ನಿವೇಶನ ರಹಿತರಿಗೆ ಕಳೆದ 20 ವರ್ಷಗಳಿಂದ ಮನೆ, ನಿವೇಶನ ನೀಡಲಾಗಿಲ್ಲ ಎಂದು ವಿಷಾದಿಸಿದ ಅವರು, ಅದಕ್ಕಾಗಿ ಪ್ರತಿ ಪಂಚಾಯಿತಿಯಲ್ಲಿ 5 ಎಕರೆ ಜಾಗವನ್ನು ಗುರುತಿಸಿ ಬಡವರಿಗೆ ಇನ್ನೊಂದು ವರ್ಷದಲ್ಲಿ ಸರ್ಕಾರದ ವತಿಯಿಂದ ಮನೆ, ನಿವೇಶನ ನೀಡುವುದಾಗಿ ಭರವಸೆ ನೀಡಿದರು.

ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ದೇವಣ್ಣಗೌಡ ಮಾತನಾಡಿ, 50 ವರ್ಷಗಳ ಹಿಂದೆ ಎಸ್.ಬಿ. ಮುಳ್ಳೇಗೌಡ ಅವರ ನೇತೃತ್ವದಲ್ಲಿ ದಾನಿಗಳ ಸಹಾಯದಿಂದ ವಿದ್ಯಾಸಂಸ್ಥೆ ಸ್ಥಾಪನೆ ಮಾಡಲಾಯಿತು. ಸಾವಿರಾರು ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ ಎಂದರು.

ಬೆಂಗಳೂರಿನ ಮಹಾಚಂದ್ರ ಪ್ರತಿಷ್ಠಾನ ಅಧ್ಯಕ್ಷರಾದ ಬಿ.ಎಂ. ರವಿಶಂಕರ್, ಸೋಮಶೇಖರ್, ಕೆ.ಆರ್. ಅಣ್ಣೇಗೌಡ, ಶ್ರೀಕಾಂತ್ ಶೆಟ್ಟಿ, ಎಚ್.ಪಿ. ಮಂಜೇಗೌಡ, ವೆಂಕಟಶೆಟ್ಟಿ, ಲೀಲಾ ಬಾಬುಪೂಜಾರಿ, ಶಾರದಾ ಎಸ್ ಶೆಟ್ಟಿ ಇದ್ದರು.

Cut-off box - ಹಿರಿಯ ವಿದ್ಯಾರ್ಥಿಗಳು ಶಾಲೆಗೆ ಧನಸಹಾಯ ಮಾಡಬೇಕು ದಾನಿಗಳು ಸಹಾಯ ಹಸ್ತ ನೀಡಿದರೆ ಶಿಕ್ಷಣ ಸಂಸ್ಥೆ ಯಶಸ್ವಿಯಾಗಿ ನಡೆಯುತ್ತದೆ ಎಂಬುದಕ್ಕೆ ವಿವೇಕಾನಂದ ವಿದ್ಯಾಸಂಸ್ಥೆ ಉದಾಹರಣೆಯಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ವ್ಯಾಸಂಗ ಮಾಡಿದ ಶಾಲೆಗೆ ಧನಸಹಾಯ ಮಾಡಿದರೆ ಸಂಸ್ಥೆ ಇನ್ನಷ್ಟು ಉತ್ತಮವಾಗಿ ಬೆಳೆಯುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಬಿ.ಎಂ. ಭೋಜೇಗೌಡ  ಹೇಳಿದರು. ಶಾಲೆಯಲ್ಲಿ ಹೊಸದಾಗಿ ಸಾರಿಗೆ ವ್ಯವಸ್ಥೆ ವಿದ್ಯಾನಿಧಿ ದತ್ತಿನಿಧಿ ಮುಂತಾದ ಬಹು ಉಪಯೋಗಿ ಉತ್ತಮ ಕಾರ್ಯಕ್ರಮಗಳನ್ನು ಆರಂಭಿಸಲಾಗಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.